ಹುಕ್ಕೇರಿ: ನೆರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ, ದಲಿತರಿಗೆ ಸ್ಮಶಾನ ಭೂಮಿ ಒದಗಿಸುವುದು ಸೇರಿದಂತೆ ದಲಿತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಡಾ.ಬಿ.ಆರ್.ಅಂಬೇಡ್ಕರ್ ಜನ ಜಾಗೃತಿ ವೇದಿಕೆಯ ಜಿಲ್ಲಾ ಘಟಕದಿಂದ ಪಟ್ಟಣದಲ್ಲಿ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮಂಜುಳಾ ನಾಯಕ, ಪಿ.ಐ ಮಹಾಂತೇಶ ಬಸ್ಸಾಪುರ ಹಾಗೂ ತಾಲ್ಲೂಕು ಪಂಚಾಯ್ತಿ ಯೋಜನಾಧಿಕಾರಿ ರಾಜು ಡಾಂಗೆ ಅವರಿಗೆ ಮನವಿ ಸಲ್ಲಿಸಿದರು.
‘ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾದ ಕಾರಣ ಪ್ರವಾಹದಿಂದ ನೀರು ಮನೆಗಳಿಗೆ ನುಗ್ಗಿದೆ. ಮನೆಗಳು ಬಿದ್ದಿವೆ. ಸರ್ಕಾರ ಕೂಡಲೇ ಮನೆ ನಿರ್ಮಿಸಿ ಶಾಶ್ವತ ಪರಿಹಾರ ನೀಡಬೇಕು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಪರಿಹಾರ ವಿತರಿಸಲು ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.
‘ತಾಲ್ಲೂಕಿನ ಅವರಗೋಳ ಗ್ರಾಮದಲ್ಲಿ ದಲಿತರಿಗೆ ಮಂಜೂರಾದ ಸ್ಮಶಾನ ಭೂಮಿಗೆ ಹದ್ದು ಬಸ್ತು ಮಾಡಬೇಕು. ವಿವಿಧ ಗ್ರಾಮಗಳಲ್ಲಿ ಹಲವು ದಶಕದಿಂದ ಉಳಿಮೆ ಮಾಡುತ್ತಿರುವ ಸರ್ಕಾರದ ಜಮೀನನ್ನು ಅಕ್ರಮ ಸಕ್ರಮ ಯೋಜನೆಯಡಿ ಮಂಜೂರು ಮಾಡಬೇಕು. ಪೊಲೀಸ್ ಠಾಣೆಗಳಲ್ಲಿ ದಲಿತ ಮುಖಂಡರ ಸಭೆ ಹಾಗೂ ಹಳ್ಳಿಗಳ ದಲಿತ ಕೇರಿಗಳಲ್ಲಿ ಜಾಗೃತಿ ಸಭೆ ನಡೆಸುವುದು, ದಲಿತರ ಮೇಲಿನ ದಾಖಲಿಸಿರುವ ಸುಳ್ಳು ಗೂಂಡಾ ಕಾಯ್ದೆ ಪ್ರಕರಣ ಮರಳಿ ಪಡೆಯಬೇಕು’ ಎಂದು ಮನವಿಯಲ್ಲಿ ತಿಳಿಸಲಾಗಿದೆ.
‘ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ಮಾಡಿದವರಿಗೆ ಶಿಕ್ಷೆ ನೀಡಿ ಹಣ ಮರಳಿ ಪಡೆಯಬೇಕು. ಕೇಂದ್ರ ಸರ್ಕಾರ ರದ್ದು ಗೊಳಿಸಿರುವ ವಿದ್ಯಾರ್ಥಿ ವೇತನ ಪುನಃ ಪ್ರಾರಂಭಿಸಬೇಕು’ ಎಂದಿದ್ದಾರೆ.
ಜಿಲ್ಲಾ ಗೌರವಾಧ್ಯಕ್ಷ ಮಲ್ಲಿಕಾರ್ಜುನ್ ರಾಶಿಂಗೆ, ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ ಹೊಸಮನಿ, ಜಿಲ್ಲಾ ಕಾರ್ಯದರ್ಶಿ ಆನಂದ ಕೆಳಗಡೆ, ಜಿಲ್ಲಾ ಮುಖಂಡ ಬಸವರಾಜ ಕೋಳಿ, ಮಂಜು ಪಡದಾರ, ಕೆಂಪಣ್ಣ ಶಿರಹಟ್ಟಿ, ಮಂಜುನಾಥ ಮರಡಿ, ಕಿರಣ ಕೋಳಿ, ಹುಕ್ಕೇರಿ ಘಟಕದ ಅಧ್ಯಕ್ಷ ಲಕ್ಷ್ಮಣ ಹೂಲಿ, ಸಂಕೇಶ್ವರ ಬ್ಲಾಕ ಅಧ್ಯಕ್ಷ ಪಿಂಟು ಸೂರ್ಯವಂಶಿ, ಯಮಕನಮರಡಿ ಬ್ಲಾಕ ಅಧ್ಯಕ್ಷ ಶ್ರೀನಿವಾಸ ವ್ಯಾಪಾರಿ, ಕಲ್ಲಪ್ಪಾ ಕಟ್ಟಿ, ಶಂಕರ ಖಾತೇದಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.