ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನೆ ಪ್ರಯೋಗಾಲಯಕ್ಕೆ ಸೀಮಿತವಾಗದಿರಲಿ: ಸಚಿವ ಶಿವಾನಂದ ಪಾಟೀಲ

ಸಕ್ಕರೆ ಕಾರ್ಖಾನೆಗಳಿಗೆ ಪ್ರಶಸ್ತಿ ಪ್ರದಾನ * ಸಚಿವ ಶಿವಾನಂದ ಪಾಟೀಲ ಕರೆ
Published 22 ಡಿಸೆಂಬರ್ 2023, 12:58 IST
Last Updated 22 ಡಿಸೆಂಬರ್ 2023, 12:58 IST
ಅಕ್ಷರ ಗಾತ್ರ

ಬೆಳಗಾವಿ: ‘ರೈತರು ಸಾಂಪ್ರದಾಯಿಕ ಪದ್ಧತಿಯಿಂದ ಹೊರಬಂದು ವೈಜ್ಞಾನಿಕವಾಗಿ ಕೃಷಿ ಮಾಡಬೇಕು. ಇದಕ್ಕೆ ಪೂರಕವಾಗಿ ಕೈಗೊಳ್ಳಲಾಗುವ ಸಂಶೋಧನೆಗಳು ಪ್ರಯೋಗಾಲಯಕ್ಕೆ ಸೀಮಿತವಾಗಬಾರದು. ಸಂಶೋಧಕರು ರೈತರ ಬಳಿಯೇ ಹೋಗಿ ಅಧ್ಯಯನ ಮಾಡಬೇಕು’ ಎಂದು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಇಲ್ಲಿನ ಎಸ್‌.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 2022-23ನೇ ಸಾಲಿನ ಹಂಗಾಮಿನಲ್ಲಿ ಸಾಧನೆಗೈದ ಸಕ್ಕರೆ ಕಾರ್ಖಾನೆಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದ ‌ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಈ ಸಂಸ್ಥೆಯ ವಿದ್ಯಾರ್ಥಿಗಳು ಪಠ್ಯಕ್ರಮ ಕಲಿಕೆಗೆ ಸೀಮಿತವಾಗದೆ, ಪ್ರಾಯೋಗಿಕ ಕಲಿಕೆಗೆ ಒತ್ತು ನೀಡಬೇಕು. ಇಲ್ಲಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗುವುದು’ ಎಂದರು.

‘ದೇಶದಲ್ಲಿ ಈ ಹಿಂದೆ ಸಕ್ಕರೆ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇತ್ತು. ಆದರೆ, ಇಂದು ಭಾರತದಲ್ಲಿ ಸಕ್ಕರೆ ಉದ್ಯಮ ಸಾಕಷ್ಟು ಬೆಳೆದಿದೆ. ಇದು ದೇಶಕ್ಕೆ ಉತ್ತಮ ಆದಾಯ ತಂದುಕೊಡುತ್ತಿದೆ. ದುಡಿಯುವ ಕೈಗಳಿಗೆ ಕೆಲಸ ನೀಡುತ್ತಿದೆ. ಅನೇಕ ರಂಗಗಳಿಗೂ ಕೊಡುಗೆ ನೀಡಿದೆ. ಈಗ ದೇಶದ ಸಕ್ಕರೆ ಉದ್ಯಮದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದ್ದು, ಮುಂದಿನ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕಿದೆ’ ಎಂದು ಹೇಳಿದರು.

‘ಈಗ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಜತೆಗೆ, ಎಥೆನಾಲ್‌ ಕೂಡ ಉತ್ಪಾದಿಸುತ್ತಿವೆ. ಈ ಬೆಳವಣಿಗೆ ಗಮನಿಸಿದರೆ, ದೇಶದಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಇನ್ನೂ 100 ವರ್ಷ ಉತ್ತಮ ಭವಿಷ್ಯವಿದೆ. ಸಕ್ಕರೆ ಕಾರ್ಖಾನೆಗಳು ಇತರೆ ರಾಜ್ಯದವರಿಗೂ ಮಾದರಿಯಾಗುವಂತೆ ಕಾರ್ಯನಿರ್ವಹಿಸಬೇಕು’ ಎಂದರು.

‘ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯು ಸಕ್ಕರೆ ಕಾರ್ಖಾನೆಗಳ ಕೊಡುಗೆಯಿಂದ ಬೆಳೆಯಬೇಕು. ಹಾಗಾಗಿ ಕಾರ್ಖಾನೆಗಳು ಸಂಸ್ಥೆಯೊಂದಿಗೆ ಸಂಘರ್ಷಕ್ಕಿಳಿಯದೆ, ಸಾಮರಸ್ಯದಿಂದ ಕೆಲಸ ಮಾಡಬೇಕು. ರಾಜ್ಯ ಸರ್ಕಾರದಿಂದ ಕಾರ್ಖಾನೆಗಳಿಗೆ ಪ್ರೋತ್ಸಾಹ ಕಡಿಮೆ ಇರಬಹುದು. ಆದರೆ, ಸರ್ಕಾರ ಸದಾ ನಿಮ್ಮ ಜತೆಗಿದೆ. ಸಾಕಷ್ಟು ಸಹಾಯ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ 2022-23ನೇ ಶೈಕ್ಷಣಿಕ ಸಾಲಿನ ಪರೀಕ್ಷೆಗಳಲ್ಲಿ ಸಾಧನೆ ಮೆರೆದ ವಿವಿಧ ಕೋರ್ಸ್‌ಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಿಚರ್ಡ್‌ ವಿನ್ಸಂಟ್‌ ಡಿಸೋಜಾ, ಕಬ್ಬು ಅಭಿವೃದ್ಧಿ ಆಯುಕ್ತ ಮತ್ತು ಸಕ್ಕರೆ ನಿರ್ದೇಶಕ ಎಂ.ಆರ್‌.ರವಿಕುಮಾರ, ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಉಪಾಧ್ಯಕ್ಷ ರಮೇಶ ಪಟ್ಟಣ, ನಿರ್ದೇಶಕ ಡಾ.ಆರ್.ಬಿ.ಖಾಂಡಗಾವೆ, ಸದಸ್ಯರಾದ ಅಜಿತ ದೇಸಾಯಿ, ಅಶೋಕ ಪಾಟೀಲ, ಮಲ್ಲಿಕಾರ್ಜುನ ಹೆಗ್ಗಳಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT