ಶನಿವಾರ, ಆಗಸ್ಟ್ 13, 2022
24 °C

ಕೋವಿಡೋತ್ತರ ಆರೈಕೆ, ಪುನರ್ವಸತಿ ಕೇಂದ್ರ: ಕೆಎಲ್ಇ ಸಂಸ್ಥೆಯಲ್ಲಿ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕೋವಿಡ್-19 ಸೋಂಕಿಗೆ ಒಳಗಾಗಿ ಗುಣಮುಖರಾದವರಲ್ಲಿ ಕಾಣಿಸಿಕೊಳ್ಳುವ ಇತರ ತೊಂದರೆಗಳಿಗೆ ಚಿಕಿತ್ಸೆ ನೀಡಲು ಇಲ್ಲಿನ ಕೆಎಲ್‍ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ನೂತನವಾಗಿ ಪ್ರಾರಂಭಿಸಿರುವ ‘ಕೋವಿಡೋತ್ತರ ಆರೈಕೆ ಮತ್ತು ಪುನರ್ವಸತಿ ಕೇಂದ್ರ’ವನ್ನು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಶುಕ್ರವಾರ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ‘ಕೊರೊನಾ ವೈರಸ್‌ ಅನ್ನು ಈ ಭಾಗದಲ್ಲಿ ಎದುರಿಸುವಲ್ಲಿ ಪ್ರಭಾಕರ ಕೋರೆ ಆಸ್ಪತ್ರೆಯ ಪಾತ್ರ ಅತ್ಯಂತ ಪ್ರಮುಖವಾದದ್ದು.  ಜಿಲ್ಲಾಡಳಿತೊಂದಿಗೆ ಕೈಜೋಡಿಸಿ ಕೋವಿಡ್ ರಹಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ತನ್ನದೇ ಆದ ಕೊಡುಗೆ ನೀಡಿದೆ’ ಎಂದು ಹೇಳಿದರು.

‘ಕೋವಿಡ್ ಸೋಂಕಿತರ ಚಿಕಿತ್ಸೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿ ನೂತನ ಕಟ್ಟಡವನ್ನು ಅದಕ್ಕಾಗಿಯೇ ಮೀಸಲಿಡಲಾಗಿದೆ. ಇತರ ಸಾಮಾನ್ಯ ರೋಗಿಗಳಿಗೆ ಮುಖ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಾ ಯಾವುದೇ ತೊಂದರೆ ಆಗದಂತೆ ಅಗತ್ಯ ಕ್ರಮ ವಹಿಸಿರುವುದು ಶ್ಲಾಘನೀಯ’ ಎಂದು ತಿಳಿಸಿದರು.

ಸಂಸ್ಥೆಯ ಕಾರ್ಯಾದ್ಯಕ್ಷ ಪ್ರಭಾಕರ ಕೋರೆ ಮಾತನಾಡಿ, ‘ಕೋವಿಡ್ ಸೃಷ್ಟಿಸಿರುವ ಈ ಗಂಭೀರ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಆರೋಗ್ಯ ತೊಂದರೆ ಉಂಟಾಗದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತ್ಯೇಕ ಘಟಕ ಸ್ಥಾಪಿಸಿ 1,300 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಹೆರಿಗೆ, ಹೃದಯ ಶಸ್ತ್ರಚಿಕಿತ್ಸೆ ಸೇರಿದಂತೆ ಅನೇಕ ಶಸ್ತ್ರಚಿಕಿತ್ಸೆ ಕೂಡ ನಡೆಸಲಾಗಿದೆ. ಈ ಭಾಗದ ರೋಗಿಗಳಿಗೆ ತೊಂದರೆ ಆಗದಂತೆ ಅಗತ್ಯ ವೈದ್ಯಕೀಯ ಸೇವೆ ಕಲ್ಪಿಸಲು ಸದಾ  ಕಾರ್ಯಪ್ರವೃತ್ತವಾಗಿದ್ದೇವೆ. ಇತರ ಸಾಮಾನ್ಯ ರೋಗಿಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಹೇಳಿದರು.

ಕೆಎಲ್‍ಇ ಉನ್ನತ ಶಿಕ್ಷಣ ಹಾಗು ಸಂಶೋಧನಾ ಅಕಾಡೆಮಿಯ ಕುಲಪತಿ ಡಾ.ವಿವೇಕ ಸಾವೋಜಿ, ಜೆಎನ್ಎಂಸಿ ಪ್ರಾಚಾರ್ಯೆ ಡಾ.ನಿರಂಜನಾ ಎಸ್. ಮಹಾಂತಶೆಟ್ಟಿ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ, ಕುಲಸಚಿವ ಡಾ.ವಿ.ಎ. ಕೋಠಿವಾಲೆ, ಡಾ.ಎಚ್.ಬಿ. ರಾಜಶೇಖರ, ಡಾ.ವಿ.ಡಿ. ಪಾಟೀಲ, ಡಾ.ಆರ್.ಎಸ್. ಮುಧೋಳ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು