ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ತುಂಬಿಸಿ ‘ಜಲ ಸಂಕಟ’ ನಿವಾರಣೆ

ಮುಳ್ಳೂರು ಗ್ರಾಮ ಪಂಚಾಯ್ತಿಗೆ ‘ಗಾಂಧಿ ಗ್ರಾಮ ಪುರಸ್ಕಾರ’
Last Updated 1 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ರಾಮದುರ್ಗ: ಬೇಸಿಗೆಯಲ್ಲೂ ಗ್ರಾಮದ ಜನ ಮತ್ತು ಜಾನುವಾರುಗಳಿಗೆ ನೀರು ಒದಗಿಸಲು ಕೆರೆ ತುಂಬಿಸಿ ದಾಹ ನೀಗಿಸಲು ಮಾಡಿದ ಯೋಜನೆ ಹಾಗೂ ಸರ್ಕಾರದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ತಾಲ್ಲೂಕಿನ ಮುಳ್ಳೂರು ಗ್ರಾಮ ಪಂಚಾಯ್ತಿಗೆ ಈ ಬಾರಿಯ ‘ಗಾಂಧಿ ಗ್ರಾಮ ಪುರಸ್ಕಾರ’ ಲಭಿಸಿದೆ.

ಬುಧವಾರ (ಅ. 2ರಂದು) ಬೆಂಗಳೂರಿನ ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ಜರುಗುವ ಸಮಾರಂಭದಲ್ಲಿ ಪ್ರದಾನ ಮಾಡಲಿದ್ದಾರೆ.

ಹಲಗತ್ತಿ ಜಿಲ್ಲಾ ಪಂಚಾಯ್ತಿ ಕ್ಷೇತ್ರ ವ್ಯಾಪ್ತಿಯಲ್ಲಿರುವ ಮುಳ್ಳೂರು ಗ್ರಾಮವು ರಾಮದುರ್ಗದಿಂದ 11 ಕಿ.ಮೀ. ದೂರದಲ್ಲಿ ಮುಖ್ಯ ರಸ್ತೆಗೆ ಹೊಂದಿಕೊಂಡಿದೆ. 5,785 ಜನಸಂಖ್ಯೆ, ಒಟ್ಟು 6 ವಾರ್ಡುಗಳಿವೆ. 15 ಸದಸ್ಯರಿದ್ದಾರೆ. ಮಹಿಳೆ (ರತ್ನವ್ವ ಫಕೀರಪ್ಪ ಧರಿಗೊಂಡ) ಇಲ್ಲಿನ ಸಾರಥ್ಯ ವಹಿಸಿರುವುದು ವಿಶೇಷ.

586 ಮನೆಗಳಿಗೆ ಶೌಚಾಲಯ ನಿರ್ಮಿಸಿ 2018–19ನೇ ಸಾಲಿನಲ್ಲಿಯೇ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಎಂದು ಘೋಷಿಸಿ ಹೆಗ್ಗಳಿಕೆಗೆ ಪಾತ್ರವಾಗಿದೆ.

ನಿರುಪಯುಕ್ತವಾಗುತ್ತಿತ್ತು:ಬೇಸಿಗೆಯಲ್ಲಿ ನೀರಿನ ಬವಣೆ ಎದುರಾಗಬಾರದೆಂದು ಗ್ರಾಮದ ದಕ್ಷಿಣದ 6 ಎಕರೆ 13 ಗುಂಟೆ ಅಳತೆಯ ಕೆರೆಗೆ ನಿರುಪಯುಕ್ತವಾಗಿ ಹರಿದು ಹೋಗುತ್ತಿದ್ದ ಕಾಗಿ ಹಳ್ಳಕ್ಕೆ ಪೈಪ್‌ಲೈನ್‌ ಅಳವಡಿಸಿ ನೀರನ್ನು ಕೆರೆಗೆ ತುಂಬಿಸಿದ್ದಾರೆ. ಮುಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಮುಳ್ಳೂರು, ಕಡ್ಲಿಕೊಪ್ಪ, ಮುದೇನಕೊಪ್ಪ, ಕಲ್ಲೂರು ಗ್ರಾಮಗಳ ನೀರಾವರಿ ಮತ್ತು ಜಾನುವಾರುಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

ಇದರೊಂದಿಗೆ ಪಂಚಾಯ್ತಿಗೆ ಬಿಡುಗಡೆಗೊಂಡಿರುವ ವಿವಿಧ ಯೋಜನೆಗಳ ಹಣವನ್ನು ಬಳಸಿಕೊಂಡು ಗ್ರಾಮದಲ್ಲಿ ಉತ್ತಮ ರಸ್ತೆಗಳು, ಚರಂಡಿ ಮತ್ತು ವಿದ್ಯುತ್‌ದೀಪದ ವ್ಯವಸ್ಥೆ ಮಾಡಲಾಗಿದೆ. ಪಂಚಾಯ್ತಿ ವ್ಯಾಪ್ತಿಯ ಮುಳ್ಳೂರು, ಕಡ್ಲಿಕೊಪ್ಪ, ಮುದೇನಕೊಪ್ಪ, ಕಲ್ಲೂರು ಗ್ರಾಮಗಳಲ್ಲಿ ತಲಾ ಒಂದು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಉತ್ತಮ ನೀರು ಪೂರೈಸಲಾಗುತ್ತಿದೆ.

ಉದ್ಯೋಗ ಖಾತ್ರಿ ಯೋಜನೆಯಡಿ ಹೊಲಗಳ ಬದು ನಿರ್ಮಾಣ, ಕೃಷಿ ಹೊಂಡ, ಸ್ಮಶಾನ ಅಭಿವೃದ್ಧಿಪಡಿಸಲು ಉದ್ಯೋಗವನ್ನು ಸೃಷ್ಟಿಸಿ ಪಂಚಾಯ್ತಿ ವ್ಯಾಪ್ತಿಯ ಜನ ಉದ್ಯೋಗ ಅರಸಿ ವಲಸೆ ಹೋಗುವುದನ್ನು ತಪ್ಪಿಸಲಾಗಿದೆ.

ಭಕ್ತರ ಅನುಕೂಲಕ್ಕೆ:ಗ್ರಾಮದ ಪಕ್ಕದಲ್ಲಿಯೇ ಪ್ರಸಿದ್ಧ ಕಲ್ಲೂರು ಸಿದ್ದೇಶ್ವರ ದೇವಸ್ಥಾನ, ಮಾರುತೇಶ್ವರ ದೇವಸ್ಥಾನ ಮತ್ತು ಗ್ರಾಮದ ಅನ್ನದಾನೇಶ್ವರ ಮಠಗಳು ಪ್ರೇಕ್ಷಣೀಯ ತಾಣಗಳಾಗಿವೆ. ಇವುಗಳಿಗೆ ಭೇಟಿ ನೀಡುವ ಭಕ್ತರ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ಕೈಗೊಳ್ಳಲು ಯೋಜನೆ ಹಾಕಿಕೊಳ್ಳಲಾಗಿದೆ.

ಹಳೆಯ ಪಂಚಾಯ್ತಿ ಕಟ್ಟಡದಲ್ಲಿ ರಾಜೀವ್‌ಗಾಂಧಿ ಸೇವಾ ಕೇಂದ್ರ ಸ್ಪಾಪಿಸಿ ಸಭಾಂಗಣ, ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಪ್ರತ್ಯೇಕ ಕೊಠಡಿ ನಿರ್ಮಿಸಲಾಗಿದೆ.

‘ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿ ಅನುದಾನ ಬಳಸಿಕೊಂಡು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಗ್ರಾಮವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಪಿಡಿಒ ಆರ್‌.ಎ. ಪಾಟೀಲ ಹೇಳಿದರು.

‘ಹಳ್ಳಿಗಳಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಜಾಸ್ತಿ. ದನಗಳ ಕೊಟ್ಟಿಗೆಯಲ್ಲಿನ ಕಸ ಹೊರತುಪಡಿಸಿ ಉಳಿದ ಕಸವನ್ನು ಒಂದೆಡೆ ಸೇರಿಸಿ ಟ್ರ್ಯಾಕ್ಟರ್‌ ಮೂಲಕ ಸಾಗಿಸುವ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT