ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎರಡೂ ಮಾರುಕಟ್ಟೆಗಳಲ್ಲಿ ರೈತರಿಗೆ ಅವಕಾಶ: ಸಚಿವ ಸತೀಶ ಜಾರಕಿಹೊಳಿ

ವರ್ತಕರು, ರೈತರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸಲಹೆ
Published 1 ಜನವರಿ 2024, 15:43 IST
Last Updated 1 ಜನವರಿ 2024, 15:43 IST
ಅಕ್ಷರ ಗಾತ್ರ

ಬೆಳಗಾವಿ: ‘ನಗರದಲ್ಲಿರುವ ಎಪಿಎಂಸಿ ಹಾಗೂ ಜೈ ಕಿಸಾನ್‌ ಮಾರುಕಟ್ಟೆ; ಎರಡೂ ಸದುಪಯೋಗ ಆಗಲಿ. ಎರಡೂ ಮಾರುಕಟ್ಟೆಗಳಲ್ಲಿ ರೈತರಿಗೆ ವ್ಯಾಪಾರಕ್ಕೆ ಅವಕಾಶವಿದೆ. ರೈತರಿಗೆ ಇದರಿಂದ ಅನುಕೂಲ ಆಗಲಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ಎಪಿಎಂಸಿ ಹಾಗೂ ಜೈಕಿಸಾನ್ ಮಾರುಕಟ್ಟೆ ವರ್ತಕರ ಸಭೆಯಲ್ಲಿ ಮಾತನಾಡಿದ ಅವರು, ‘ಎಪಿಎಂಸಿ ಮಾರುಕಟ್ಟೆಯನ್ನು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಲಾಗಿದೆ. ಆದರೆ ಹೊಸದಾಗಿ ಜೈಕಿಸಾನ್ ಮಾರುಕಟ್ಟೆ ಆರಂಭಿಸಿರುವುದರಿಂದ ಎಪಿಎಂಸಿ ಮಾರುಕಟ್ಟೆ ನಷ್ಟ ಅನುಭವಿಸುತ್ತಿದೆ. ಆದ್ದರಿಂದ ಇದಕ್ಕೆ ಜೈಕಿಸಾನ್‌ ಮಾರುಕಟ್ಟೆ ಸಹಕಾರ ಅವಶ್ಯ’ ಎಂದರು.

ಈ ವೇಳೆ ಮಾತನಾಡಿದ ಕೆಲ ಎಪಿಎಂಸಿ ವ್ಯಾಪಾರಿಗಳು ‘ಮಧ್ಯಾಹ್ನ 12ರಿಂದ ರಾತ್ರಿ 12ರವರೆಗೆ ಒಂದೊಂದು ಮಾರುಕಟ್ಟೆ ಮಾತ್ರ ವಹಿವಾಟು ನಡೆಸಬೇಕು’ ಎಂದುರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜೈ ಕಿಸಾನ್ ಮಾರುಕಟ್ಟೆ ವ್ಯಾಪಾರಸ್ಥರು, ‘ನಮ್ಮಲ್ಲಿ ಖರೀದಿಸುತ್ತಿದ್ದ ಗೋವಾ ರಾಜ್ಯದ ವ್ಯಾಪಾರಸ್ಥರು ಸಂಕೇಶ್ವರ ಎಪಿಎಂಸಿಯತ್ತ ಮುಖಮಾಡಿದ್ದಾರೆ. ಅವರನ್ನು ಹಿಡಿದಿಟ್ಟುಕೊಂಡು ಜಿಲ್ಲೆಯ ರೈತರ ತರಕಾರಿ ಮಾರಾಟಕ್ಕಾಗಿ ಬೆಳಿಗ್ಗೆ ಹರಾಜು ಮಾಡದೇ ಮಧ್ಯಾಹ್ನ ಮಾಡುತ್ತಿದ್ದೇವೆ. ಹೀಗಿರುವಾಗ, ಮಧ್ಯಾಹ್ನ ವಹಿವಾಟು ನಿಲ್ಲಿಸುವುದು ಅಸಾಧ್ಯ. ಅದರ ಬದಲಾಗಿ ಅರ್ಧದಷ್ಟು ಖರೀದಿದಾರರು ಹಾಗೂ ವರ್ತಕರು ಮತ್ತು ದಲ್ಲಾಳಿಗಳನ್ನು ವಾಪಸ್ ಎಪಿಎಂಸಿಗೆ ಕಳುಹಿಸುತ್ತೇವೆ. ಎರಡೂ ಕಡೆ ವ್ಯಾಪಾರ ನಡೆಯಲಿ ರೈತರಿಗೆ ಯೋಗ್ಯ ಬೆಲೆ ಹಾಗೂ ಸೌಲಭ್ಯ ಸಿಕ್ಕಲ್ಲಿ ಮಾರಾಟ ಮಾಡಲಿ’ ಎಂದರು.

