ಶುಕ್ರವಾರ, ಜನವರಿ 22, 2021
28 °C

ತ್ಯಾಗ ಮಾಡಿ ಬಂದವರ ಋಣ ತೀರಿಸಲು ಸಚಿವ ಸ್ಥಾನ ಕೊಡಲೇಬೇಕು: ಕೆ.ಎಸ್. ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

KS Eshwarappa

ಬೆಳಗಾವಿ: ಶಾಸಕ ಸ್ಥಾನ ಹಾಗೂ ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ರಾಜೀನಾಮೆ ನೀಡಿ ತ್ಯಾಗ ಮಾಡಿ ಬಂದಿರುವವರ ಋಣವನ್ನು ತೀರಿಸಲೇಬೇಕು. ಹೀಗಾಗಿ ಅವರೆಲ್ಲರಿಗೂ ಸಚಿವ ಸ್ಥಾನ ನೀಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಇಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 'ಬಿಜೆಪಿಗೆ ಜನರು ಬಹುಮತ ಕೊಡಲಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿ ಅತೃಪ್ತರಾದವರು ನಮ್ಮಲ್ಲಿಗೆ ಬಂದಿದ್ದಾರೆ. ಹೀಗಾಗಿ ಸರ್ಕಾರ ರಚನೆಯಾಗಿದೆ. ಅವರ ಋಣ ತೀರಿಸುವ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಹಿರಿಯ ಶಾಸಕರು ಹಾಗೂ ಪಕ್ಷದ ಸಂಘಟನೆಗೆ ಹಿಂದಿನಿಂದಲೂ ಶ್ರಮಿಸಿದವರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ಅಪೇಕ್ಷಿತರು ಜಾಸ್ತಿ ಇದ್ದಾರೆ. ಆದರೆ ಸಚಿವ ಸ್ಥಾನ ಕಡಿಮೆ ಇವೆ. ಅದೆಲ್ಲವನ್ನೂ ಪಕ್ಷದ ವೇದಿಕೆಯಲ್ಲಿ ಹಿರಿಯರು ಚರ್ಚಿಸಿ ಬಗೆಹರಿಸುತ್ತಾರೆ' ಎಂದರು.

'ಪಕ್ಷದಲ್ಲೀಗ ಮೂಲ ಅಥವಾ ವಲಸಿಗರು ಎನ್ನುವುದೇನಿಲ್ಲ. ಎಲ್ಲರೂ ಬಿಜೆಪಿ ಕಾರ್ಯಕರ್ತರೆ. ರಮೇಶ ಜಾರಕಿಹೊಳಿ ಹಾಗೂ ಅವರ ತಂಡದವರು ಸಕ್ರಿಯವಾಗಿ ಚಟುವಟಿಕೆಗಳನ್ನು ನಡೆಸಿದ್ದರಿಂದಲೇ ನಮ್ಮ ಸರ್ಕಾರ ಬಂದಿದೆ. ಈಗ ಅವರು ತಮ್ಮವರಿಗೆ ಸಚಿವ ಸ್ಥಾನ ಕೊಡಿಸಲು ಚಟುವಟಿಕೆ ನಡೆಸಿದ್ದರೆ ತಪ್ಪೇನಿದೆ?' ಎಂದು ಕೇಳಿದರು.

'ಉಪ ಚುನಾವಣೆಯಲ್ಲಿ ಟಿಕೆಟ್ ಕೊಡಬೇಕು ಹಾಗೂ ಗೆದ್ದ ನಂತರ ಸಚಿವ ಸ್ಥಾನವನ್ನೂ ಕೊಡಬೇಕು ಎಂದು ವರಿಷ್ಠರ ಜೊತೆ ಮಾತುಕತೆ ನಡೆಸಿಕೊಂಡೇ ಅವರು ಬಿಜೆಪಿಗೆ ಬಂದಿದ್ದಾರೆ'. 'ಶಾಸಕರು, ನಾಯಕರು ನೀಡುವ ಹೇಳಿಕೆಗಳು ವೈಯಕ್ತಿಕವೇ ಹೊರತು ಪಕ್ಷದ್ದಲ್ಲ. ಯಾರನ್ನು ಸಚಿವರನ್ನಾಗಿ ಮಾಡಬೇಕು ಅಥವಾ ಬಿಡಬೇಕು ಎನ್ನುವುದನ್ನು ಪಕ್ಷ ತೀರ್ಮಾನಿಸುತ್ತದೆ' ಎಂದರು.

'ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಡ್ಡಗೋಡೆ ಮೇಲೆ ದೀಪ ಇಟ್ಟ ಸ್ಥಿತಿಯಲ್ಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ಆಗುತ್ತೇನೆ ಎಂಬ ಕನಸು ಕಾಣುತ್ತಿದ್ದಾರೆ. ಕೇಂದ್ರದ ನಾಯಕರಿಗೆ ರಾಜ್ಯ ಕಾಂಗ್ರೆಸ್ ನಾಯಕರ ಬಗ್ಗೆ ವಿಶ್ವಾಸವಿಲ್ಲ' ಎಂದು ಟೀಕಿಸಿದರು.

'ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಕೆಳಗಿಳಿಯುತ್ತಾರೆ ಎಂದು ಸಿದ್ದರಾಮಯ್ಯ ಹೇಳಿರುವುದು ಹುಚ್ಚು ಹೇಳಿಕೆಯಲ್ಲದೇ ಮತ್ತೇನೂ ಇಲ್ಲ. ಅಂತಹ ಯಾವುದೇ ಬೆಳವಣಿಗೆ ನಮ್ಮಲ್ಲಿ ನಡೆದಿಲ್ಲ. ಮುಖ್ಯಮಂತ್ರಿ ಆಗಿದ್ದವರು ಹೀಗೆ ಹೇಳಿಕೆ ನೀಡಬಾರದು. ವಿಧಾನಸಭೆ ವಿರೋಧ ಪಕ್ಷದ ನಾಯಕರಾದವರು ನಾವೇನಾದರೂ ತಪ್ಪು ಮಾಡಿದರೆ ತಿದ್ದಬೇಕು' ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು