ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಪರಿಹಾರಕ್ಕೆ ಆಗ್ರಹಿಸಿ ಸಂತ್ರಸ್ತರ ಪ್ರತಿಭಟನೆ

ಬೆಳಗಾವಿಯಲ್ಲಿ ಗೋಕಾಕ, ಮೂಡಲಗಿ ತಾಲ್ಲೂಕಿನವರಿಂದ ಆಕ್ರೋಶ
Last Updated 15 ಸೆಪ್ಟೆಂಬರ್ 2021, 15:02 IST
ಅಕ್ಷರ ಗಾತ್ರ

ಬೆಳಗಾವಿ: ‘ಅತಿವೃಷ್ಟಿ ಹಾಗೂ ಘಟಪ್ರಭಾ ನದಿ ಪ್ರವಾಹದಿಂದ ಮನೆ–ಬೆಳೆ ಕಳೆದುಕೊಂಡ ನಮಗೆ ಕೂಡಲೇ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿ ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳ ವಿವಿಧ ಗ್ರಾಮಗಳ ಸಂತ್ರಸ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಮಾಹಿತಿ ಹಕ್ಕು ಕಾರ್ಯಕರ್ತ ಹಾಗೂ ಜೆಡಿಎಸ್ ಮುಖಂಡ ಭೀಮಪ್ಪ ಗಡಾದ ನೇತೃತ್ವದಲ್ಲಿ ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಮನವಿ ಸಲ್ಲಿಸಿದರು. ತಮ್ಮ ಮನೆ ಹಾಗೂ ಬೆಳೆಗಳಿಗೆ ಆಗಿರುವ ಹಾನಿಯ ಫೋಟೊ ಮತ್ತು ಸಲ್ಲಿಸಲಾದ ಮನವಿ ಪತ್ರಗಳನ್ನು ಪ್ರದರ್ಶಿಸಿದರು. ಸರ್ಕಾರದಿಂದ ಈವರೆಗೂ ಸೂಕ್ತ ಪರಿಹಾರ ಸಿಗದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

‘2019ರಲ್ಲಿ ಉಂಟಾದ ಘಟಪ್ರಭಾ ನದಿ ಪ್ರವಾಹದಿಂದಾಗಿ ಗೋಕಾಕ, ಮೂಡಲಗಿ ತಾಲ್ಲೂಕು ವ್ಯಾಪ್ತಿಯಲ್ಲಿ 30 ಗ್ರಾಮಗಳಲ್ಲಿ ಸಾವಿರಾರೂ ಕುಟುಂಬಗಳು ಮನೆಗಳನ್ನು ಕಳೆದುಕೊಂಡಿವೆ. ಸಾವಿರಾರು ಎಕರೆ ಪ್ರದೇಶದ ಬೆಳೆಗಳು ಹಾಳಾಗಿವೆ. ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿ ತಿಂಗಳುಗಳೇ ಉರುಳಿವೆ. ಆದರೆ, ಈವರೆಗೂ ಪರಿಹಾರ ಬಂದಿಲ್ಲ’ ಎಂದು ಅಳಲು ತೋಡಿಕೊಂಡರು.

‘ಅಡಿಬಟ್ಟಿ, ಚಿಗಡೊಳ್ಳಿ, ಮೆಳವಂಕಿ, ಹಡಗಿನಾಳ, ಕಲಾರಕೊಪ್ಪ, ಉದಗಟ್ಟಿ, ಲೋಳಸೂರ, ನಲ್ಲಾನಟ್ಟಿ, ಬಸಳಗುಂದಿ, ಬಳೋಬಾಳ, ಬೀರನಗಡ್ಡಿ, ಹುಣಶ್ಯಾಳ ಪಿ.ಜಿ., ಪುಲಗಡ್ಡಿ, ತಿಗಡಿ, ಮಸಗುಪ್ಪಿ, ಪಟಗುಂದಿ, ಸುಣಧೋಳಿ, ಬೈರನಟ್ಟಿ, ಬೀಸನಕೊಪ್ಪ, ಢವಳೇಶ್ವರ, ಅರಳಿಮಟ್ಟಿ, ಅವರಾದಿ ಮೊದಲಾದ ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಕಬ್ಬು, ಬಾಳೆ, ಹೆಸರು, ಶೇಂಗಾ ಸೇರಿದಂತೆ ವಿವಿಧ ಬೆಳೆಗಳು ಸಂಪೂರ್ಣ ನಾಶವಾದವು. ಇದರಿಂದ ನಾವು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದೇವೆ’ ಎಂದು ತಿಳಿಸಿದರು.

‘ಕಂದಾಯ ಇಲಾಖೆ ಅಧಿಕಾರಿಗಳು ಸಂತ್ರಸ್ತರಿಂದ ದಾಖಲೆಗಳನ್ನು ಪಡೆದಿದ್ದಾರೆ. ಮನೆ ಬಿದ್ದಿರುವ ಸ್ಥಳ ಮತ್ತು ಬೆಳೆ ಹಾನಿ ಕುರಿತು ಸಮೀಕ್ಷೆ, ಜಿಪಿಎಸ್ ಮಾಡಿದ್ದಾರೆ. ಆದರೆ, ತಂತ್ರಾಂಶದಲ್ಲಿ ಲೋಪ-ದೋಷಗಳು, ತಪ್ಪು ವಿಳಾಸ ಮೊದಲಾದ ಕಾರಣದಿಂದ ಪರಿಹಾರ ಬರುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಯಾವುದೇ ಹಾನಿ ಅನುಭವಿಸದ ಕೆಲವರಿಗೆ ಪರಿಹಾರ ಬಂದಿದೆ’ ಎಂದು ಆರೋಪಿಸಿದರು.

‘ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಅರ್ಹ ಸಂತ್ರಸ್ತರಿಗೆ ಪರಿಹಾರ ಸಿಗದಿರಲು ಶಾಸಕರಾದ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರ ಕಚೇರಿಯ ಸಿಬ್ಬಂದಿ ಮತ್ತು ಬೆಂಬಲಿಗರು ಕಾರಣವಾಗಿದ್ದಾರೆ. ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಅನರ್ಹರಿಗೆ ಪರಿಹಾರ ನೀಡಿದ್ದಾರೆ’ ಎಂದು ದೂರಿದರು.

‘ಮಳೆಯಾಶ್ರಿತ ಪ್ರದೇಶದ ರೈತರಿಗೆ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಸಂತ್ರಸ್ತರು ಕೋರಿದರು.

ಇಸ್ಮಾಯಿಲ್ ನದಾಫ, ಲಿಂಗರಾಜ ಅಂಗಡಿ, ಮಹಾದೇವ ನವನಿ, ಶಾಂತವ್ವ ಜಿಡ್ಡಿಮನಿ, ಕುಸುಮಾ ಹುಕ್ಕೇರಿ, ಅನುಶಯಾ ಹೊಡ್ಡಿಹೊಳಿ, ರಾಮಪ್ಪ ಕಟ್ಟಿಮನಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT