ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದ ಜೊಲ್ಲೆಗೆ ಘೇರಾವ್‌ ಹಾಕಿದ ಗ್ರಾಮಸ್ಥರು

ನೆರೆ ಸಂತ್ರಸ್ತರಿಗೆ ಸ್ಪಂದಿಸದ ಆರೋಪ ; ಹೆಚ್ಚಿನ ಹಣ ಬಿಡುಗಡೆಗೆ ಒತ್ತಾಯ
Last Updated 12 ಅಕ್ಟೋಬರ್ 2019, 13:39 IST
ಅಕ್ಷರ ಗಾತ್ರ

ಬೆಳಗಾವಿ: ‘ನೆರೆ ಪರಿಹಾರ ದೊರಕಿಸಿ ಕೊಡಲು ಸಾಧ್ಯವಾಗದ ನೀವು ಇಲ್ಲೇಕೆ ಬಂದಿದ್ದೀರಿ’ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಹುದಲಿ ಗ್ರಾಮಸ್ಥರು ಶನಿವಾರ ತರಾಟೆ ತೆಗೆದುಕೊಂಡರು.

ಮಹಾತ್ಮಾ ಗಾಂಧೀಜಿ ಅವರ 150ನೇ ಜಯಂತಿ ನಿಮಿತ್ತ ಅಣ್ಣಾಸಾಹೇಬ ಜೊಲ್ಲೆ ಅವರು ಗ್ರಾಮದಲ್ಲಿ ಪಾದಯಾತ್ರೆ ಹಮ್ಮಿಕೊಂಡಿದ್ದರು.

ಈ ವೇಳೆ ಅವರನ್ನು ಘೇರಾವ್‌ ಹಾಕಿದ ಗ್ರಾಮಸ್ಥರು, ‘ನೆರೆ ಬಂದ ಸಂದರ್ಭದಲ್ಲಿ ನಮ್ಮ ಸಹಾಯಕ್ಕೆ ಬರಲಿಲ್ಲ. ನಮ್ಮ ಕಷ್ಟ ಸುಖ ಕೇಳಲು ಬರಲಿಲ್ಲ. ಈಗ ಯಾತಕ್ಕಾಗಿ ಬಂದಿದ್ದೀರಿ’ ಎಂದು ಪ್ರಶ್ನಿಸಿದರು.

‘ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಹಲವು ಜನರ ಮನೆಗಳು ಕುಸಿದು ಬಿದ್ದಿವೆ. ಬೆಳೆ ಹಾನಿಯಾಗಿದೆ. ಎಷ್ಟೇ ಒತ್ತಾಯಿಸಿದರೂ ಕೇಂದ್ರ ಸರ್ಕಾರ ಸಮರ್ಪಕವಾಗಿ ಪರಿಹಾರ ಬಿಡುಗಡೆ ಮಾಡುತ್ತಿಲ್ಲ. ₹ 35,000 ಕೋಟಿಗಿಂತಲೂ ಹೆಚ್ಚು ಖರ್ಚಾಗಿದ್ದರೂ ಕೇವಲ ₹ 1,200 ಕೋಟಿ ಮಾತ್ರ ಬಿಡುಗಡೆ ಮಾಡಿದೆ. ಇದು ಯಾವುದಕ್ಕೂ ಸಾಲದು. ಇನ್ನಷ್ಟು ಹೆಚ್ಚಿನ ಹಣ ಬಿಡುಗಡೆ ಮಾಡಿಸಿ’ ಎಂದು ಒತ್ತಾಯ ಹೇರಿದರು.

ಅಣ್ಣಾಸಾಹೇಬ ಅವರು ಸಮಜಾಯಿಷಿ ನೀಡಲು ಮುಂದಾದರು. ಆದರೆ, ಅವರ ಮಾತನ್ನು ಗ್ರಾಮಸ್ಥರು ಕೇಳಿಕೊಳ್ಳಲಿಲ್ಲ. ಇದರಿಂದ ಬೇಸರವಾಗಿ ಅವರು ಹೊರಟುಹೋದರು.

ಮುಂದುವರಿಸಿದ ಪಾದಯಾತ್ರೆ:

‘ಪಕ್ಷದ ವರಿಷ್ಠರ ಸೂಚನೆಯ ಮೇರೆಗ ಪಾದಯಾತ್ರೆ ಆರಂಭಿಸಿದ್ದೇನೆ. ಹುದಲಿಯಿಂದ ಆರಂಭಿಸಿ, ಚಂದಗಡ, ಅಷ್ಟೇ, ಮುಚ್ಚಂಡಿ, ಕಲಕಾಂಬ, ಕಾಕತಿ, ಮುಕ್ತಿಮಠ, ಯಮಕನಮರಡಿ, ಹತ್ತರಗಿ, ಉ-ಖಾನಾಪೂರ, ಚಿಕ್ಕಾಲಗುಡ್ಡ, ಹೆಬ್ಬಾಳದಲ್ಲಿ ಮುಕ್ತಾಯಗೊಳಿಸುವೆ’ ಎಂದರು.

‘13ರಂದು ನಿಪ್ಪಾಣಿ ಕ್ಷೇತ್ರದಲ್ಲಿ ಪಾದಯಾತ್ರೆ ನಡೆಸುತ್ತೇನೆ. ಮಹಾರಾಷ್ಟ್ರ ರಾಜ್ಯದ ವಿಧಾನಸಭೆ ಚುನಾವಣೆಯ ಜವಾಬ್ದಾರಿ ಇರುವುದರಿಂದ ಪಾದಯಾತ್ರೆ ಹಂತ ಹಂತವಾಗಿ ಆಯೋಜನೆ ಮಾಡಲಾಗುವುದು. ಚಿಕ್ಕೋಡಿ ಲೋಕಸಭಾ ಕ್ಷೇತ್ರದ 650 ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಲಾಗುವುದು’ ಎಂದು ಹೇಳಿದರು.

‘ಪಾದಯಾತ್ರೆ ವೇಳೆ ಗಾಂಧೀಜಿ ಅವರ ತತ್ವಗಳು, ವಿಚಾರಧಾರೆಗಳನ್ನು ಜನರಿಗೆ ತಿಳಿಸಲಾಗುವುದು. ಜತೆಗೆ ಸ್ವಚ್ಛ ಭಾರತ, ಪ್ಲಾಸ್ಟಿಕ್ ಮುಕ್ತ ಸಮಾಜ, ಯೋಗ ಸೇರಿದಂತೆ ವಿವಿಧ ಜನಪರ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತೇವೆ. ಇದೇ ವೇಳೆ ಪ್ರತಿಯೊಂದು ಗ್ರಾಮದ ಸಮಸ್ಯೆಗಳನ್ನು ಆಲಿಸಲಾಗುವುದು’ ಎಂದು ತಿಳಿಸಿದರು.

ಬಿಜೆಪಿಗೆ ಗೆಲುವು: ‘ಡಿಸೆಂಬರ್‌ ತಿಂಗಳಿನಲ್ಲಿ ನಡೆಯಲಿರುವ ಜಿಲ್ಲೆಯ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲವು ಸಾಧಿಸಲಿದೆ. ಪಕ್ಷದ ಮುಖಂಡರು ಚುನಾವಣೆಯಲ್ಲಿ ಯಾವುದೇ ಜವಾಬ್ದಾರಿ ನೀಡಿದರೂ ತೆಗೆದುಕೊಳ್ಳುತ್ತೇನೆ. ಉಪಚುನಾವಣೆ ಪಾದಯಾತ್ರೆ ಕಾಕತಾಳೀಯ ಅಷ್ಟೆ. ಚುನಾವಣೆಗೂ ಪಾದಯಾತ್ರೆಗೂ ಯಾವುದೇ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಚಿಕ್ಕೋಡಿ ಜಿಲ್ಲಾ ಬಿಜೆಪಿ ಘಟಕದ ಜಿಲ್ಲಾಧ್ಯಕ್ಷ ಶಶಿಕಾಂತ ನಾಯಕ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT