ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಳಖೋಡ: ದಾಖಲೆ ಬರೆದ ರೊಟ್ಟಿ ಬುತ್ತಿಯ ಜಾತ್ರೆ

Published 8 ಫೆಬ್ರುವರಿ 2024, 5:20 IST
Last Updated 8 ಫೆಬ್ರುವರಿ 2024, 5:20 IST
ಅಕ್ಷರ ಗಾತ್ರ

ಮುಗಳಖೋಡ: ಇಲ್ಲಿನ ಯಲ್ಲಾಲಿಂಗ ಮಹಾಪ್ರಭುಗಳ 38ನೇ ಪುಣ್ಯಾರಾಧನೆ ಅಂಗವಾಗಿ ಮಂಗಳವಾರ ನಡೆದ ರೊಟ್ಟಿ ಬುತ್ತಿ ಜಾತ್ರೆ ದಾಖಲೆ ಬರೆಯಿತು.

ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಬಟ್ಟೆಯಿಂದ ಕೂಡಿದ್ದ ರೊಟ್ಟಿಯ ಬುತ್ತಿಗಳು ದೇಶಪ್ರೇಮ ಸಾರುವಂತಿದ್ದವು. ರೊಟ್ಟಿಯ ಬುತ್ತಿ ಹೊತ್ತ 4 ಸಾವಿರಕ್ಕೂ ಅಧಿಕ ಮಹಿಳೆಯರು ಧ್ವಜದ ಆಕಾರದಲ್ಲಿ ನಿಂತು ಗಮನಸೆಳೆದರು. ನಂತರ ರಾಷ್ಟ್ರಗೀತೆ ಹಾಡುವ ಮೂಲಕ ದೇಶಕ್ಕೆ ಗೌರವ ಸಮರ್ಪಿಸಿದರು.

ರಾಜ್ಯ ಹಾಗೂ ಹೊರರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಭಕ್ತರು ಜಾತ್ರೆಯಲ್ಲಿ ಭಾಗಿಯಾಗಿ, ಭಕ್ತಿ ಮೆರೆದರು. ಸರ್ವಧರ್ಮೀಯರು ಭಾಗವಹಿಸಿದ್ದು ಭಾವೈಕ್ಯತೆಗೆ ಸಾಕ್ಷಿಯಾಗಿತ್ತು. ಇಲ್ಲಿನ ಸರ್ಕಾರಿ ಕೇಂದ್ರ ಶಾಲೆಯಿಂದ ಆರಂಭಗೊಂಡ ಜಾತ್ರೆಯ ಮೆರವಣಿಗೆ ವಿವಿಧ ಮಾರ್ಗಗಳಲ್ಲಿ ಸಾಗಿತು.

ಜಾತ್ರೆಗೆ ಚಾಲನೆ ನೀಡಿದ ಮುಗಳಖೋಡದ ಜಿಡಗಾ ಮಠದ ಮುರುಘರಾಜೇಂದ್ರ ಶ್ರೀಗಳು, ‘ಮನುಷ್ಯನಿಗೆ ಜಾತಿ ಇರಬಹುದು. ಆದರೆ, ಭಕ್ತಿಗೆ ಇಲ್ಲ ಎಂಬುದಕ್ಕೆ ಈ ರೊಟ್ಟಿ ಬುತ್ತಿ ಜಾತ್ರೆಯಲ್ಲಿ ಪಾಲ್ಗೊಂಡ ಎಲ್ಲ ಸಮುದಾಯಗಳ ಜನರೇ ಸಾಕ್ಷಿ’ ಎಂದರು.

‘ಅಜ್ಜನ ರೊಟ್ಟಿ ಬುತ್ತಿ ಜಾತ್ರೆಯು ‘ಇಂಡಿಯಾ ಸ್ಟಾರ್ ವರ್ಲ್ಡ್‌’ ಎಂಬ ವಿಶ್ವದಾಖಲೆಗೆ ಸೇರಲಿದೆ. ಇದು ಇಡೀ ಮಠದ ಭಕ್ತರ ಹಿರಿಮೆ. ಮುಂದಿನ ದಿನಗಳಲ್ಲಿ ಈ ದೇಶ ಹಸಿವು, ಬಡತನದಿಂದ ಮುಕ್ತವಾಗಲಿ ಎಂಬದೇ ಜಾತ್ರೆ ಉದ್ದೇಶ’ ಎಂದು ಹೇಳಿದರು.

ಮಾಜಿ ಸಂಸದ ರಮೇಶ ಕತ್ತಿ, ‘ಧಾರ್ಮಿಕತೆ ಜೊತೆಗೆ ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವಲ್ಲಿ ಮಠದ ಪಾತ್ರ ದೊಡ್ಡದು’ ಎಂದು ತಿಳಿಸಿದರು.

 ಡಾ.ಸಿ.ಬಿ.ಕುಲಿಗೋಡ, ಹಾರೂಗೇರಿ ಸಿಪಿಐ ರವಿಚಂದ್ರನ್ ಬಡಪಕೀರಪ್ಪನವರ, ಪಿಎಸ್ಐ ನಿರ್ಮಲಪ್ಪ ಉಪ್ಪಾರ, ರಮೇಶ ಖೇತಗೌಡರ,  ಪುರಸಭೆ ಸದಸ್ಯ ಸಂಜಯ ಕುಲಿಗೋಡ, ಪರಗೌಡ ಖೇತಗೌಡರ, ಚೇತನ ಯಡವಣ್ಣವರ, ರಾಜು ನಾಯಿಕ, ಶಿವಲಿಂಗ ಯರಡತ್ತಿ, ಭೀಮಪ್ಪ ಬನಶಂಕರಿ, ಹನುಮಂತ ಕುಲಿಗೋಡ, ಪ್ರಕಾಶ ಆದಪ್ಪಗೋಳ, ಗೌಡಪ್ಪ ಖೇತಗೌಡರ ಇತರರಿದ್ದರು.

ಯಲ್ಲಾಲಿಂಗ ಮಹಾಪ್ರಭುಗಳ 38ನೇ ಪುಣ್ಯಾರಾಧನೆ ಅಂಗವಾಗಿ ಕೋಳಿಗುಡ್ಡದಿಂದ ಮುಗಳಖೋಡದವರೆಗೆ ಬುಧವಾರ ಪಲ್ಲಕ್ಕಿ ಉತ್ಸವ ಸಂಚರಿಸಿತು
ಯಲ್ಲಾಲಿಂಗ ಮಹಾಪ್ರಭುಗಳ 38ನೇ ಪುಣ್ಯಾರಾಧನೆ ಅಂಗವಾಗಿ ಕೋಳಿಗುಡ್ಡದಿಂದ ಮುಗಳಖೋಡದವರೆಗೆ ಬುಧವಾರ ಪಲ್ಲಕ್ಕಿ ಉತ್ಸವ ಸಂಚರಿಸಿತು

ಕೋಳಿಗುಡ್ಡದಿಂದ ಮುಗಳಖೋಡದವರೆಗೆ ಪಾದಯಾತ್ರೆ

ಮುಗಳಖೋಡ: ಯಲ್ಲಾಲಿಂಗ ಮಹಾಪ್ರಭುಗಳ 38ನೇ ಪುಣ್ಯಾರಾಧನೆ ಅಂಗವಾಗಿ ಕೋಳಿಗುಡ್ಡದ ಆನಂದ ಮಹಾರಾಜರ ಆಶ್ರಮದಿಂದ ಮುಗಳಖೋಡದ ಮಠದವರೆಗೆ ಬುಧವಾರ ಪಲ್ಲಕ್ಕಿ ಉತ್ಸವ ನಡೆಯಿತು. ಕರ್ನಾಟಕ ಮಹಾರಾಷ್ಟ್ರ ಮತ್ತು ಗೋವಾದಿಂದ ಬಂದಿದ್ದ ಭಕ್ತರು ಬೆಳ್ಳಿ ಪಲ್ಲಕ್ಕಿ ಹೊತ್ತು ಸಾಗಿದರು. ಮುರುಘರಾಜೇಂದ್ರ ಸ್ವಾಮೀಜಿ ಉತ್ಸವಕ್ಕೆ ಚಾಲನೆ ನೀಡಿ ‘ಪಲ್ಲಕ್ಕಿ ಉತ್ಸವದಲ್ಲಿ ಭಾಗಿಯಾದ ಎಲ್ಲ ಭಕ್ತರ ಭವಿಷ್ಯ ಉಜ್ವಲವಾಗಲಿ’ ಎಂದು ಹಾರೈಸಿದರು. ಜಾನಪದ ಕಲಾತಂಡಗಳ ಪ್ರದರ್ಶನ ಮನಸೆಳೆಯಿತು. ಪಲ್ಲಕ್ಕಿ ಉತ್ಸವದಲ್ಲಿ ಭಾಗಿಯಾದವರಿಗೆ ಭಕ್ತರು ಅಂಬಲಿ ಮಜ್ಜಿಗೆ ಎಳನೀರು ವಿತರಿಸಿ ಭಕ್ತಿ ಸಮರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT