ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಕ್ವಾರಂಟೈನ್‌ ಅವಧಿ ಕಡಿತ; ಆತಂಕದಲ್ಲಿ ವೈದ್ಯಕೀಯ ಸಿಬ್ಬಂದಿ

Last Updated 31 ಮೇ 2020, 2:17 IST
ಅಕ್ಷರ ಗಾತ್ರ

ಬೆಳಗಾವಿ: ಮಾರಕ ರೋಗ ಕೋವಿಡ್‌–19 ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳಿಗೆ ನೀಡಲಾಗುತ್ತಿದ್ದ 14 ದಿನಗಳ ಕ್ವಾರಂಟೈನ್‌ ಅವಧಿಯನ್ನು ಏಳು ದಿನಗಳಿಗೆ ಸರ್ಕಾರ ಕಡಿತಗೊಳಿಸಿದ್ದು, ಇಲ್ಲಿನ ವೈದ್ಯಕೀಯ ಸಿಬ್ಬಂದಿಗಳಲ್ಲಿ ಆತಂಕ ಸೃಷ್ಟಿಸಿದೆ. ತಮ್ಮ ಜೊತೆ ತಮ್ಮ ಕುಟುಂಬದವರ ಆರೋಗ್ಯವನ್ನೂ ಅಪಾಯಕ್ಕೆ ತಂದೊಡ್ಡಿದಂತಾಗಿದೆ ಎನ್ನುವ ಆತಂಕ ಅವರನ್ನು ಕಾಡುತ್ತಿದೆ.

ಆರಂಭದಲ್ಲಿ ಕೋವಿಡ್‌–19 ಪ್ರಕರಣಗಳು ಬೆಳಕಿಗೆ ಬಂದಾಗ ವೈದ್ಯಕೀಯ ಸಿಬ್ಬಂದಿಗಳನ್ನು 14 ದಿನಗಳವರೆಗೆ ಕ್ವಾರಂಟೈನ್‌ನಲ್ಲಿ ಇಡಲಾಗುತ್ತಿತ್ತು. ಅವರ ಊಟ, ವಸತಿ ಹಾಗೂ ಸುರಕ್ಷತೆಯ ಎಲ್ಲ ಕ್ರಮಗಳನ್ನು ಸರ್ಕಾರವೇ ವಹಿಸಿಕೊಳ್ಳುತ್ತಿತ್ತು. ಸಿಬ್ಬಂದಿಗಳ ಗಂಟಲು ದ್ರವವನ್ನು 12 ದಿನ ಪರೀಕ್ಷಿಸಿ, ಸೋಂಕು ತಗುಲಿಲ್ಲ ಎನ್ನುವುದು ಖಾತರಿಯಾದ ನಂತರ 14 ದಿನಗಳ ನಂತರ ಕ್ವಾರಂಟೈನ್‌ನಿಂದ ಬಿಡುಗಡೆ ಮಾಡಿ, ಮನೆಗೆ ಕಳುಹಿಸಿಕೊಡಲಾಗುತ್ತಿತ್ತು. ಇದರಿಂದಾಗಿ ಸಿಬ್ಬಂದಿಗಳ ಆರೋಗ್ಯ ಹಾಗೂ ಅವರ ಕುಟುಂಬದವರ ಆರೋಗ್ಯವೂ ಸುರಕ್ಷಿತವಾಗಿರುತ್ತಿತ್ತು.

ಆದರೆ, ಈಗ ಸರ್ಕಾರವು ತನ್ನ ಮಾರ್ಗಸೂಚಿಗಳನ್ನು ಬದಲಾಯಿಸಿ ಕ್ವಾರಂಟೈನ್‌ ಅವಧಿಯನ್ನು 7 ದಿನಕ್ಕೆ ಇಳಿಸಿದೆ. ಮರುದಿನವೇ ಸಿಬ್ಬಂದಿ ಪುನಃ ಕೆಲಸಕ್ಕೆ ಹಾಜರಾಗಬೇಕಾಗಿದೆ.

ಸಿಬ್ಬಂದಿಗಳ ಕೊರತೆ ಕಾರಣ?

ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಸಾಕಷ್ಟಿದೆ. ಕೋವಿಡ್‌–19 ಸೋಂಕಿತರಿಗೆ ಚಿಕಿತ್ಸೆ ನೀಡಲು ಸಿಬ್ಬಂದಿಗಳ ಕೊರತೆ ಇದೆ. ಸದ್ಯ ಲಭ್ಯವಿರುವ ಸಿಬ್ಬಂದಿಗಳನ್ನೇ ಶಿಫ್ಟ್‌ವಾರು ಬಳಸಿಕೊಳ್ಳಲಾಗುತ್ತಿದೆ. ಒಂದು ವಾರ ಶಿಫ್ಟ್‌ ಪೂರೈಸಿದ ನಂತರ ಸಿಬ್ಬಂದಿಗಳನ್ನು ಕ್ವಾರಂಟೈನ್‌ನಲ್ಲಿ ಇಡಲಾಗುತ್ತದೆ. ಈ ಅವಧಿಯಲ್ಲಿ ಇನ್ನೊಂದು ಶಿಫ್ಟ್‌ನವರು ಚಿಕಿತ್ಸೆಯಲ್ಲಿ ತೊಡಗುತ್ತಾರೆ.

14 ದಿನಗಳವರೆಗೆ ಕ್ವಾರಂಟೈನ್‌ನಲ್ಲಿ ಇಟ್ಟಾಗ ಸಿಬ್ಬಂದಿಗಳ ಕೊರತೆ ಕಾಡುತ್ತಿತ್ತು. ಈ ಕಾರಣಕ್ಕಾಗಿಯೇ ಕ್ವಾರಂಟೈನ್‌ ಅವಧಿಯನ್ನು 7 ದಿನಗಳವರೆಗೆ ಸರ್ಕಾರ ಇಳಿಸಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದು ಸಂಪೂರ್ಣ ಸುರಕ್ಷತೆ ಅಲ್ಲ. ಕ್ವಾರಂಟೈನ್‌ನಲ್ಲಿ ಇದ್ದಾಗ 5ನೇ ದಿನ ಗಂಟಲು ದ್ರವ ಪರೀಕ್ಷಿಸುತ್ತಾರೆ. ಸೋಂಕು ಕಂಡುಬರದಿದ್ದರೆ 7ನೇ ದಿನಕ್ಕೆ ಮನೆಗೆ ಕಳುಹಿಸಿಕೊಡುತ್ತಾರೆ. ನಂತರ ಅವರು ಪುನಃ ಕೆಲಸಕ್ಕೆ ಹಾಜರಾಗಬೇಕಾಗುತ್ತದೆ.

ಮನುಷ್ಯನ ದೇಹದೊಳಗೆ ಪ್ರವೇಶಿಸಿದೊಡನೆ ಕೊರೊನಾ ವೈರಾಣು ಲಕ್ಷಣಗಳನ್ನು ತೋರುವುದಿಲ್ಲ. 3 ದಿನಗಳಿಂದ ಒಂದು ವಾರ, ಅಥವಾ 10 ದಿನಗಳವರೆಗೆ ಲಕ್ಷಣಗಳನ್ನು ತೋರುವ ಸಾಧ್ಯತೆ ಇರುತ್ತದೆ. ಹೀಗಾಗಿ ಸುರಕ್ಷತಾ ದೃಷ್ಟಿಯಿಂದ ಮೊದಲಿದ್ದಂತೆ 14 ದಿನಗಳವರೆಗೆ ಕ್ವಾರಂಟೈನ್‌ ಇಡಬೇಕು ಎಂದು ಕೆಲವು ಸಿಬ್ಬಂದಿಗಳು ಅಳಲು ತೋಡಿಕೊಂಡಿದ್ದಾರೆ.

‘ಕೋವಿಡ್‌–19 ಸೋಂಕಿತರಿಗೆ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಎಲ್ಲರಿಗೂ ಮಾಸ್ಕ್‌ ಹಾಗೂ ಸುರಕ್ಷಾ ಕವಚಗಳನ್ನು (ಪಿಪಿಇ) ನೀಡಲಾಗಿದೆ. ಒಂದು ವಾರ ಕೆಲಸ ಮಾಡಿದ ನಂತರ ಕ್ವಾರಂಟೈನ್‌ನಲ್ಲಿ ಇಡುತ್ತಾರೆ. ಊಟ, ವಸತಿ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ. ನಮ್ಮ ಸುರಕ್ಷತೆಗಾಗಿ ಅಗತ್ಯ ಕ್ರಮಕೈಗೊಳ್ಳಲಾಗಿದೆ’ ಎಂದು ನರ್ಸ್‌ವೊಬ್ಬರು ಹೇಳಿದರು.

‘ಕೇವಲ ನಮ್ಮ ಸುರಕ್ಷತೆ ಅಲ್ಲ, ನಮ್ಮ ಕುಟುಂಬದವರ ಸುರಕ್ಷತೆಯನ್ನೂ ನಾವು ನೋಡಬೇಕಾಗಿದೆ. ತರಾತುರಿಯಲ್ಲಿ ನಾವು ಮನೆಗೆ ಹೋದರೆ, ನಮ್ಮಿಂದ ಸೋಂಕು ಮನೆಯವರೆಗೆ ಅಂಟುಕೊಂಡರೆ ಏನು ಮಾಡಬೇಕು. ಅದಕ್ಕಾಗಿ 14 ದಿನಗಳ ಕ್ವಾರಂಟೈನ್ ಇಡುವುದೇ ವಾಸಿ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಶಿಕಾಂತ ಮುನ್ಯಾಳ ದೂರವಾಣಿ ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT