ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾನಾಪುರ: ತಬ್ಬಲಿಯಾದ ‘ತಾಯಿ ಮತ್ತು ಮಕ್ಕಳ ಆಸ್ಪತ್ರೆ’

₹15 ಕೋಟಿ ವೆಚ್ಚದಲ್ಲಿ 60 ಹಾಸಿಗೆಗಳ ಅಸ್ಪತ್ರೆ ಸಿದ್ಧ; ಶಾಸಕ– ಮಾಜಿ ಶಾಸಕಿ ನಿರಾಸಕ್ತಿಯಿಂದ ಹಿನ್ನಡೆ
Published 17 ಫೆಬ್ರುವರಿ 2024, 8:28 IST
Last Updated 17 ಫೆಬ್ರುವರಿ 2024, 8:28 IST
ಅಕ್ಷರ ಗಾತ್ರ

ಖಾನಾಪುರ: ಇಲ್ಲಿನ ತಾಲ್ಲೂಕು ಆಸ್ಪತ್ರೆ ಆವರಣದಲ್ಲಿ ₹15 ಕೋಟಿ ವೆಚ್ಚದಲ್ಲಿ ನಿರ್ಮಿಸಿದ 60 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಉದ್ಘಾಟನೆಗೆ ಕಾಯುತ್ತಿದೆ. ಕಟ್ಟಡ ಪೂರ್ಣಗೊಂಡು ವರ್ಷವಾದರೂ ಜನಪ್ರತಿನಿಧಿಗಳು ಇದನ್ನು ಜನರಿಗೆ ಸಮರ್ಪಿಸಲು ಸಿದ್ಧರಿಲ್ಲ.

ತಾಲ್ಲೂಕು ಆಸ್ಪತ್ರೆಯು 260 ಹಳ್ಳಿಗಳ ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿದೆ. ಆಸ್ಪತ್ರೆಯ ಅಂಗಳ ಸದಾ ಜನದಟ್ಟಣೆಯಿಂದ ಕೂಡಿರುತ್ತದೆ. ಸ್ಥಳಾವಕಾಶ, ಸಿಬ್ಬಂದಿ ಹಾಗೂ ವೈದ್ಯರ ಅಭಾವ ಎದುರಿಸುತ್ತಿದೆ. ಈ ಆಸ್ಪತ್ರೆಗೆ ದಾಖಲಾಗುವ ಗರ್ಭಿಣಿಯರು, ಬಾಣಂತಿಯರು, ನವಜಾತ ಶಿಶುಗಳ ಚಿಕಿತ್ಸೆ ಹಾಗೂ ಆರೈಕೆಗೆ ಸಮಸ್ಯೆ ಉಂಟಾಗುತ್ತಿದೆ.

ಈ ಸಮಸ್ಯೆ ಮನಗಂಡ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳಕರ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ತಾಲ್ಲೂಕು ಆಸ್ಪತ್ರೆ ಆವರಣದಲ್ಲೇ 60 ಹಾಸಿಗೆಗಳ ಸಾಮರ್ಥ್ಯದ ತಾಯಿ ಮತ್ತು ಮಗುವಿನ ಆಸ್ಪತ್ರೆ ಮಂಜೂರು ಮಾಡಿಸಿದ್ದರು. 2022ರಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಿ, 2023ರ ಮಾರ್ಚ್‌ನಲ್ಲಿ ಪೂರ್ಣಗೊಂಡಿತ್ತು.

ಈಗ ವೈದ್ಯಕೀಯ ಉಪಕರಣಗಳು ಮತ್ತು ಸಿಬ್ಬಂದಿ ಒದಗಿಸಿದರೆ, ಆಸ್ಪತ್ರೆ ಕಾರ್ಯಾರಂಭ ಮಾಡಲಿದೆ. ತಾಯಿ ಮತ್ತು ಮಗುವಿನ ಆಸ್ಪತ್ರೆ ಆರಂಭಗೊಂಡಲ್ಲಿ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಪ್ರಸವಪೂರ್ವ ಹಾಗೂ ನಂತರದ ಚಿಕಿತ್ಸೆಗಳು, ಮಕ್ಕಳಿಗೆ ವಿಶೇಷ ಚಿಕಿತ್ಸೆ ಮತ್ತು ಆರೈಕೆ ಲಭ್ಯವಾಗಲಿದೆ. ಜತೆಗೆ ಈಗಿರುವ ತಾಲ್ಲೂಕು ಆಸ್ಪತ್ರೆಯಲ್ಲಿ ಉಂಟಾಗುತ್ತಿರುವ ಜನದಟ್ಟಣೆಯೂ ನಿಯಂತ್ರಣಕ್ಕೆ ಬರಲಿದೆ.

‘ಶಸ್ತ್ರ ಚಿಕಿತ್ಸಾ ಕೊಠಡಿ, ತೀವ್ರ ನಿಗಾ ಘಟಕದ ಪರಿಕರಗಳು, ನವಜಾತ ಶಿಶುಗಳಿಗೆ ಇನ್ಸುಲೇಟರ್, ಅಗತ್ಯ ಪೀಠೋಪಕರಣ ಮತ್ತು ವೈದ್ಯಕೀಯ ಉಪಕರಣಗಳು ಇನ್ನೂ ಬಂದಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವೈದ್ಯರು ಮತ್ತು ಸಿಬ್ಬಂದಿ ನಿಯೋಜನೆ ಕಾರ್ಯ ಪೂರ್ಣವಾಗಿಲ್ಲ. ಹೀಗಾಗಿ ಆಸ್ಪತ್ರೆ ಕಾರ್ಯನಿರ್ವಹಣೆ ಆರಂಭವಾಗಲು ವಿಳಂಬವಾಗಿದೆ’ ಎನ್ನುತ್ತವೆ ಮೂಲಗಳು.

‘ಮಾಜಿ ಶಾಸಕಿ ಅಂಜಲಿ ಹಾಗೂ ಹಾಲಿ ಶಾಸಕ ವಿಠ್ಠಲ ಹಲಗೇಕರ ನಡುವಿನ ಶೀತಲ ಸಮರಕ್ಕೆ ಹೊಸ ಆಸ್ಪತ್ರೆ ಬಲಿಪಶುವಾಗಿದೆ’ ಎಂದು ತಾಲ್ಲೂಕಿನ ಜನತೆ ಆರೋಪಿಸುತ್ತಾರೆ.

‘ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವ ಕಾರಣ ಶಾಸಕ ವಿಠ್ಠಲ ಹಲಗೇಕರ ಆಸ್ಪತ್ರೆ ಉದ್ಘಾಟಿಸಲು ಮನಸ್ಸು ಮಾಡುತ್ತಿಲ್ಲ. ಇದಕ್ಕೆ ತದ್ವಿರುದ್ಧವಾಗಿ ಡಾ.ಅಂಜಲಿ ಸಹ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿಗೆ ‘ಕ್ರೆಡಿಟ್‌’ ಹೋಗುತ್ತದೆ ಎಂದು ಹಿಂಜರಿಯುತ್ತಿದ್ದಾರೆ’ ಎಂಬುದು ಎಂಇಎಸ್ ಮುಖಂಡ ಮುರಳೀಧರ ಪಾಟೀಲ ಆರೋಪ.

ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಅಗತ್ಯ ವ್ಯವಸ್ಥೆ ಮಾಡಿ ಉದ್ಘಾಟಿಸಬೇಕು. ಶೀಘ್ರ ಕಾರ್ಯಾರಂಭಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಅವರಿಗೆ ಒತ್ತಾಯಿಸಲಾಗುವುದು
ವಿಠ್ಠಲ ಹಲಗೇಕರ ಶಾಸಕ
ಆಸ್ಪತ್ರೆ ಇನ್ನೂ ಇಲಾಖೆಗೆ ಹಸ್ತಾಂತರಗೊಂಡಿಲ್ಲ. ಸಿಬ್ಬಂದಿ ನಿಯೋಜನೆ ವೈದ್ಯಕೀಯ ಉಪಕರಣಗಳ ವ್ಯವಸ್ಥೆ ಸಹ ಬಾಕಿ ಇದೆ. ಹೊಸ ಶಾಸಕರು ಇತ್ತ ಗಮನಹರಿಸುತ್ತಿಲ್ಲ
ಡಾ.ಅಂಜಲಿ ನಿಂಬಾಳಕರ ಮಾಜಿ ಶಾಸಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT