ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಮ್‌ ಬಿರಿಯಾನಿ ಸ್ವಾದದ ಪುಲಾವ್‌

ಪೂರಿ, ಇಡ್ಲಿ–ವಡಾ, ಉತ್ತಪ್ಪ ಸೇರಿ ವಿವಿಧ ಖಾದ್ಯಗಳು ಲಭ್ಯ
Last Updated 27 ಜುಲೈ 2019, 15:38 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ರಾಮಲಿಂಗಖಿಂಡ ಗಲ್ಲಿಯ ತಿಲಕ್‌ ವೃತ್ತದಲ್ಲಿರುವ ಶ್ರೀ ಮಂಜುನಾಥ ಕೆಫೆಯಲ್ಲಿ ಮಾಡುವ ‘ಪುಲಾವ್‌’ ಧಮ್‌ ಬಿರಿಯಾನಿ ಸ್ವಾದವನ್ನು ಮೀರಿಸುವಂತಿದ್ದು, ಪುಲಾವ್‌ಗಾಗಿ ಪ್ರತಿದಿನ ಹೋಟೆಲ್‌ನಲ್ಲಿ ಗ್ರಾಹಕರು ತುಂಬಿರುತ್ತಾರೆ.

ಹೋಟೆಲ್‌ನಲ್ಲಿ ವಿವಿಧ ಖಾದ್ಯಗಳನ್ನು ತಯಾರಿಸುತ್ತಾರೆ. ಆದರೆ, ಪುಲಾವ್‌ ಇಲ್ಲಿನ ವಿಶೇಷ ಉಪಾಹಾರವಾಗಿದೆ. ಪುಲಾವ್‌ ಸಿದ್ಧಪಡಿಸಲು ರಾಯಲ್‌ ಅಕ್ಕಿ, ಶುದ್ಧ ಅಡುಗೆ ಎಣ್ಣೆ, ವಟಾಣೆ ಕಾಳು, ಏಲಕ್ಕಿ, ಲವಂಗ ಬಳಸುತ್ತಾರೆ. ಸಿದ್ಧವಾದ ಮೇಲೆ ಕೊತ್ತಂಬರಿ ಹಾಗೂ ಹುರಿದ ಈರುಳ್ಳಿಯ ಚಿಕ್ಕ ತುಂಡುಗಳನ್ನು ಉದುರಿಸುತ್ತಾರೆ. ಅದರೊಂದಿಗೆ ಬಾಯಿ ಚಪ್ಪರಿಸುವ ರೈತಾ ಹಾಗೂ ಸಾಂಬಾರ ನೀಡುತ್ತಾರೆ. ಈರುಳ್ಳಿಯ ತುಂಡು ಹಾಗೂ ನಿಂಬೆಹಣ್ಣು ಸಹ ಕೊಡುತ್ತಾರೆ. ಫುಲ್‌ ಪುಲಾವ್‌ಗೆ ₹35 ಹಾಗೂ ಹಾಫ್‌ಗೆ ₹22 ದರವಿದೆ.

‘ಧಮ್‌ ಬಿರಿಯಾನಿ ಮಾದರಿಯಲ್ಲಿಯೇ ಪುಲಾವ್ ಸಿದ್ಧಪಡಿಸುತ್ತೇವೆ. ಗುಣಮಟ್ಟದ ತರಕಾರಿ ಹಾಗೂ ಆಹಾರ ಸಾಮಗ್ರಿಗಳನ್ನೇ ಬಳಸುತ್ತೇವೆ. ಮುಂಚೆಯಿಂದಲೂ ರುಚಿಯ ಗುಣಮಟ್ಟವನ್ನು ಕಾಯ್ದುಕೊಂಡು ಬಂದಿದ್ದೇವೆ’ ಎಂದು ಹೋಟೆಲ್ ಮಾಲೀಕದುರ್ಗಪ್ಪ ನಾಯ್ಕ್ ತಿಳಿಸಿದರು.

ಪೂರಿ ಮತ್ತೊಂದು ವಿಶೇಷ ಖಾದ್ಯ
ಪೂರಿ ಇಲ್ಲಿನ ಇನ್ನೊಂದು ವಿಶೇಷ ಖಾದ್ಯವಾಗಿದೆ. ಬೆಳಿಗ್ಗೆ 7 ಗಂಟೆಯಿಂದಲೇ ಪೂರಿ ಖರೀದಿಗೆ ಗ್ರಾಹಕರು ಹೋಟೆಲ್‌ನಲ್ಲಿ ಜಮಾಯಿಸಿರುತ್ತಾರೆ. ಮಧ್ಯಾಹ್ನ 12 ಗಂಟೆಯವರೆಗೂ ಮಾತ್ರ ಪೂರಿ ಲಭ್ಯವಿರುತ್ತದೆ. ಪಾಲಕರು ಶಾಲೆಗೆ ಹೋಗುವ ಮಕ್ಕಳಿಗೆ ಉಪಾಹಾರಕ್ಕಾಗಿ ಇಲ್ಲಿ ಪೂರಿ, ಇಡ್ಲಿ–ವಡಾ ಖರೀದಿಸಿ ಕೊಟ್ಟು ಕಳಿಸುತ್ತಾರೆ. ಸುತ್ತಲಿನ ಶಾಲಾ–ಕಾಲೇಜುಗಳು, ಮಳಿಗೆಗಳು ಹಾಗೂ ಮನೆಗಳಲ್ಲಿ ಕಾರ್ಯಕ್ರಮಗಳಿದ್ದರೇ ಈ ಹೋಟೆಲ್‌ನಲ್ಲಿ ಊಟ–ಉಪಾಹಾರಕ್ಕಾಗಿ ಆರ್ಡರ್‌ ಕೊಡುತ್ತಾರೆ.

ಹೋಟೆಲ್‌ ಮಾಲೀಕ ದುರ್ಗಪ್ಪ ಅವರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವರಾಗಿದ್ದು, ಕಳೆದ ಒಂದು ವರ್ಷದಿಂದ ಇಲ್ಲಿ ಹೋಟೆಲ್‌ ಆರಂಭಿಸಿದ್ದಾರೆ. ಉಡುಪಿ ಹಾಗೂ ಉತ್ತರ ಕರ್ನಾಟಕ ಶೈಲಿಯ ಖಾದ್ಯಗಳೆರಡನ್ನು ಹೋಟೆಲ್‌ನಲ್ಲಿ ಮಾಡಲಾಗುತ್ತದೆ. ಉತ್ತಪ್ಪ, ಮಸಾಲಾ ದೋಸಾ, ಬೆಣ್ಣೆ ದೋಸಾ, ಶಿರಾ, ಉಪ್ಪಿಟ್ಟು, ಟೊಮೆಟೊ ಆಮ್ಲೆಟ್‌ಗಳನ್ನು ಕೂಡ ರುಚಿಕಟ್ಟಾಗಿ ಸಿದ್ಧಪಡಿಸುತ್ತಾರೆ. ಸ್ವಾದ ಭರಿತ ಚಹಾ ಕೂಡ ಇಲ್ಲಿ ಸಿಗುತ್ತದೆ.

ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9ರವರೆಗೂ ಹೋಟೆಲ್‌ ತೆರೆದಿರುತ್ತದೆ. ಸಂಪರ್ಕಕ್ಕೆ ಮೊಬೈಲ್‌ ಸಂಖ್ಯೆ: 7411617339.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT