ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರ ಮರಳಿ ಪಡೆಯಲು ಅವಕಾಶ: ಸತೀಶ ಜಾರಕಿಹೊಳಿ

ಬಳಸಿಕೊಳ್ಳಲು ಕಾರ್ಯಕರ್ತರಿಗೆ ಸತೀಶ ಜಾರಕಿಹೊಳಿ ಸೂಚನೆ
Last Updated 26 ಮಾರ್ಚ್ 2021, 14:48 IST
ಅಕ್ಷರ ಗಾತ್ರ

ಬೆಳಗಾವಿ: ‘ಇಪ್ಪತ್ತು ವರ್ಷಗಳ ಹಿಂದೆ ಕಳೆದುಕೊಂಡ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಮರಳಿ ಪಡೆಯುವುದಕ್ಕೆ ಈ ಉಪ ಚುನಾವಣೆ ಮೂಲಕ ಒಳ್ಳೆಯ ಅವಕಾಶ ಬಂದಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ಸ್ಪರ್ಧಿಸಲು ಆಸಕ್ತಿ ಇಲ್ಲವೆಂದು ಹೇಳುವುದಕ್ಕೆ ನಾನು ದೆಹಲಿಗೆ ಹೋಗಿರಲಿಲ್ಲ. ಬೇರೆ ಬೇರೆ ವಿಚಾರಗಳನ್ನು ಹೇಳಲು ತೆರಳಿದ್ದೆ. ನಾನೇ ಸ್ಪರ್ಧಿಸಬೇಕು ಎನ್ನುವುದು ಪಕ್ಷದ ನಿರ್ಧಾರ. ನಮ್ಮ ಮುಖಂಡರು ಸಹ ಅನಿವಾರ್ಯ, ಪರ್ಯಾಯ ಮಾರ್ಗವಿಲ್ಲ ಎಂದು ಹೇಳಿದ್ದರು. ಪರಿಣಾಮ ತಿಂಗಳ ಹಿಂದಿನಿಂದಲೂ ಮಾನಸಿಕವಾಗಿ ಸಿದ್ಧನಾಗಿದ್ದೇನೆ’ ಎಂದು ತಿಳಿಸಿದರು.

‘ಎಲ್ಲ ಕ್ಷೇತ್ರದಲ್ಲಿ ನಮ್ಮದೆ ಆದ ಮತ ಬ್ಯಾಂಕ್ ಇದೆ. ಸರ್ಕಾರದ ದುರಾಡಳಿತದ ಬಗ್ಗೆ ಜನರಿಗೆ ತಿಳಿಸಲಾಗುತ್ತದೆ. ಆಡಳಿತದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಉಪ ಚುನಾವಣೆ ಎದುರಿಸಲಿದ್ದೇವೆ’ ಎಂದರು.

‘ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್‌ ವಿರೋಧಪಕ್ಷದ ನಾಯಕ ಎಸ್.ಆರ್. ಪಾಟೀಲ ಮತ್ತು ಮುಂಬೈ ಕರ್ನಾಟಕ ನಾಯಕರು ಬರಲಿದ್ದಾರೆ. ಸಾವಿರಾರು ಜನರು ಕೆಲಸ ಮಾಡಲು ಸಿದ್ಧರಿದ್ದಾರೆ. ಮುಖಂಡ ಪ್ರಕಾಶ ಹುಕ್ಕೇರಿ ಅವರ ಜೊತೆಗೂ ಮಾತನಾಡಿದ್ದೇನೆ. ಅವರೂ ಪಕ್ಷದ ಪರವಾಗಿ ಇದ್ದಾರೆ’ ಎಂದು ಹೇಳಿದರು.

ನಂತರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಕಾರ್ಯಕರ್ತರು ಕ್ಷೇತ್ರದಾದ್ಯಂತ ಬೂತ್ ಮಟ್ಟದಲ್ಲಿ ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳಬೇಕು. ಕ್ಷೇತ್ರ ವಶಪಡಿಸಿಕೊಳ್ಳಬೇಕು ಎನ್ನುವುದನ್ನು ಮರೆಯಬಾರದು. ಪ್ರಚಾರಕ್ಕಾಗಿ ಕಾರ್ಯಕರ್ತರು ಎಲ್ಲ ಕಡೆಗೂ ಬರಬೇಕೆಂದೇನಿಲ್ಲ. ನಿಮ್ಮ ವ್ಯಾಪ್ತಿಯಲ್ಲಿ ಕೆಲಸ ಮಾಡಿದರೆ ಸಾಕು’ ಎಂದು ತಿಳಿಸಿದರು.

ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ಎಐಸಿಸಿ ಗೋವಾ ವೀಕ್ಷಕ ಸುನೀಲ ಹನುಮಣ್ಣವರ, ಮುಖಂಡರಾದ ರಾಜು ಸೇಠ್, ಡಾ.ವಿ.ಎಸ್. ಸಾಧುನವರ ಇದ್ದರು.

‘ಯಾರನ್ನೋ ಮೆಚ್ಚಿಸಲು ಇನ್ಯಾರನ್ನೋ ನೋಯಿಸುವುದಿಲ್ಲ’

ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿ, ‘ಪಕ್ಷದಿಂದ ಪ್ರಬಲ ಅಭ್ಯರ್ಥಿ ನೀಡಿದ್ದಾರೆ. 25 ವರ್ಷಗಳಿಂದ ಮಾಡಿರುವ ಸಮಾಜ ಸೇವೆ, ಅನುಭವದಿಂದಾಗಿ ಪಕ್ಷಕ್ಕೆ ಒಳ್ಳೆಯ ವಾತಾವರಣ ಇದೆ. ಬಹಳ ಸೂಕ್ಷ್ಮ ಚುನಾವಣೆ ಇದು. ಯಾರ ಮನಸ್ಸಿಗೂ ನೋವು ಮಾಡಲು ಬಯಸುವುದಿಲ್ಲ. ಯಾರನ್ನೋ ಮೆಚ್ಚಿಸಲು ಹೋಗಿ ಯಾರಿಗೋ ನೋವು ಮಾಡಲು ಹೋಗುವುದಿಲ್ಲ. ಸತೀಶ ಅವರ ನಾಯಕತ್ವ ತಿಳಿದುಕೊಳ್ಳುವುದಕ್ಕೂ ಇದು ಆವಕಾಶವಾಗಿದೆ’ ಎಂದರು.

‘ಪಕ್ಷದಿಂದ ಜಾತಿ ರಾಜಕಾರಣ ಮಾಡುವುದಿಲ್ಲ. ಇಲ್ಲಿ ಲಿಂಗಾಯತ ಅಥವಾ ಲಿಂಗಾಯತೇತರ ಎನ್ನುವುದಿಲ್ಲ. ಜಾತ್ಯತೀತ ನಿಲುವಿನ ಮೇಲೆ ಪಕ್ಷವಿದೆ’ ಎಂದು ಪ್ರತಿಕ್ರಿಯಿಸಿದರು.

* ಏ.17ರವರೆಗೆ ಕಾರ್ಯಕರ್ತರು ಪ್ರಾಮಾಣಿಕವಾಗಿ ಶ್ರಮಿಸಬೇಕು. ಸತೀಶ ಜಾರಕಿಹೊಳಿ ಅವರು ಎಂದಿಗೂ ಜಾತಿ ರಾಜಕಾರಣ ಮಾಡಿಲ್ಲ. ಮಹಾತ್ಮರ ಆದರ್ಶ ಇಟ್ಡುಕೊಂಡು ಸಮಾಜ ಮುನ್ನಡೆಸುತ್ತಿದ್ದಾರೆ. ಯಶಸ್ಸು ಖಂಡಿತ ಸಿಗುತ್ತದೆ.

-ಲಕ್ಷ್ಮಿ ಹೆಬ್ಬಾಳಕರ, ಶಾಸಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT