ಶನಿವಾರ, ಫೆಬ್ರವರಿ 4, 2023
28 °C
ಹಂದಿಗಳ ಉಪಟಳ ತಾಳಲಾರದೆ ಪ್ರತಿಭಟನೆಗೆ ಇಳಿದ ಸರ್ವಜನಿಕರು 

ಮೂಡಲಗಿ ಪುರಸಭೆ ಮುಂದೆ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಡಲಗಿ: ಪಟ್ಟಣದಲ್ಲಿ ಹಂದಿಗಳ ಕಾಟವು ವಿಪರೀತವಾಗಿದ್ದು, ಹಂದಿಗಳನ್ನು ಸ್ಥಳಾಂತರಿಸಬೇಕು. ಅಭಿವೃದ್ಧಿ ಕಾರ್ಯಗಳಾಗಬೇಕು ಮತ್ತು ಪುರಸಭೆ ಜಾಗ ಅತಿಕ್ರಮಣ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಸಾರ್ವಜನಿಕರು ಮಂಗಳವಾರ ಪುರಸಭೆ ಮುಂದೆ ಧರಣಿ ನಡೆಸಿದರು.

ಹಂದಿಗಳು ಮಕ್ಕಳ ಮೇಲೆ ದಾಳಿ ಮಾಡಿ ಕಚ್ಚಿರುವ ವಿಡಿಯೊ, ಪೋಟೊಗಳನ್ನು ಪ್ರದರ್ಶಿಸಿದರು. ಹಂದಿಗಳ ಓಡಾಟ ರೋಗ ರುಜೀನಗಳಿಗೆ ಆಸ್ಪದ ನೀಡಿದಂತಾಗಿದೆ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳೆಯರು ಪುರಸಭೆ ಸದಸ್ಯರೊಂದಿಗೆ ವಾಗ್ವಾದ ಮಾಡಿ ತಮ್ಮ ಅಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ನೀಡಿದ್ದರು ಸಹ ಹಂದಿಗಳ ಉಪಟಳ ನಿಂತಿಲ್ಲ. ಕೂಡಲೇ ಹಂದಿಗಳನ್ನು ಸ್ಥಳಾಂತರಿಸಿಬೇಕು ಎಂದು ಒತ್ತಾಯಿಸಿದರು.

ಪಿಎಸ್‌ಐ ಎಚ್.ವೈ. ಬಾಲದಂಡಿ ಮಧ್ಯಪ್ರವೇಶಿಸಿ ಹಂದಿಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆಯಲ್ಲಿ ಪುರಸಭೆಯ ಸಿಬ್ಬಂದಿಗೆ ರಕ್ಷಣೆಯನ್ನು ಪೊಲೀಸ್ ಇಲಾಖೆ ನೀಡುತ್ತದೆ ಎಂದರು. ಇದೇ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ ಹಾಗೂ ಮುಖ್ಯಾಧಿಕಾರಿ ದೀಪಕ ಹರ್ದಿ ಸಹ ಒಂದು ವಾರದೊಳಗೆ ಪಟ್ಟಣದಲ್ಲಿರುವ ಹಂದಿಗಳನ್ನು ಸ್ಥಳಾಂತರಿಸಿ ನಿಯಂತ್ರಿಸಲಾಗುವುದು ಎಂದು ಪ್ರತಿಭಟನಾಕಾರರಿಗೆ ಬರವಸೆ ನೀಡಿದರು.

ಪೂರ್ಣಾವಧಿ ಮುಖ್ಯಾಧಿಕಾರಿಗಳು ಇಲ್ಲದೆ ಪುರಸಭೆಯಲ್ಲಿ ಸಾರ್ವಜನಿಕರ ಕೆಲಸಗಳು ಸ್ಥಗಿತಗೊಳ್ಳುತ್ತಲಿದ್ದು, ಕೂಡಲೇ ಪೂರ್ಣಾವಧಿ ಮುಖ್ಯಾಧಿಕಾರಿಗಳನ್ನು ನೇಮಿಸಲು ಆಗ್ರಹಿಸಿದರು. ಅಭಿವೃದ್ಧಿ ಕಾಮಗಾರಿಗಳನ್ನು ಪ್ರಭಾವಿಗಳ ಒತ್ತಡಕ್ಕೆ ತಮಗೆ ಬೇಕಾದ ಸ್ಥಳದಲ್ಲಿ ಮಾಡಿಸಿಕೊಳ್ಳತ್ತಿದ್ದು, ಅದು ನಿಲ್ಲಬೇಕು. ರಸ್ತೆ, ಚರಂಡಿ, ಸ್ವಚ್ಛಗೊಳಿಸುವುದು, ಸ್ಮಶಾನ ಅಭೃವೃದ್ಧಿಪಡಿಸುವ ಕೆಲಸವಾಗಬೇಕು ಎಂದು ಒತ್ತಾಯಿಸಿದರು.

ಲಕ್ಷ್ಮೀನಗರದಲ್ಲಿರುವ ಪುಠಾಣಿ ಪ್ಲಾಟ್‌ದಲ್ಲಿರುವ ಬಾವಿಯನ್ನು ಮುಚ್ಚುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಮುಖ್ಯಾಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಪುರಸಭೆಯ ಸಭೆಯಲ್ಲಿ ಚರ್ಚಿಸಿ ಬಾವಿ ಮುಚ್ಚುವ ತೀರ್ಮಾಣ ತೆಗೆದುಕೊಂಡಿದ್ದರ ಠರಾವು ಪ್ರತಿ ಕೊಡಬೇಕು ಎಂದು ಒತ್ತಾಯಿಸಿದರು.

ಮಲ್ಲಪ್ಪ ಮದಗುಣಕಿ, ಶ್ರೀಶೈಲ ಜೈನಾಪುರ, ಇಜಾಜಅಹ್ಮದ ಕೊಟ್ಟಲಗಿ, ಗುರು ಗಂಗನ್ನವರ, ರಾಮಣ್ಣ ಹಂದಿಗುಂದ, ಚನ್ನಪ್ಪ ಅಥಣಿ, ಈರಪ್ಪ ಢವಳೇಶ್ವರ, ಈರಪ್ಪ ಹುಣಶ್ಯಾಳ, ಪ್ರಭು ತೇರದಾಳ, ಈರಪ್ಪ ಪಾಟೀಲ, ಶಂಕರಯ್ಯ ಹಿರೇಮಠ, ಮಾಯಪ್ಪ ಶೀಲನವರ, ಗುರುಲಿಂಗ ಗೋಕಾಕ ಹಾಗೂ ಲಕ್ಷ್ಮೀನಗರದ ನೂರಾರು ಮಹಿಳೆಯರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು