ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕೋಡಿ | ನದಿಗಳ ತೀರದಲ್ಲಿ ರೈತರ ಪಂಪ್‌ಸೆಟ್‌: ತಪ್ಪದ ಪರದಾಟ

ಚಂದ್ರಶೇಖರ ಎಸ್. ಚಿನಕೇಕರ
Published 1 ಜುಲೈ 2024, 8:44 IST
Last Updated 1 ಜುಲೈ 2024, 8:44 IST
ಅಕ್ಷರ ಗಾತ್ರ

ಚಿಕ್ಕೋಡಿ: ಮಳೆಗಾಲ ಬಂದರೆ ಸಾಕು ನದಿ ತೀರದ ರೈತರ ಬದುಕು ದುಸ್ತರವಾಗುತ್ತದೆ. ಅದರಲ್ಲೂ ನದಿ ತೀರದಲ್ಲಿ ರೈತರು ನೀರೆತ್ತಲು ಅಳವಡಿಸಿದ ಪಂಪ್‌ಸೆಟ್‌ಗಳನ್ನು ಎತ್ತುವುದೇ ದೊಡ್ಡ ಸಮಸ್ಯೆ.

ಚಳಿಗಾಲ ಹಾಗೂ ಬೇಸಿಗೆಯಲ್ಲಿ ನೀರು ಕೆಳಕ್ಕೆ ಹೋದಂತೆ ರೈತರೂ ತಮ್ಮ ಪಂಪ್‌ಸೆಟ್‌ಗಳನ್ನು ನದಿಯ ಒಡಲಿನೊಳಗೆ ಅಳವಡಿಸುತ್ತ ಹೋಗುತ್ತಾರೆ. ಮಳೆಗಾಲ ಆರಂಭವಾಗುವ ಮುನ್ನ ಅವುಗಳನ್ನು ಎತ್ತಿಕೊಳ್ಳುವುದಿಲ್ಲ. ನದಿ ತೀರಕ್ಕೆ ಹೋಗದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದ ಬಳಿಕ ಸಂಕಷ್ಟಕ್ಕೆ ಸಿಲುಕುತ್ತಾರೆ.

ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಕೃಷ್ಣಾ ಮತ್ತು ಅದರ ಉಪನದಿಗಳಾದ ದೂಧಗಂಗಾ, ವೇದಗಂಗಾ ಹರಿಯುತ್ತಿವೆ. ಒಂದಡೆ, ನದಿ ಉಕ್ಕಿ ಹರಿದು ಪ್ರವಾಹ ಸೃಷ್ಟಿಸುವ ಭೀತಿ. ಮತ್ತೊಂದೆಡೆ, ನದಿ ದಡಕ್ಕೆ ಇಳಿಯಲೇಬೇಕಾದ ಅನಿವಾರ್ಯ. ಪ್ರತಿ ಮಳೆಗಾಲದ ಮೂರು ತಿಂಗಳು ಈ ಪಾಡು ತಪ್ಪಿದ್ದಲ್ಲ.

ನೆರೆಯ ಮಹಾರಾಷ್ಟ್ರದ ಕೊಂಕಣ ಪ್ರದೇಶ, ಕೃಷ್ಣಾ ಜಲಾನಯನ ಪ್ರದೇಶ ಹಾಗೂ ಉಪನದಿಗಳ ಜಲಾನಯನ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಬೀಳುತ್ತದೆ. ಇದರಿಂದ ಯಾವಾಗ ನದಿಗಳಲ್ಲಿ ನೀರು ಹರಿಯುವಿಕೆ ಪ್ರಮಾಣ ಹೆಚ್ಚಾಗುತ್ತದೆ ಎಂಬುದು ಗೊತ್ತೇ ಆಗುವುದಿಲ್ಲ. ಹೊಲ– ಗದ್ದೆಗಳಿಗೆ ನೀರು ಹರಿಸಲು ನದಿ ತೀರದಲ್ಲಿ ಅಳವಡಿಸಿರುವ ಪಂಪ್‌ಸೆಟ್‌ಗಳು ಮುಳುಗುವ ಆತಂಕ ನದಿ ತೀರದ ರೈತರಲ್ಲಿ ಮನೆ ಮಾಡಿದೆ.

ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಯು ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ 90 ಕಿ.ಮೀ.ಗೂ ಹೆಚ್ಚು ದೂರ ಹರಿಯುತ್ತಾಳೆ. ನೂರಾರು ಗ್ರಾಮಗಳ ಜನ ಜಾನುವಾರುಗಳ ಬಾಯಾರಿಕೆ ನೀಗಿಸುತ್ತಾಳೆ. ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು, ಮೆಕ್ಕೆಜೋಳ, ಗೋಧಿ, ತೋಟಗಾರಿಕೆ ಬೆಳೆ ಬೆಳೆಯಲು ಕೃಷ್ಣಾ ಹಾಗೂ ಉಪ ನದಿಗಳೇ ವರದಾನ. ಆದರೆ, ನೀರಾವರಿ ಸೌಕರ್ಯ ಇಲ್ಲದ ಕಾರಣ ರೈತರು ನದಿ ದಡಕ್ಕೇ ಪಂಪ್‌ಸೆಟ್‌ ಇಳಿಸಿ ನೀರು ಪಡೆಯುವ ರೂಢಿ ಮಾಡಿಕೊಂಡಿದ್ದಾರೆ.

ವೈಯಕ್ತಿಕ ಹಾಗೂ ಸಾಮೂಹಿಕವಾಗಿ ನದಿ ನೀರನ್ನು ಕೃಷಿಗಾಗಿ ರೈತರು ಬಳಕೆ ಮಾಡುತ್ತಾರೆ. ವೈಯಕ್ತಿಕವಾಗಿ ಬಳಸುವ ಮೋಟಾರ್‌ಗಳು ಹೆಚ್ಚಾಗಿ 10 ಎಚ್.ಪಿ, 12 ಎಚ್.ಪಿ ಸಾಮರ್ಥ್ಯ, ಸಾಮೂಹಿಕವಾಗಿ ಬಳಸುವ ಮೋಟಾರುಗಳು 15 ಎಚ್.ಪಿ, 20 ಎಚ್.ಪಿ, 100 ಎಚ್.ಪಿ ಸಾಮರ್ಥ್ಯ  ಹೊಂದಿರುತ್ತವೆ. 10 ಎಚ್.ಪಿ ಮೋಟಾರ್ ಬಳಸಿ 8 ರಿಂದ 10 ಎಕರೆ ಜಮೀನಿಗೆ ನೀರು ಬಳಸಬಹುದಾಗಿದೆ. 10 ಎಚ್.ಪಿ ಮೋಟಾರ್ ಅಳವಡಿಸಲು ಕೇಬಲ್, ಸ್ಟಾರ್ಟರ್, ಬೆಂಡ್, ಪೈಪ್, ವಾಲ್ವ್, ಫುಟ್‌ವಾಲ್ವ್ ಸೇರಿದಂತೆ ₹1.50 ಲಕ್ಷ ವೆಚ್ಚ ಮಾಡಬೇಕಾಗುತ್ತದೆ.

ಸಾಮೂಹಿಕ ಬಳಕೆ ಹೇಗೆ: 10ರಿಂದ 15 ರೈತರು ಸೇರಿಕೊಂಡು ಹಣ ಸಂಗ್ರಹಿಸಿ ನೂರಾರು ಎಕರೆಗೆ ಜಮೀನಿಗೆ ನದಿ ನೀರು ಪಡೆದುಕೊಳ್ಳಲು 15 ಎಚ್.ಪಿ, 20 ಎಚ್.ಪಿ ಮೋಟಾರ್‌ಗಳನ್ನು ಅಳವಡಿಸಬೇಕಾಗುತ್ತದೆ. ಇದಕ್ಕೆ ಏನಿಲ್ಲವೆಂದರೂ ₹2 ಲಕ್ಷದಿಂದ ₹3 ಲಕ್ಷ ವೆಚ್ಚವಾಗುತ್ತದೆ.

ಬೃಹತ್ ಗಾತ್ರದ ಮೋಟಾರುಗಳನ್ನು ಹಲವು ರೈತರು ಸೇರಿಕೊಂಡು ಸಣ್ಣ ಪ್ರಮಾಣದ ನೀರಾವರಿ ಯೋಜನೆ ಮಾಡಿಕೊಳ್ಳಲು ಬಳಸುತ್ತಾರೆ. 100 ಎಚ್.ಪಿ ಮೋಟಾರು ಅಳವಡಿಕೆ ಮಾಡಲು ₹40 ಲಕ್ಷದಿಂದ ₹50 ಲಕ್ಷ ವೆಚ್ಚ ಮಾಡಬೇಕಾಗುತ್ತದೆ.

ಬೇಸಿಗೆ ಕಾಲದಲ್ಲಿ ನದಿ ನೀರು ಕಡಿಮೆ ಆಗುವುದರಿಂದ ಮೋಟಾರುಗಳನ್ನು ನೀರಿನ ಸಮೀಪವೇ ಅಳವಡಿಸುವ ರೈತರು ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ ನದಿಯ ಪಾತ್ರದಲ್ಲಿಯೇ ಇದ್ದ ಮೋಟಾರು, ಪಂಪ್‌ಸೆಟ್‌ಗಳನ್ನು ಸುರಕ್ಷಿತ ಸ್ಥಳದಲ್ಲಿ ಅಳವಡಿಸುತ್ತಾರೆ. ಮತ್ತೆ ನೀರು ಬಂದರೆ 10 ಅಡಿ, 15 ಅಡಿ, 20 ಅಡಿ ಆಳದರೆಗೂ ಸ್ಥಳಾಂತರ ಮಾಡಬೇಕಾಗುತ್ತದೆ.

ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಗ್ರಾಮದ ಬಳಿ ಕೃಷ್ಣಾ ನದಿ ತೀರದಲ್ಲಿ ಪಂಪ್‌ಸೆಟ್ ಅಳವಡಿಸಿರುವುದು
ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಗ್ರಾಮದ ಬಳಿ ಕೃಷ್ಣಾ ನದಿ ತೀರದಲ್ಲಿ ಪಂಪ್‌ಸೆಟ್ ಅಳವಡಿಸಿರುವುದು
ಬಾವನ ಸವದತ್ತಿ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ಪಂಪ್‌ಸೆಟ್ ಹೊರ ತೆಗೆಯುತ್ತಿರುವ ರೈತರು – ಪ್ರಜಾವಾಣಿ ಚಿತ್ರ
ಬಾವನ ಸವದತ್ತಿ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ಪಂಪ್‌ಸೆಟ್ ಹೊರ ತೆಗೆಯುತ್ತಿರುವ ರೈತರು – ಪ್ರಜಾವಾಣಿ ಚಿತ್ರ
ಸ್ಥಳಾಂತರಕ್ಕೂ ದುಬಾರಿ ವೆಚ್ಚ
ನದಿ ದಡದಲ್ಲಿ ಅಳವಡಿಸಿದ ಒಮ್ಮೆ ಮೋಟಾರ್ ಪಂಪ್‌ಸೆಟ್ ಸ್ಥಳಾಂತರ ಮಾಡಲು ಕನಿಷ್ಠ 4 ಕಾರ್ಮಿಕರು ಬೇಕು. ಹೀಗೆ 3 ತಿಂಗಳ ಅವಧಿಯಲ್ಲಿ ಕನಿಷ್ಠ ಐದಾರು ಬಾರಿ ಪಂಪ್‌ಸೆಟ್‌ ಜಾಗ ಬಿಟ್ಟು ಜಾಗಕ್ಕೆ ಕೊಂಡೊಯ್ಯಬೇಕಾಗುತ್ತದೆ. ಮಳೆ ಕಡಿಮೆಯಾಗಿ ಹೊಳೆಯ ನೀರು ಇಳಿಮುಖ ಆಗುತ್ತಿದ್ದಂತೆಯೇ ಪುನಃ ಹೊಳೆಯ ಸಮೀಪದಲ್ಲಿಯೇ ಮೋಟಾರುಗಳನ್ನು ಅಳವಡಿಸಬೇಕಾಗುತ್ತದೆ. ಪ್ರತಿ ವರ್ಷ ₹25 ಸಾವಿರದಿಂದ ₹30 ಸಾವಿರ ಸ್ಥಳಾಂತರ ಮಾಡಲು ಖರ್ಚು ಮಾಡಬೇಕಾಗಿದೆ. ಕೆಲವೊಮ್ಮೆ ರಾತೋರಾತ್ರಿ ನದಿಯ ನೀರು 4-5 ಅಡಿ ಏರಿಕೆಯಾದ ಉದಾಹರಣೆಗಳು ಸಾಕಷ್ಟು ಇವೆ. ಅಂಥ ಸಂದರ್ಭದಲ್ಲಿ ನದಿ ತೀರದಲ್ಲಿ ಮೋಟಾರು ತರಲು ತೆರಳಿದ್ದ ರೈತರು ಸಾವನ್ನಪ್ಪಿದ ಗಾಯಗೊಂಡ ಹಲವು ಉದಾಹರಣೆಗಳು ಇವೆ. 2019ರಲ್ಲಿ ಕೃಷ್ಣಾ ನದಿಗೆ ಪ್ರವಾಹ ಬಂದ ಸಂದರ್ಭದಲ್ಲಿ ಪಂಪ್‌ಸೆಟ್‌ ತರಲು ನದಿಗೆ ಇಳಿದಿದ್ದ ಇಬ್ಬರು ಸಾವನ್ನಪ್ಪಿದ್ದರು. ಇದೇ ಪ್ರವಾಹದಲ್ಲಿ ಬಹುಪಾಲು ಪಂಪಸೆಟ್‌ಗಳು ಕೊಚ್ಚಿ ಹೋಗಿವೆ.

ಇವರೇನಂತಾರೆ?

ಪ್ರತಿ ವರ್ಷ ಕೃಷ್ಣಾ ನದಿ ತೀರದಲ್ಲಿ ಮೋಟಾರು ಎತ್ತುವುದು ಕಿತ್ತುಕೊಳ್ಳುವುದು ಸಾಕಾಗಿದೆ. ಸರ್ಕಾರ ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸಬೇಕಿದೆ. ಹಿಪ್ಪರಗಿ ಬ್ಯಾರೇಜ್‌ನ ಹಿನ್ನೀರಿನ ನದಿ ಪಾತ್ರ ಗುರುತಿಸಿ ಶಾಶ್ವತವಾಗಿ ಕಾಂಕ್ರೇಟ್ ಕಟ್ಟೆಗಳನ್ನು ರೈತರಿಗೆ ಸರ್ಕಾರ ಕಟ್ಟಿಸಿಕೊಡಬೇಕಿದೆ.

–ವೃಷಭ್‌ ಶೇಡಬಾಳೆ ರೈತ ಕಲ್ಲೋಳ

ನದಿ ತೀರದಲ್ಲಿ ಅಳವಡಿಸಿದ ಪಂಪ್‌ಸೆಟ್‌ ಸ್ಥಳಾಂತರಕ್ಕೆ ಸರ್ಕಾರ ಇಂತಿಷ್ಟು ಎಂದು ಪ್ರತಿ ವರ್ಷ ಪರಿಹಾರ ನೀಡಬೇಕು. ಅಲ್ಲದೇ ಪ್ರವಾಹ ಬಂದು ಮೋಟಾರುಗಳು ಕೊಚ್ಚಿ ಹೋದಲ್ಲಿ ಅವುಗಳಿಗೂ ಪರಿಹಾರ ನೀಡಿದಲ್ಲಿ ರೈತರಿಗೆ ಅನುಕೂಲವಾಗುತ್ತದೆ.

–ರಮೇಶ ಚೌಗಲಾ ಜನವಾಡ ರೈತ

ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ ಕೃಷ್ಣಾ ನದಿಯ ಇಕ್ಕೆಲಗಳಲ್ಲಿ ಹಿಪ್ಪರಗಿ ಬ್ಯಾರೇಜ್ ಹಿನ್ನೀರಿನ ನದಿ ಪಾತ್ರದಲ್ಲಿ ಶಾಶ್ವತವಾದ ಕಟ್ಟೆಯನ್ನು ಸಂಬಂಧಿಸಿದ ಅಧಿಕಾರಿಗಳು ನಿರ್ಮಾಣ ಮಾಡಬೇಕು. ಇದರಿಂದ ನದಿ ತೀರದ ಅತಿಕ್ರಮಣ ತಡೆಯಬಹುದಾಗಿದೆ. ಮೋಟಾರು ಪಂಪ್‌ಸೆಟ್ ಅಳವಡಿಕೆಗೆ ಅನುಕೂಲವೂ ಆಗಲಿದೆ.

-ಮಲ್ಲಪ್ಪ ಶೇಡಬಾಳೆ ರೈತ ಕಲ್ಲೋಳ

ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಕೃಷ್ಣಾ ಹಾಗೂ ಉಪನದಿಗಳ ತೀರದ ಇಕ್ಕೆಲಗಳಲ್ಲಿ ಮಳೆಗಾದಲ್ಲಿ ಪ್ರತಿ ವರ್ಷ ಪಂಪ್‌ಸೆಟ್‌ ಮೋಟಾರುಗಳನ್ನು ರೈತರು ಮೇಲಿಂದ ಮೇಲೆ ಸ್ಥಳಾಂತರ ಮಾಡುವುದು ಗಮನಕ್ಕೆ ಬಂದಿದೆ. ನದಿ ನೀರಿನ ಏರುವ ಇಳಿಯುವ ಕುರಿತು ಸಮರ್ಪಕ ಮಾಹಿತಿಯನ್ನು ನದಿ ತೀರದ ಜನರಿಗೆ ನೀಡಿದಲ್ಲಿ ಇಂತಹ ಸಮಸ್ಯೆಗಳಿಂದ ಮುಕ್ತರಾಗಬಹುದು. ಇದನ್ನು ನಮ್ಮ ಸಿಬ್ಬಂದಿ ಮಾಡುತ್ತಿದ್ದಾರೆ.

–ಸುಭಾಷ ಸಂಪಗಾವಿ ಉಪ ವಿಭಾಗಾಧಿಕಾರಿ ಚಿಕ್ಕೋಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT