ಶುಕ್ರವಾರ, ಜೂನ್ 25, 2021
22 °C

ಉದ್ಯೋಗ ಸೃಷ್ಟಿ: ಮೋದಿಗೆ ತಾಕತ್ತಿಲ್ಲ–ಸಚಿವ ಸತೀಶ ಜಾರಕಿಹೊಳಿ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿಸುವ ತಾಕತ್ತಿಲ್ಲ. ಸುಳ್ಳು ಹೇಳುತ್ತಾ ಯುವಜನರ ದಿಕ್ಕು ತಪ್ಪಿಸುವುದೇ ಅವರ ಕಾಯಕವಾಗಿದೆ. ಈ ಚುನಾವಣೆಯಲ್ಲಿ ಜನರು ಅವರ ಬಣ್ಣದ ಮಾತಿಗೆ ಮರುಳಾಗದೇ ಜಾಗೃತಿಯಿಂದ ಮತ ಚಲಾಯಿಸಬೇಕು’ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಯುವ ಕಾಂಗ್ರೆಸ್‌ ನಗರ ಘಟಕದಿಂದ ಇಲ್ಲಿ ಭಾನುವಾರ ನಡೆದ ಲೋಕಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಮೋದಿ ಅವರಿಗೆ ಹಿಂದುತ್ವ ಹಾಗೂ ಕಾಶ್ಮೀರ ವಿಷಯಗಳು ಮಾತ್ರವೇ ಕಾರ್ಯಸೂಚಿಯಾಗಿವೆ. ಅದನ್ನು ಬಿಟ್ಟು ಅವರಿಗೆ ಅಭಿವೃದ್ಧಿ ಬಗ್ಗೆ ಚಿಂತೆ ಇಲ್ಲ. ರೈತರು ಹಾಗೂ ನಿರುದ್ಯೋಗಿಗಳನ್ನು ನಿರ್ಲಕ್ಷಿಸುತ್ತಾ ಭಾವನಾತ್ಮಕ ವಿಷಯಗಳನ್ನು ಮಾತ್ರ ಯುವಕರಲ್ಲಿ ಬಿತ್ತುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಇಲ್ಲಿನ ಸಂಸದ, ಬಿಜೆಪಿ ಸುರೇಶ ಅಂಗಡಿ ಮೋದಿ ಮುಖ ನೋಡಿ ಮತ ಹಾಕುವಂತೆ ಪ್ರಚಾರ ನಡೆಸುತ್ತಿದ್ದಾರೆ. ಅವರೂ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ; ಮೋದಿಯೂ ಮಾಡಿಲ್ಲ. ಬ್ಯಾನರ್‌ಗಳಲ್ಲಿ ಫೋಟೊ ಹಾಕಿಕೊಂಡು ಪ್ರಚಾರ ಮಾಡಿದರೆ, ಸಮಾಜದ ಅಭಿವೃದ್ಧಿ ಆಗುವುದಿಲ್ಲ. ಯುವಜನರಿಗೆ ಕೆಲಸ ಸಿಗುವುದಿಲ್ಲ. ದೇಶದ ಸಮಗ್ರ ಅಭಿವೃದ್ಧಿಗಾಗಿ ಮತದಾರರು ಕಾಂಗ್ರೆಸ್‌ ಬೆಂಬಲಿಸಬೇಕು’ ಎಂದು ಕೋರಿದರು.

ಯುವ ಕಾಂಗ್ರೆಸ್‌ ನಗರ ಘಟಕದ ಅಧ್ಯಕ್ಷ ಪೈಜಾನ್ ಸೇಠ್ ಮಾತನಾಡಿ, ‘ದೇಶದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಬಿಜೆಪಿ ಹವಣಿಸುತ್ತಿದೆ. ಅಭಿವೃದ್ಧಿ ವಿಷಯ ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ ಈಗ ಧರ್ಮ, ಸೈನಿಕರ ಹೆಸರಿನಲ್ಲಿ ಮತ ಕೇಳುತ್ತಿದೆ. ಅವರು ನಡೆಸಿದ ಆಡಳಿತದಲ್ಲಿ ದಲಿತರು, ಅಲ್ಪಸಂಖ್ಯಾತರ ಮೇಲೆ ಸಾಕಷ್ಟು ದೌರ್ಜನ್ಯಗಳು ನಡೆದಿವೆ. ಹೀಗಾಗಿ, ಈ ವರ್ಗದ ಜನರು ಭಯದಲ್ಲಿ ಬದುಕುವಂತಾಗಿದೆ. ಈ ಭಯಕ್ಕೆ ಮುಕ್ತಿ ನೀಡಬೇಕೆಂದರೆ ಬಿಜೆಪಿ ಸರ್ಕಾರ ರಚನೆಯಾಗದಂತೆ ನೋಡಿಕೊಳ್ಳಬೇಕು’ ಎಂದರು.

ಅಭ್ಯರ್ಥಿ ಡಾ.ವಿ.ಎಸ್. ಸಾಧುನವರ ಪುತ್ರ ಕಿರಣ ಸಾಧುನವರ ಮಾತನಾಡಿ, ‘ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯ ಎಲ್ಲ ಮುಖಂಡರೂ ಸುಳ್ಳುಗಳನ್ನು ಹೇಳಿ ದೇಶದ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಈಗ ನಡೆಯುತ್ತಿರುವ ಚುನಾವಣೆ ಮೋದಿ– ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಅಲ್ಲ. ಬದಲಿಗೆ ಸರ್ವಾಧಿಕಾರ ಹಾಗೂ ಪ್ರಜಾಪ್ರಭುತ್ವದ ನಡುವೆ ನಡೆಯುತ್ತಿದೆ. ಪ್ರಜಾಪ್ರಭುತ್ವವನ್ನು ಗೆಲ್ಲಿಸುವುದು ಪ್ರಜೆಗಳ ಕೈಯಲ್ಲಿದೆ’ ಎಂದು ತಿಳಿಸಿದರು.

ಮುಖಂಡ ಫಿರೋಜ್‌ ಸೇಠ್, ಕಾಂಗ್ರೆಸ್ ಜಿಲ್ಲಾ ಘಟದಕ ಅಧ್ಯಕ್ಷ ವಿನಯ ನಾವಲಗಟ್ಟಿ, ನಗರ ಘಕದ ಅಧ್ಯಕ್ಷ ರಾಜು ಸೇಠ್, ಯುವ ಮುಖಂಡ ಮೃಣಾಲ್ ಹೆಬ್ಬಾಳಕರ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು