ಭಾನುವಾರ, ಸೆಪ್ಟೆಂಬರ್ 15, 2019
25 °C
ಅಧಿಕಾರಿಗಳಿಗೆ ಸೂಚನೆ ನೀಡಿದ ಅಧ್ಯಕ್ಷ ನ್ಯಾ.ಸುಭಾಷ್

ಅಸಮರ್ಪಕ ತ್ಯಾಜ್ಯ ವಿಲೇವಾರಿ: ಎನ್‌ಜಿಟಿ ಅತೃಪ್ತಿ

Published:
Updated:
Prajavani

ಬೆಳಗಾವಿ: ‘ಜಿಲ್ಲೆಯಲ್ಲಿ ನಗರಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಸಿ ಮತ್ತು ಒಣ ತ್ಯಾಜ್ಯವನ್ನು ಬೇರ್ಪಡಿಸಿ ವಿಲೇವಾರಿ ಮಾಡುವ ಕೆಲಸ ಸಮಾಧಾನಕರವಾಗಿ ನಡೆಯುತ್ತಿಲ್ಲ’ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಅಧ್ಯಕ್ಷ ನ್ಯಾ.ಸುಭಾಷ್ ಬಿ. ಅಡಿ ತಿಳಿಸಿದರು.

ಇಲ್ಲಿ ಮಂಗಳವಾರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ನಗರವನ್ನು ಕೇಂದ್ರ ಸರ್ಕಾರದ ಸ್ಮಾರ್ಟ್‌ ಸಿಟಿ ಹಾಗೂ ರಾಜ್ಯ ಸರ್ಕಾರದ ಮಾದರಿ ನಗರ ಯೋಜನೆಯಲ್ಲಿ ಆಯ್ಕೆ ಮಾಡಲಾಗಿದೆ. ಆದರೆ, ಇಲ್ಲಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವವರೆಗೆ ಸ್ಮಾರ್ಟ್‌ ಅಥವಾ ಮಾದರಿಯಾಗುವುದು ಸಾಧ್ಯವಾಗುವುದಿಲ್ಲ. ಹೀಗಾಗಿ, ಮೂಲದಲ್ಲೇ ಕಸ ವಿಂಗಡಿಸಿ ವಿಲೇವಾರಿ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ಸುಧಾರಿಸಿಕೊಳ್ಳಬೇಕು:

‘ಇಲ್ಲಿ ನಗರ‍ಪಾಲಿಕೆ, 2 ನಗರಸಭೆಗಳು, 15 ಪುರಸಭೆಗಳು, 15 ಪಟ್ಟಣ ಪಂಚಾಯ್ತಿಗಳಿವೆ. ಇವುಗಳ ವ್ಯಾಪ್ತಿಯಲ್ಲಿ 742 ವಾರ್ಡ್‌ಗಳು ಬರುತ್ತವೆ. ಇದೇ ವರ್ಷದ ಜುಲೈ ಅಂತ್ಯದ ವೇಳೆಗೆ 543 ವಾರ್ಡ್‌ಗಳಲ್ಲಿ ಮನೆ–ಮನೆಗೆ ತೆರಳಿ ಕಸ ಸಂಗ್ರಹಿಸಲಾಗುತ್ತಿದೆ. 199 ವಾರ್ಡ್‌ಗಳಲ್ಲಿ ಹಸಿ ಹಾಗೂ ಒಣ ಕಸವನ್ನು ಮೂಲದಲ್ಲೇ ವಿಂಗಡಿಸಲಾಗುತ್ತಿದೆ. ನಗರದ 58 ವಾರ್ಡ್‌ಗಳಲ್ಲಿ 57ರಲ್ಲಿ ಮನೆ–ಮನೆಗಳಲ್ಲಿ ಕಸ ಸಂಗ್ರಹಿಸಲಾಗುತ್ತಿದೆ. 16ರಲ್ಲಿ ಬೇರ್ಪಡಿಸಲಾಗುತ್ತಿದೆ. ಕಾಂಪೋಸ್ಟ್‌ ಮಾಡುವ ಕಾರ್ಯ ಕೆಲವೇ ಕಡೆಗಳಲ್ಲಿ ನಡೆಯುತ್ತಿದೆ. ಈ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ’ ಎಂದರು.

‘ಸಮರ್ಪಕ ಘನ ತ್ಯಾಜ್ಯ ವಿಲೇವಾರಿ ನಿಟ್ಟಿನಲ್ಲಿ 2 ವರ್ಷಗಳಲ್ಲಿ ಕ್ರಮ ಕೈಗೊಳ್ಳಬೇಕು ಎಂದು 2016ರಲ್ಲಿ ಸೂಚಿಸಲಾಗಿತ್ತು. ಬಳಿಕ 6 ತಿಂಗಳು ವಿಸ್ತರಿಸಲಾಗಿತ್ತು. ಆದರೂ ಅನುಷ್ಠಾನವಾಗಿಲ್ಲ. ಜಿಲ್ಲೆಯಲ್ಲಿ ‍ಪ್ರವಾಹ ಉಂಟಾಗಿದ್ದರಿಂದ ಅಧಿಕಾರಿಗಳು ಹೆಚ್ಚಿನ ಸಮಯ ಕೇಳಿದ್ದಾರೆ. ಮನೆ–ಮನೆಗಳಿಂದ ಕಸ ಸಂಗ್ರಹಿಸುವುದು ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಉಪವಿಧಿ (ಬೈಲಾ) ರೂಪಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಇದ್ದರು.

Post Comments (+)