ಇಬ್ಬರನ್ನೂ ಸಮಾಧಾನ ಮಾಡಿದ ಸಚಿವ, ‘ಸಮಯ ನಿಗದಿ ಮಾಡಿದರೆ ಎರಡೂ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಕುಂಠಿತವಾಗುವುದು. ಆದ್ದರಿಂದ ಎರಡು ಮಾರುಕಟ್ಟೆಯವರು ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಮಂದಿನ ದಿನಗಳಲ್ಲಿ ಸಮಸ್ಯೆ ಹೆಚ್ಚಾದರೆ ಇನ್ನೊಂದು ಬಾರಿ ಸಭೆ ನಡೆಸಿ ಅಗತ್ಯ ನಿರ್ಣಯ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.

‘ಮಾರುಕಟ್ಟೆಗಳಲ್ಲಿ ರೈತರಿಗೆ ಅನುಕೂಲಕರ ವಾತಾವರಣ ಇಲ್ಲ. ಸಮಸ್ಯೆಗಳನ್ನು ಕೇಳುವವರಿಲ್ಲ. ತೂಕದಲ್ಲಿ ವಂಚನೆ ನಡೆಯುತ್ತಿದೆ. ಅಲ್ಲದೇ ಮಾರುಕಟ್ಟೆ ಅಧಿಕಾರಿಗಳು ಹರಾಜು ಕೂಗಲು ರೈತರಿಗೇ ಹೇಳುತ್ತಾರೆ. ರೈತರಿಗೆ ಸಿಗಬೇಕಾದ ಆರೋಗ್ಯ ಸೌಲಭ್ಯ ಇನ್ನೂ ಮಾಡಿಲ್ಲ’ ಎಂದೂ ಕೆಲ ರೈತರು ದೂರಿದರಿ.

‘ರೈತರ ಗೈರು, ತೂಕದಲ್ಲಿ ವ್ಯತ್ಯಾಸ, ದಲ್ಲಾಳಿಗಳ ಉಪಟಳ ಸೇರಿದಂತೆ ಹಲವು ಸಮಸ್ಯೆಗಳು ಮಾರುಕಟ್ಟೆಯಲ್ಲಿವೆ. ಇವುಗಳ ಪರಿಹಾರಕ್ಕೆ ಅಧಿಕಾರಿಗಳು ತುರ್ತು ಕ್ರಮ ವಹಿಸಬೇಕು’ ಎಂದು ಸಚಿವ ತಾಕೀತು ಮಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ‘ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಸರ್ಕಾರ ಕೂಡಲೇ ಹಿಂಪಡೆಯಲಿದೆ. ಆಗ, ಎರಡೂ ಮಾರುಕಟ್ಟೆಗಳ ವ್ಯಾಪಾರಿಗಳಿಗೆ ಅನುಕೂಲ ಆಗಲಿದೆ. ಎರಡೂ ಮಾರುಕಟ್ಟೆಗಳ ರೈತರು, ವ್ಯಾಪಾರಿಗಳ ಮಧ್ಯೆ ಪರಸ್ಪರ ಸಹಕಾರ ಅಗತ್ಯ’ ಎಂದರು.

ಶಾಸಕರಾದ ಆಸೀಫ್ ಸೇಠ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಜಿಲ್ಲಾಕಾರಿ ನೀತೇಶ್ ಪಾಟೀಲ ಕೂಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT