ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆದ ಪ್ರಮುಖ ದೇವಸ್ಥಾನ, ಮಠಗಳು: ಕೋವಿಡ್ ಹೋಗಲಾಡಿಸಲು ಪ್ರಾರ್ಥನೆ

Last Updated 10 ಜುಲೈ 2021, 19:30 IST
ಅಕ್ಷರ ಗಾತ್ರ

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಕೋವಿಡ್ ಎರಡನೇ ಅಲೆಯಿಂದಾಗಿ ಬಾಗಿಲು ಮುಚ್ಚಿದ್ದ ಇಲ್ಲಿನ ಪ್ರಮುಖ ದೇವಸ್ಥಾನಗಳು, ಮಠ–ಮಂದಿರಗಳು ಲಾಕ್‌ಡೌನ್‌ ಸಡಿಲಿಕೆ ಸಿಕ್ಕಿದ್ದರಿಂದಾಗಿ ಭಕ್ತ ಸಮೂಹದ ಪೂಜೆ, ಪ್ರಾರ್ಥನೆಯಿಂದ ಕಂಗೊಳಿಸುತ್ತಿವೆ. ಕೋವಿಡ್‌ನಿಂದ ಜಗತ್ತನ್ನು ಕಾಪಾಡುವಂತೆ ಮತ್ತು ಎಲ್ಲರ ಒಳಿತಿಗಾಗಿ ಜನರು ಪ್ರಾರ್ಥಿಸುತ್ತಿದ್ದಾರೆ.

ಎಲ್ಲ ದೇವಸ್ಥಾನ, ಮಠ ಮಂದಿರಗಳಲ್ಲಿ ಪೂಜಾ ಕೈಂಕರ್ಯಗಳು ಮೊದಲಾದ ಧಾರ್ಮಿಕ ಚಟುವಟಿಕೆಗಳು ಪುನರಾರಂಭಗೊಂಡಿವೆ. ಆರತಿ, ಮಂಗಳಾರತಿ, ಮಹಾಮಂಗಾರತಿ, ಅಲಂಕಾರ, ಅಭಿಷೇಕ, ಮಹಾರುದ್ರಾಭಿಷೇಕ ಮೊದಲಾದವು ನಡೆಯುತ್ತಿವೆ. ಕೋವಿಡ್ ಕಾರ್ಮೋಡ ದೂರವಾಗಿಸಿ ಹೊಸ ಚೈತನ್ಯ ಪಡೆದು ಆರೋಗ್ಯವಂತ ಸದೃಢ ಸಮಾಜ ನಿರ್ಮಾಣ ಮಾಡುವಂತೆ ದೇವರಲ್ಲಿ ಭಕ್ತರು ಮೊರೆ ಇಡುತ್ತಿದ್ದಾರೆ.

ಪೂಜೆ, ಹೋಮಹವನ: ಕೋವಿಡ್ ಹೊಡೆತಕ್ಕೆ ಸಿಲುಕಿ ಬದುಕಿನ ಪ್ರತಿಕ್ಷಣಗಳನ್ನೂ ಕಣ್ಣೀರಿನಲ್ಲಿ ತೊಳೆದ ಕುಟುಂಬಗಳು, ಸಾಕಷ್ಟು ಹಣ, ಅಸ್ತಿ ಇದ್ದರೂ ಬಂಧು–ಮಿತ್ರರನ್ನು ಕೋವಿಡ್‌ನಿಂದ ಉಳಿಸಿಕೊಳ್ಳಲಾಗದ ಶ್ರೀಮಂತರು ದೇವರ ಮೊರೆ ಹೋಗಿ ವಿಶೇಷ ಪೂಜೆ, ಹೋಮ, ಹವನಗಳನ್ನು ನಡೆಸುತ್ತಿದ್ದಾರೆ. ಉದ್ಯೋಗ, ವ್ಯಾಪಾರದಲ್ಲಿ ಯಶಸ್ಸು ನೀಡುವಂತೆ ಕೋರುತ್ತಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಬಾಗಿಲು ಮುಚ್ಚಿದ್ದ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರಮುಖ ದೇವಸ್ಥಾನ, ಮಠಗಳು ಈಗ ಬಾಗಿಲು ತೆರೆದಿವೆ. ಸಾರ್ವಜನಿಕರ ದರ್ಶನಕ್ಕೆ ಮುಕ್ತಗೊಂಡಿವೆ.

ಐತಿಹಾಸಿಕ ಹಿನ್ನಲೆ ಹೊಂದಿರುವ ಸುಕ್ಷೇತ್ರ ಸೊಗಲ ಸೋಮೇಶ್ವರ ದೇವಾಲಯ, ಕಾರಿಮನಿ ಮಲ್ಲಯ್ಯ ಸ್ವಾಮಿ ದೇವಸ್ಥಾನ, ಇಂಚಲ ಶಿವಯೋಗೀಶ್ವರ ಸಾಧು ಸಂಸ್ಥಾನಮಠ, ಮುರಗೋಡದ ಮಹಾಂತ ದುರುದುಂಡೇಶ್ವರ ಮಠ, ಮೂರುಸಾವಿರ ಮಠ, ಬೈಲಹೊಂಗಲದ ಇತಿಹಾಸ ಪ್ರಸಿದ್ಧ ಕಲ್ಲಗುಡಿ ರಾಮಲಿಂಗೇಶ್ವರ, ಮರಡಿ ಬಸವೇಶ್ವರ, ಹನುಮಂತ ದೇವರ, ಗೊಂಬಿ ಗುಡಿ ಈಶ್ವರ, ಮರಡಿ ಗಲ್ಲಿ ಮೈಲಾರಲಿಂಗೇಶ್ವರ, ಶ್ರೀಗುರು ರಾಘವೇಂದ್ರ ಸ್ವಾಮಿ, ಶಿರಡಿ ಶ್ರೀಸಾಯಿ ಬಾಬಾ, ಗ್ರಾಮದೇವತೆಗಳ ದೇವಸ್ಥಾನ ಸೇರಿದಂತೆ ದೊಡವಾಡ, ಬೆಳವಡಿ, ಮೂಗಬಸವ, ತಿಗಡಿ, ಸಂಪಗಾಂವ, ಬಾಂವಿಹಾಳ ಮೊದಲಾದ ಗ್ರಾಮಗಳ ದೇಗುಲಗಳು ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸಿವೆ. ವಿಧಿ–ವಿಧಾನಗಳು ಶ್ರದ್ಧಾ ಭಕ್ತಿಯಿಂದ ನಡೆಯುತ್ತಿವೆ. ಭಕ್ತರ ಸಮ್ಮುಖದಲ್ಲಿ ಪೂಜೆ–ಪುನಸ್ಕಾರ ನಡೆಯುತ್ತಿರುವುದರಿಂದ ಅಲ್ಲಿ ಸಂಭ್ರಮ ಮನೆ ಮಾಡಿದೆ.

ಸರ್ಕಾರದ ಮಾರ್ಗಸೂಚಿ ಪಾಲಿಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಎಲ್ಲರ ಕಷ್ಟಕಾರ್ಪಣ್ಯಗಳನ್ನು ದೂರವಾಗಿಸಿ ನೆಮ್ಮದಿ, ಆರೋಗ್ಯ, ಸಂಪತ್ತು ಎಲ್ಲರಿಗೂ ಸಿಗುವಂತಾಗಲಿ ಎನ್ನುವುದು ಜನರ ಆಶಯವಾಗಿದೆ. ಇದನ್ನು ಈಡೇರಿಸುವಂತೆ ದೈವದ ಮೊರೆ ಹೋಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT