ಮಂಗಳವಾರ, ಮೇ 17, 2022
26 °C

ಅನ್ಯಭಾಷಿಕರ ಸಮೀಕ್ಷೆಗೆ ಆದೇಶ: ಮಹಾರಾಷ್ಟ್ರ ಸರ್ಕಾರದ ಕ್ರಮ ಖಂಡನೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ನಮ್ಮ ಕನ್ನಡಿಗರೆ ಅಧಿಕ ಸಂಖ್ಯೆಯಲ್ಲಿರುವ ಮತ್ತು ಕನ್ನಡ ನಾಡು–ನುಡಿ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಮಹಾರಾಷ್ಟ್ರದ ಜತ್ತ, ಅಕ್ಕಲಕೋಟ ಹಾಗೂ ದಕ್ಷಿಣ ಸೊಲ್ಲಾಪುರದ ಗಡಿ ಭಾಗದಲ್ಲಿ ಅನ್ಯ ಭಾಷಿಕರ ಸಮೀಕ್ಷೆ ನಡೆಸಲು ಮಹಾರಾಷ್ಟ್ರ ಸರ್ಕಾರ ತನ್ನ ಗ್ರಾಮ ಪಂಚಾಯ್ತಿಗಳಿಗೆ ಆದೇಶ ನೀಡಿದೆ ಎನ್ನುವುದು ತುಂಬಾ ಅಸಂಗತ, ಅಪ್ರಸ್ತುತ ಮತ್ತು ಖಂಡನೀಯ’ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಮಹಾರಾಷ್ಟ್ರ ಸರ್ಕಾರದ ಕ್ರಮವನ್ನು ರಾಜ್ಯದ ಕನ್ನಡಿಗರೆಲ್ಲ ವಿರೋಧಿಸುತ್ತೇವೆ. ಅಲ್ಲಿನ ಕನ್ನಡಿಗರನ್ನು ಮಹಾರಾಷ್ಟ್ರ ಸರ್ಕಾರ ಇಂತಹ ಸಮೀಕ್ಷೆಯ ಮೂಲಕ ಹೆದರಿಸುವ ಪ್ರಯತ್ನ ಮಾಡಬಾರದು' ಎಂದು ಹೇಳಿದ್ದಾರೆ.

‘ಸೌಹಾರ್ದ ಮತ್ತು ಸೌಜನ್ಯದಿಂದ ಇರುವ ಮಹಾರಾಷ್ಟ್ರದಲ್ಲಿನ ಕನ್ನಡಿಗರಿಗೆ ಅಲ್ಲಿನ ಸರ್ಕಾರವು ಗೌರವ, ಸಾಂಸ್ಕೃತಿಕ ಮತ್ತು ಶೈಕ್ಷಣಿಕವಾಗಿ ಭದ್ರತೆಯನ್ನು ನೀಡಬೇಕಾದುದು ಸಂವಿಧಾನಾತ್ಮಕವಾದ ಕರ್ತವ್ಯವಾಗಿದೆ. ಆದರೆ, ಅನಗತ್ಯವಾಗಿ ಆಗಾಗ ಗಡಿ ಭಾಗದಲ್ಲಿನ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವ ಕಾರ್ಯವನ್ನು ಮಹಾರಾಷ್ಟ್ರ ಸರ್ಕಾರ ಮಾಡಬಾರದು’ ಎಂದು ಆಗ್ರಹಿಸಿದ್ದಾರೆ.

‘ಅ ಭಾಗದ ಗಡಿ ನಾಡಿನ ಕನ್ನಡಿಗರ ಜೊತೆ ರಾಜ್ಯ ಸರ್ಕಾರ ಸದಾ ಇರುತ್ತದೆ ಮತ್ತು ಸಮಸ್ಯೆಗಳ ನಿವಾರಣೆಗೆ ಸದಾ ಸ್ಪಂದಿಸುತ್ತದೆ’ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು