ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದಗಡ: ತಾವರೆ ಹೂವುಗಳಿಂದ ಆಕರ್ಷಿಸುತ್ತಿರುವ ಹೊನ್ನವ್ವ ಕೆರೆ

Last Updated 28 ಮೇ 2022, 19:30 IST
ಅಕ್ಷರ ಗಾತ್ರ

ಖಾನಾಪುರ: ತಾಲ್ಲೂಕಿನ ನಂದಗಡ ಗ್ರಾಮದ ಹೊರವಲಯದ ಬೆಳಗಾವಿ– ತಾಳಗುಪ್ಪ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಹೊನ್ನವ್ವ ಕೆರೆಯಲ್ಲಿ ಈಗ ಕಣ್ಣು ಹಾಯಿಸಿದಲ್ಲೆಲ್ಲ ತಾವರೆ ಹೂವುಗಳು ಕಾಣಿಸುತ್ತಿವೆ. ಇಡೀ ಕೆರೆಯನ್ನು ಶುಭ್ರ ವರ್ಣದ ತಾವರೆ ಹೂವುಗಳು ಆವರಿಸಿವೆ. ಐತಿಹಾಸಿಕ ಹಿನ್ನೆಲೆಯುಳ್ಳ ಹೊನ್ನವ್ವ ಕೆರೆಯ ಅಂದ ಇಮ್ಮಡಿಗೊಳಿಸಿವೆ.

ತಾವರೆಗಳ ಮೇಲೆ ಸೂರ್ಯನ ಬೆಳಕು ಬಿದ್ದಂತೆ ಅವುಗಳ ಹೊಳಪು ಹೆಚ್ಚುತ್ತಿರುವ ಕಾರಣದಿಂದ ಬೇಸಿಗೆಯ ಬಿರು ಬಿಸಿಲಲ್ಲೂ ಸಂಪೂರ್ಣ ಕೆರೆ ಹೂವುಗಳಿಂದ ಕಂಗೊಳಿತ್ತಿದೆ.

ಸಂಗೊಳ್ಳಿ ರಾಯಣ್ಣನ ಕಾಲದಿಂದಲೂ ಇರುವ ಅಂದಾಜು 8 ಎಕರೆಯಷ್ಟು ವಿಸ್ತಾರದ ಈ ಕೆರೆಯ ನಿರ್ವಹಣೆಯನ್ನು ಕಸಬಾ ನಂದಗಡ ಗ್ರಾಮ ಪಂಚಾಯ್ತಿ ಅಚ್ಚುಕಟ್ಟಾಗಿ ಮಾಡುತ್ತಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆರೆಯ ಹೂಳೆತ್ತಲಾಗಿದೆ. ಸುತ್ತಮುತ್ತ ಹಚ್ಚ ಹಸಿರಿನ ವಾತಾವರಣ ಇರುವ ಕಾರಣ ಬಾನಾಡಿಗಳು ಇಕ್ಕೆಲಗಳಲ್ಲಿ ಆಶ್ರಯ ಪಡೆದಿವೆ.

ಕೆರೆಯಲ್ಲಿ ಬೇಸಿಗೆಯ ಸಮಯದಲ್ಲೂ ನೀರಿನ ಸಂಗ್ರವಿರುವ ಕಾರಣ ಹೂಗಳಿಂದ ಕಂಗೊಳಿಸುತ್ತಿದೆ. ಹೆದ್ದಾರಿ ಮೇಲೆ ಸಂಚರಿಸುವ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಇಲ್ಲಿ ಮೊಬೈಲ್‌ ಫೋನ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ಹಾಗೂ ಫೋಟೊ ತೆಗೆದುಕೊಳ್ಳುವುದು ಕಂಡುಬರುತ್ತಿದೆ.

ಕೆರೆಯ ದಡದಲ್ಲಿ ಕಸಬಾ ನಂದಗಡ ಗ್ರಾಮದ ಜಾಗೃತ ದೈವ ಹೊನ್ನವ್ವ ದೇವಿಯ ಆಲಯವಿದೆ. ಮಂಗಳವಾರ, ಶುಕ್ರವಾರ, ಹುಣ್ಣಿಮೆ, ಅಮವಾಸ್ಯೆ, ಹಬ್ಬ-ಹರಿದಿನಗಳು ಹಾಗೂ ವಿಶೇಷ ಸಂದರ್ಭದಲ್ಲಿ ನಂದಗಡ, ರಾಯಾಪುರ, ಹಟ್ಟಿ, ಖೈರವಾಡ, ಜುಂಜವಾಡ, ಕಸಬಾ ನಂದಗಡ ಹಾಗೂ ಸುತ್ತಲಿನ ಭಾಗದ ಭಕ್ತರು ಹೊನ್ನವ್ವಳಿಗೆ ಕೆರೆಯಲ್ಲಿ ಕಿತ್ತ ತಾವರೆ ಹೂವುಗಳನ್ನು ಅರ್ಪಿಸಿ ದೇವಿಯನ್ನು ಆರಾಧಿಸುತ್ತಾರೆ.

‘ಕಳೆದ ವರ್ಷ ನಿರೀಕ್ಷೆಗೂ ಮೀರಿ ಮಳೆ ಸುರಿದಿದ್ದರಿಂದ ಕೆರೆಯಲ್ಲಿ ಈಗಲೂ ನೀರಿನ ಸಂಗ್ರಹವಿದೆ. ಇದರಿಂದ ಜಾನುವಾರುಗಳಿಗೆ ಅನುಕೂಲವಾಗಿದೆ. ಸುತ್ತಮುತ್ತ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು, ಪ್ರವಾಸಿಗರಿಗೆ ಅಗತ್ಯ ಸೌಕರ್ಯ ಕಲ್ಪಿಸುವಲ್ಲಿ ಸಂಬಂಧಪಟ್ಟವರು ಮುತುವರ್ಜಿ ವಹಿಸಿದರೆ ಇದೊಂದು ಪ್ರಮುಖ ಪ್ರವಾಸಿ ತಾಣವಾಗಲಿದೆ’ ಎನ್ನುತ್ತಾರೆ ತಾಲ್ಲೂಕಿನ ಜುಂಜವಾಡ ನಿವಾಸಿ ಅಪ್ಪಾಜಿ ಪಾಟೀಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT