ಸೋಮವಾರ, ಅಕ್ಟೋಬರ್ 21, 2019
22 °C
ನೆರೆಯಿಂದಾಗಿ ಬಳಕೆಗೆ ಬಾರದಂತಾದ ಶೌಚಾಲಯಗಳು

ಬೆಳಗಾವಿ: ಮತ್ತೆ ಬಯಲನ್ನೇ ‘ಆಶ್ರಯಿಸಬೇಕಾದ’ ಸ್ಥಿತಿ!

Published:
Updated:
Prajavani

ಬೆಳಗಾವಿ: ಸರ್ಕಾರದಿಂದ ಜಿಲ್ಲೆಗೆ ಘೋಷಿಸಲಾಗಿದ್ದ ‘ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ’ ಎಂಬ ‘ಪಟ್ಟ’ವು ಪ್ರವಾಹ ಹಾಗೂ ಧಾರಾಕಾರ ಮಳೆಯಿಂದಾಗಿ ಕೊಚ್ಚಿ ಹೋಗಿದೆ.

ಜಿಲ್ಲಾಡಳಿತದ ಪ್ರಕಾರ, ಇಲ್ಲಿ ಆಗಸ್ಟ್‌ನಲ್ಲಿ ಪ್ರವಾಹ ಹಾಗೂ ಧಾರಾಕಾರ ಮಳೆಯಿಂದಾಗಿ 872 ಗ್ರಾಮಗಳು ಬಾಧಿತವಾಗಿವೆ. 69,381 ಮನೆಗಳು ಹಾನಿಗೊಳಗಾಗಿವೆ. ಅಲ್ಲಿನ ಶೌಚಾಲಯಗಳೂ ಬಿದ್ದಿವೆ. ಆ ಹಳ್ಳಿಗಳಲ್ಲಿ ಜನರು ಶೌಚ ಕ್ರಿಯೆಗಾಗಿ  ಬಯಲು, ಜಮೀನು, ಕೆರೆ–ಕಟ್ಟೆಗಳು, ನಾಲೆಗಳ ದಂಡೆಗಳಿಗೆ ತೆರಳುವುದು ಸಾಮಾನ್ಯವಾಗಿದೆ. ಅದರಲ್ಲೂ ತಾತ್ಕಾಲಿಕ ಶೆಡ್‌ಗಳಲ್ಲಿ ಉಳಿದಿರುವ ಜನರ ಸಂಕಟ ಹೇಳತೀರದಾಗಿದೆ.

‘ಬಯಲು ಶೌಚ ಮುಕ್ತ’ ಎನ್ನುವುದು ಇಲ್ಲೂ ದಾಖಲೆಗಳಿಗಳಷ್ಟೇ ಸೀಮಿತವಾಗಿದೆ.  

ಸ್ಟೋರ್‌ ರೂಂಗಳಾಗಿವೆ:

ಕೆಲವೆಡೆ ವೈಯಕ್ತಿಕ ಶೌಚಾಲಯಗಳಿದ್ದರೂ ಬಳಸುತ್ತಿಲ್ಲ. ಅವುಗಳನ್ನು ‘ಸ್ಟೋರ್‌ ರೂಂ’ ರೀತಿ ಬಳಸುವುದು ಸಾಮಾನ್ಯವಾಗಿದೆ. ಕೆಲವೆಡೆ, ನೀರಿನ ಕೊರತೆಯಿಂದಾಗಿ ಅನುಪಯುಕ್ತವಾಗಿವೆ. ಹೀಗಾಗಿ, ಬೆಳಗಾಗುವುದಕ್ಕೆ ಮುಂಚೆ ಹಾಗೂ ಕತ್ತಲಾದ ನಂತರ ‘ಹೊರಗಡೆ’ಗೆ ಹೋಗುವ ಅನಿವಾರ್ಯ ಸ್ಥಿತಿಯಿಂದ ಗಡಿ ಜಿಲ್ಲೆ ಜನರು ಕೂಡ ಹೊರತಾಗಿಲ್ಲ. ಸರ್ಕಾರ ನೀಡುವ ಅಂಕಿ–ಅಂಶಗಳಿಗೂ, ವಾಸ್ತವಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಅಲ್ಲಲ್ಲಿ ಸಾಮೂಹಿಕ, ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆಯಾದರೂ ನಿರ್ವಹಣೆ ಕೊರತೆಯಿಂದಾಗಿ ಅವು ಇದ್ದೂ ಇಲ್ಲದಂತಾಗಿವೆ.

ಪ್ರವಾಹದಿಂದಾಗಿ ಜಿಲ್ಲೆಯ 2ಸಾವಿರಕ್ಕೂ ಹೆಚ್ಚಿನ ಶಾಲೆಗಳ ಶೌಚಾಲಯಗಳಿಗೂ ಹಾನಿಯಾಗಿದೆ.

‘ಜಿಲ್ಲೆಯಲ್ಲಿ 2012ರ ಬೇಸ್‌ಲೈನ್‌ ಸಮೀಕ್ಷೆ ಪ್ರಕಾರ 5,41,264 ಕುಟುಂಬಗಳಿವೆ. ಆಗ, 1,12,575 ಕುಟುಂಬಗಳು ವೈಯಕ್ತಿಕ ಶೌಚಾಲಯ ಹೊಂದಿದ್ದವು. ಬಳಿಕ ಹಂತ ಹಂತವಾಗಿ 4,28,689 ಶೌಚಾಲಯಗಳನ್ನು ಜಿಲ್ಲಾ ಪಂಚಾಯ್ತಿಯಿಂದ ಸಹಾಯಧನ ನೀಡಿ ಕಟ್ಟಿಸಲಾಗಿದೆ. ಅಲ್ಲಲ್ಲಿ ಸಾಮೂಹಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇದನ್ನು ಆಧರಿಸಿ 2018ರ ನವೆಂಬರ್‌ನಲ್ಲೇ ಜಿಲ್ಲೆಯನ್ನು ‘ಬಯಲು ಬಹಿರ್ದೆಸೆ ಮುಕ್ತ’ ಎಂದು ಘೋಷಿಸಲಾಗಿದೆ. ವ್ಯಾಪಕ ಜಾಗೃತಿ ಕಾರ್ಯಕ್ರಮಗಳಿಂದಾಗಿ ಜನರ ಮನಸ್ಥಿತಿಯೂ ಬದಲಾಗಿದೆ. ಶೌಚಾಲಯ ಬಳಸುತ್ತಿದ್ದಾರೆ’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ.ವಿ. ರಾಜೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದ್ಯಕ್ಕೆ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿಕೊಡಲು ಆದ್ಯತೆ ನೀಡಲಾಗಿದೆ. ಸಂಪೂರ್ಣ ಹಾಳಾದ ಮನೆಗಳಿಗೆ ಸರ್ಕಾರ ₹ 5 ಲಕ್ಷ ಪರಿಹಾರ ಘೋಷಿಸಿದೆ. ಇದರಲ್ಲಿಯೇ ಶೌಚಾಲಯವನ್ನೂ ನಿರ್ಮಿಸಿಕೊಳ್ಳಬೇಕಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.

‘ಸ್ಮಾರ್ಟ್‌ ಸಿಟಿ’ಯಲ್ಲೂ...

‘ಸ್ಮಾರ್ಟ್‌ ಸಿಟಿ ಯೋಜನೆ’ ಜಾರಿಯಾಗಿರುವ ನಗರದಲ್ಲಿ ವಡಗಾವಿ, ಅನಗೋಳ, ಶಹಾಪುರ, ಮಹಾಂತೇಶನಗರ, ರುಕ್ಮಿಣಿನಗರ ಮೊದಲಾದ ಕೊಳೆಗೇರಿ ಪ್ರದೇಶಗಳಲ್ಲಿ ‘ಬಯಲು ಶೌಚ’ ಸಾಮಾನ್ಯವಾಗಿದೆ.

‘ನಗರದಲ್ಲಿ 1.30 ಲಕ್ಷ ಮನಗಳಿವೆ. 210 ಕುಟುಂಬಗಳಿಗೆ ನಿರ್ಮಿಸಿಕೊಡುವುದು ಬಾಕಿ ಇದೆ. ಜಾಗದ ಸಮಸ್ಯೆಯಿಂದಾಗಿ ತೊಂದರೆಯಾದವರಿಗೆ ಸಮೀಪದ ಸಾರ್ವಜನಿಕ ಶೌಚಾಲಯ ಬಳಸುವಂತೆ ಅರಿವು ಮೂಡಿಸಲಾಗುತ್ತಿದೆ’ ಎಂದು ನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ಶಶಿಧರ ನಾಡಗೌಡ ತಿಳಿಸಿದರು.

ಪ್ರವಾಹದಿಂದಾಗಿ ಹಳ್ಳಿಗಳಲ್ಲಿ ಮನೆಗಳೊಂದಿಗೆ ಬಹುತೇಕ ಕಡೆಗಳಲ್ಲಿ ಶೌಚಾಲಯಗಳೂ ಹಾಳಾಗಿವೆ. ಅವುಗಳ ಸಮೀಕ್ಷೆ ಮುಂದಿನ ದಿನಗಳಲ್ಲಿ ನಡೆಸಲಾಗುವುದು.
- ಡಾ.ಕೆ.ವಿ. ರಾಜೇಂದ್ರ, ಸಿಇಒ, ಜಿಲ್ಲಾ ಪಂಚಾಯ್ತಿ

**

ಮುಖ್ಯಾಂಶಗಳು

6 ವರ್ಷಗಳಲ್ಲಿ 4,28,689 ಶೌಚಾಲಯ ನಿರ್ಮಾಣ

69,381 ಶೌಚಾಲಯಗಳಿಗೆ ಹಾನಿ

ಹಲವು ಕಾರಣಗಳಿಂದ ಬಳಸುತ್ತಿಲ್ಲ

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)