ರಾಮದುರ್ಗ: ಹತ್ತು ವರ್ಷಗಳ ನಂತರ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಬಿಜೆಪಿಯ ಮಹಾದೇವಪ್ಪ ಯಾದವಾಡ ಅವರು ಈವರೆಗೆ ದೊರೆತಿರುವ ಪ್ರದೇಶಾಭಿವೃದ್ಧಿ ನಿಧಿಯನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದಾರೆ.
ಮೂರೂವರೆ ವರ್ಷದಲ್ಲಿ ಸರ್ಕಾರದಿಂದ ಬಿಡುಗಡೆಯಾದ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ₹ 4.10 ಕೋಟಿ ಅನುದಾನದಲ್ಲಿ ಹೆಚ್ಚಿನ ಪ್ರಮಾಣದ ಹಣವನ್ನು ಗ್ರಾಮೀಣ ಪ್ರದೇಶದ ಸಮುದಾಯ ಭವನಗಳಿಗೆ ಹಂಚಿಕೆ ಮಾಡಿದ್ದಾರೆ. ಅಷ್ಟು ಹಣವನ್ನು ಬಳಸಿದ್ದಾರೆ.
ಸಮುದಾಯ ಭವನಗಳು, ದೇವಸ್ಥಾನದ ಅಭಿವೃದ್ಧಿಗಳು, ಶಾಲಾ ಕೊಠಡಿಗಳು, ಬಸ್‌ನಿಲ್ದಾಣದ ನಿರ್ಮಾಣ, ಗ್ರಂಥಾಲಯ ನಿರ್ಮಾಣ, ಪೊಲೀಸರಿಗೆ ವಾಹನ, ರಸ್ತೆ ಸುಧಾರಣೆ, ಜಿಮ್ ಸಲಕರಣೆ, ರಂಗಮಂದಿರಗಳ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಹಣ ಹಂಚಿಕೆ ಮಾಡಿದ್ದಾರೆ. ಬಹುತೇಕ ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ.
ಆರೋಗ್ಯ ಕ್ಷೇತ್ರಕ್ಕೂ ಹಣ ಹಂಚಿಕೆ: ಶಾಸಕರ ಪ್ರದೇಶಾಭಿವೃದ್ಧಿ ಹಣದಲ್ಲಿ ಸರ್ಕಾರಿ ಆಸ್ಪತ್ರೆಯ ಅಗತ್ಯ ಸಲಕರಣೆಗಳ ಖರೀದಿಗೆ ಹಣ ವಿನಿಯೋಗಿಸಿದ್ದಾರೆ. ಅದರಲ್ಲಿ ಕೋವಿಡ್ ರೋಗಿಗಳ ಅನುಕೂಲಕ್ಕಾಗಿ ಆಮ್ಲಜನಕ ಸಾಂದ್ರಕ, ಅಂಬುಲೆನ್ಸ್ ಸೇರಿದಂತೆ ಅಗತ್ಯ ಉಪಕರಣಗಳ ಖರೀದಿಗೂ ₹50 ಲಕ್ಷ ಅನುದಾನ ನೀಡಿದ್ದಾರೆ.
ದೇವಾಲಯಗಳಲ್ಲದೇ, ದರ್ಗಾಗಳ ಅಭಿವೃದ್ಧಿಗೂ ಹಣ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಮುಖ್ಯವಾಗಿ ಕಿತ್ತೂರಿನ ಹಟೇಲ್‌ಭಾಷಾ ದರ್ಗಾ ಸಮೀಪ ಸಮುದಾಯ ಭವನ ನಿರ್ಮಾಣಕ್ಕೆ ₹ 10 ಲಕ್ಷ ವಿನಿಯೋಗಿಸಲಾಗಿದೆ.
ಈವರೆಗೆ ಬರಬೇಕಿದ್ದ ಒಟ್ಟು ₹ 8 ಕೋಟಿ ಅನುದಾನದಲ್ಲಿ ₹ 4.10 ಕೋಟಿ ಅನುದಾನ ಬಿಡುಗಡೆಯಾಗಿದೆ. ಉಳಿದಂತೆ ಇನ್ನೂ ₹ 3.90 ಕೋಟಿ ಅನುದಾನ ಸರ್ಕಾರದಿಂದ ಬಿಡುಗಡೆ ಆಗಬೇಕಿದೆ. ಆದಾಗ್ಯೂ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಪೇವರ್ಸ್ ಅಳವಡಿಕೆ ಮತ್ತು ಉದ್ಯಾನ ನಿರ್ಮಾಣಕ್ಕೆ ₹ 10 ಲಕ್ಷ ಕೊಟ್ಟಿದ್ದಾರೆ.
‘ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಎಂದರೆ ಅಧಿಕಾರಿಗಳು ಮೂಗು ಮುರಿಯುತ್ತಾರೆ. ಈ ನಿಧಿಯಲ್ಲಿ ಕಾಮಗಾರಿಗಳನ್ನು ನಡೆಸಲು ಹಿಂದೆ ಲೋಕೋಪಯೋಗಿ ಇಲಾಖೆಗೆ ನೀಡಲಾಗುತ್ತಿತ್ತು. ಆದರೆ, ಅವರು ನಿರ್ಲಕ್ಷ್ಯ ವಹಿಸಿದ್ದರಿಂದಾಗಿ ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗದವರಿಂದ ಕಾಮಗಾರಿಗಳನ್ನು ಮಾಡಿಸಲಾಗುತ್ತಿದೆ’ ಎಂದು ಶಾಸಕ ಮಹಾದೇವಪ್ಪ ಯಾದವಾಡ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.