ಮಂಗಳವಾರ, ಜನವರಿ 25, 2022
25 °C
ಅನುಮಾನಕ್ಕೆ ಕಾರಣವಾದ ಡಿಸಿಸಿ ಬ್ಯಾಂಕ್‌ ನಿರ್ದೇಶಕರ ಹೇಳಿಕೆ

ಪರಿಷತ್ ಚುನಾವಣೆ: ಬೆಳಗಾವಿಯಲ್ಲಿ ಕಾಂಗ್ರೆಸ್‌ ಪರ ಸ್ವಾಮೀಜಿ ಪ್ರಚಾರ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ವಿಧಾನಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಅವರನ್ನು ಗೆಲ್ಲಿಸುವಂತೆ ಲಿಂಗಾಯತ ಪಂಚಮಸಾಲಿ ಸಮಾಜದ ಸ್ವಾಮೀಜಿಯೊಬ್ಬರು ಮುಖಂಡರಿಗೆ ಕರೆ ಮಾಡಿರುವ ಸಂಗತಿ ಬಯಲಾಗಿದೆ.

ಈ ವಿಷಯವನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಆಪ್ತರೂ ಆಗಿರುವ ರಾಜೇಂದ್ರ ಅಂಕಲಗಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

‘ವಿಧಾನಪರಿಷತ್‌ ಚುನಾವಣೆಯಲ್ಲಿ ಪಂಚಮಸಾಲಿ ಸಮಾಜದ ಅಭ್ಯರ್ಥಿ ಬೆಂಬಲಿಸುವಂತೆ ಒತ್ತಡ ಹಾಕುವುದಕ್ಕಾಗಿ ಸ್ವಾಮೀಜಿಯೊಬ್ಬರು ನನಗೆ ಕರೆ ಮಾಡಿದ್ದರು’ ಎಂದು ಶ್ರೀಗಳ ಹೆಸರು ಪ್ರಸ್ತಾಪಿಸದೆ ಅವರು ನೀಡಿರುವ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಹಿರೇಬಾಗೇವಾಡಿಯಲ್ಲಿ ಜಾರಕಿಹೊಳಿ ಬೆಂಬಲಿಗರು ಈಚೆಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ್ದ ರಾಜೇಂದ್ರ, ‘ನನಗೆ ಕರೆ ಮಾಡಿದ್ದ ಸ್ವಾಮೀಜಿ ನೀವು ಜಾರಕಿಹೊಳಿಗಳ ಬೆನ್ನಿಗೆ ನಿಂತಿದ್ದೀರಂತೆ. ನಮ್ಮವರನ್ನು ಬೆಂಬಲಿಸಬೇಕು. ಸಮಾಜ ಹಾಳಾಗಲು ಬಿಡಬೇಡಿ ಎಂದು ತಿಳಿಸಿದರು’ ಎಂದು ಹೇಳಿದ್ದಾರೆ.

‘ಆಗುವುದಿಲ್ಲ ಎಂದು ಅವರಿಗೆ ಹೇಳಿದ್ದೆ. ಇರುವುದು ಎರಡೇ ಜಾತಿ. ಒಂದು ಹೆಣ್ಣು, ಇನ್ನೊಂದು ಗಂಡು. ಧರ್ಮ ಒಂದೇ ಮಾನವ ಧರ್ಮ ಎನ್ನುವ ಸಂಸ್ಕಾರವನ್ನು ಮನೆಯಲ್ಲಿ ಕಲಿಸಿದ್ದಾರೆ. ನೀವು ಖಾವಿ ಧರಿಸಿ ಧರ್ಮ ಒಡೆಯುವ ಕೆಲಸ ಮಾಡಬೇಡಿ. ಧರ್ಮಪೀಠದಲ್ಲಿರುವವರು ಸಮಾಜ ಸುಧಾರಿಸಬೇಕು. ರಾಜಕಾರಣ ಮಾಡುವುದಿದ್ದರೆ ಖಾವಿ ತೆಗೆಯಿರಿ; ರಾಜಕಾರಣ ಮಾಡಬೇಡಿ ಎಂದು ಬುದ್ಧಿ ಹೇಳಿದೆ. ಎಷ್ಟು ಸಾಧ್ಯವೋ ಅಷ್ಟು ಒತ್ತಡ ಹಾಕಿಸುತ್ತಿದ್ದಾರೆ’ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ದೂರಿದ್ದರು.

ಇದಾದ ಬಳಿಕ, ಪಂಚಮಸಾಲಿ ಸಮಾಜದ ಕೆಲವರು ರಾಜೇಂದ್ರ ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜೇಂದ್ರ ಅವರು ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು