ಸೋಮವಾರ, ಡಿಸೆಂಬರ್ 16, 2019
26 °C

ಕನ್ನಡ ಬೆಳೆಯುವ ಭಾಷೆ: ಕಾಟ್ಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕನ್ನಡ ಭಾಷೆ ಹಾಗೂ ಸಾಹಿತ್ಯಕ್ಕೆ ಭವಿಷ್ಯವಿಲ್ಲ ಎಂದು ಭಾಷಾ ತಜ್ಞರು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ, ಇತ್ತೀಚೆಗೆ ಉದಯೋನ್ಮುಖ ಸಾಹಿತಿಗಳು ಮಾಡುತ್ತಿರುವ ಕಾವ್ಯ ಕೃಷಿಯನ್ನು ಗಮನಿಸಿದರೆ ಕನ್ನಡ ಅಳಿಯುವ ಭಾಷೆಯಲ್ಲ. ಇದು ಬೆಳೆಯುವ ಭಾಷೆ’ ಎಂದು ಸಾಹಿತಿ ಸರಜೂ ಕಾಟ್ಕರ್‌ ಹೇಳಿದರು.

ಇಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಯುವ ಕವಿ ನದೀಮ ಸನದಿ ಅವರ ‘ಹುಲಿಯ ನೆತ್ತಿಗೆ ನೆರಳು’ ಕವನಸಂಕಲನವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಇಂದಿನ ಯುವಕರ ಕಾವ್ಯವೂ ಆಧುನಿಕವಾಗುತ್ತಿದೆ. ಹೊಸ ಹೊಸ ರೂಪಕಗಳು, ಪ್ರತಿಮೆಗಳ ಸೃಷ್ಟಿಯಿಂದಾಗಿ ಕನ್ನಡ ಸಾಹಿತ್ಯ ಹೊಸ ಹೆಜ್ಜೆ ಹಾಕುತ್ತಿದೆ. ಸಮಾಜದ ಇಂದಿನ ಪರಿಸ್ಥಿತಿಯ ತೀಕ್ಷ್ಣ ದೃಷ್ಟಿ ಹಾಗೂ ಸೂಕ್ಷ್ಮಾವಲೋಕನ ಯುವಕವಿಗಳಲ್ಲಿ ಕಂಡುಬರುತ್ತಿದೆ. ಈ ಎಲ್ಲ ಗುಣಲಕ್ಷಣಗಳು ನದೀಮ ಅವರ ಕಾವ್ಯದಲ್ಲಿ ಪರಿಣಾಮಕಾರಿಯಾಗಿ ಅಭಿವ್ಯಕ್ತಗೊಂಡಿರುವುದನ್ನು ಕಾಣಬಹುದು’ ಎಂದರು.

ಕೃತಿ ಪರಿಚಯಿಸಿದ ಬಂಡಾಯ ಸಾಹಿತಿ ಪ್ರೊ.ಯಲ್ಲಪ್ಪ ಹಿಮ್ಮಡಿ, ‘ನದೀಮ ಅವರು ಕಾವ್ಯಗಳಲ್ಲಿ ಪ್ರಖರ ವೈಚಾರಿಕತೆ ಬಿಂಬಿಸಿದ್ದಾರೆ. ಹೊಸ ರೂಪಕಗಳು, ಪ್ರತಿಮೆಗಳ ಮೂಲಕ ಕಾವ್ಯಾಸಕ್ತರ ಮನ ಗೆಲ್ಲುತ್ತಾರೆ’ ಎಂದು ತಿಳಿಸಿದರು.

ಡಾ.ಎಚ್‌.ಬಿ. ಕೋಲಕಾರ, ಆಶಾ ಕಡಪಟ್ಟಿ, ಬಸವರಾಜ ಗಾರ್ಗಿ, ಡಾ.ಪಿ.ಜೆ. ಕೆಂಪಣ್ಣವರ, ಶಂಕರ ಬಾಗೇವಾಡಿ, ಸುನಂದಾ ಎಮ್ಮಿ, ಎಲ್‌.ವಿ. ಪಾಟೀಲ ಕವನಸಂಕಲನದಲ್ಲಿ ತಮಗಿಷ್ಟವಾದ ಕವಿತೆ ವಾಚಿಸಿದರು.

ನದೀಮ ಸನದಿ ಮಾತನಾಡಿದರು. ಸರಸ್ವತಿ ಹಲಗಿ ಪ್ರಾರ್ಥಿಸಿದರು. ಎ.ಎ. ಸನದಿ ಸ್ವಾಗತಿಸಿದರು. ಎಂ.ವೈ. ಮೆಣಸಿನಕಾಯಿ ವಂದಿಸಿದರು.

ಪ್ರತಿಕ್ರಿಯಿಸಿ (+)