ಸೋಮವಾರ, ಆಗಸ್ಟ್ 19, 2019
28 °C
ವಾರದಲ್ಲಿ ಉದ್ಯಮ ವಲಯಕ್ಕೆ ₹ 70 ರಿಂದ ₹ 80 ಕೋಟಿ ನಷ್ಟ

ಮಳೆ: ಮಾರುಕಟ್ಟೆ ಮೇಲೆ ದುಷ್ಪರಿಣಾಮ

Published:
Updated:

ಬೆಳಗಾವಿ: ಧಾರಾಕಾರ ಮಳೆಯಿಂದ ನಗರದ ಉದ್ಯಮಬಾಗ ಹಾಗೂ ಮಚ್ಚೆ ಕೈಗಾರಿಕಾ ವಲಯಕ್ಕೆ ಭಾರಿ ಹೊಡೆತ ಬಿದ್ದಿದೆ. 

‘ಒಂದು ವಾರದಿಂದ ಧಾರಾಕಾರ ಮಳೆ ಇರುವುದರಿಂದ ಬಹುತೇಕ ಕಾರ್ಖಾನೆಗಳು ಮುಚ್ಚಿದ್ದು, ಒಟ್ಟು ₹ 70 ರಿಂದ ₹ 80 ಕೋಟಿ ನಷ್ಟವಾಗಿದೆ’ ಎಂದು ಇಲ್ಲಿನ ಎ.ಕೆ.ಪಿ. ಪೌಂಡ್ರೀಸ್‌ನ ವ್ಯವಸ್ಥಾಪಕ ಫರಾಖ್‌ ಭಂಡಾರಿ ‘ಪ್ರಜಾವಾಣಿ’ಗೆ ತಿಳಿಸಿದರು.  

ಉದ್ಯಮಬಾಗ ಹಾಗೂ ಮಚ್ಚೆ ನಗರದ ಪ್ರಮುಖ ಕೈಗಾರಿಕಾ ವಲಯಗಳಾಗಿದ್ದು, ನಗರ ಸೇರಿ ತಾಲ್ಲೂಕಿನ ವಿವಿಧ ಗ್ರಾಮಗಳ ಜನರು ಇಲ್ಲಿನ ಕಾರ್ಖಾನೆಗಳಿಗೆ ಕೆಲಸಕ್ಕೆ ಬರುತ್ತಾರೆ. ಪ್ರತಿದಿನ ₹ 20 ರಿಂದ ₹ 25 ಕೋಟಿಯ ಉತ್ಪನ್ನಗಳು ಇಲ್ಲಿ ಸಿದ್ಧವಾಗುತ್ತವೆ. ಮಳೆಯ ಆವಾಂತರದಿಂದ ಉದ್ಯಮ ವಲಯಕ್ಕೆ ಕೋಟ್ಯಂತರ ನಷ್ಟ ಉಂಟಾಗಿದೆ. 

ಸಾಮಗ್ರಿಗಳಿಗೂ ಹಾನಿ: ಭಾರಿ ಮಳೆಯಿಂದ ಮಳೆ ಹಾಗೂ ಚರಂಡಿಯ ನೀರು ಕೆಲವು ಕಾರ್ಖಾನೆಗಳಿಗೂ ನುಗ್ಗಿ ಸಾಮಗ್ರಿಗಳಿಗೆ ಹಾನಿಯಾಗಿದೆ. ಇದರಿಂದಲೂ ಕಾರ್ಖಾನೆಯವರು ನಷ್ಟ ಅನುಭವಿಸುವಂತಾಗಿದೆ. ಕಾರ್ಖಾನೆಗಳಲ್ಲಿನ ನೀರನ್ನು ಮೋಟಾರ್‌ ಮೂಲಕ ಹೊರಹಾಕಲಾಗುತ್ತಿದೆ. ಜೊತೆಗೆ ಕಾರ್ಖಾನೆಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿರುವುದು ಹಾಗೂ ನೀರು ಪೂರೈಕೆ ಸ್ಥಗಿತಗೊಳಿಸಲಾಗಿರುವುದರಿಂದ ಕಾರ್ಖಾನೆಗಳನ್ನು ಮುಚ್ಚಲಾಗಿದೆ.  

ಕಾರ್ಖಾನೆಗಳಿಗೆ ಬರುವ ಕಾರ್ಮಿಕರ ಬಡಾವಣೆ ಹಾಗೂ ಗ್ರಾಮಗಳಲ್ಲಿ ನೀರು ತುಂಬಿಕೊಂಡಿರುವುದು ಹಾಗೂ ರಸ್ತೆ  ಸಂಪರ್ಕ ಕಡಿತಗೊಂಡಿರುವುದರಿಂದ ಕಾರ್ಮಿಕರು ಕೆಲಸಕ್ಕೆ ಬರಲು ಸಾಧ್ಯವಾಗದಂತಾಗಿದೆ. 

ಮಾರುಕಟ್ಟೆಗೂ ನಷ್ಟ: ‘ಸತತ ಮಳೆಯಿಂದ ತರಕಾರಿ ಮಾರುಕಟ್ಟೆಯ ಮೇಲೂ ಪರಿಣಾಮ ಉಂಟಾಗಿದ್ದು, ನಾಲ್ಕು ದಿನಗಳಿಂದ ಸಗಟು ತರಕಾರಿ ಮಾರುಕಟ್ಟೆಗೆ ತರಕಾರಿ ಹಾಗೂ ಇನ್ನಿತರ ಉತ್ಪನ್ನಗಳ ಸಾಗಾಟ ಹಾಗೂ ಮಾರಾಟ ಸಾಧ್ಯವಾಗದೇ ಇರುವುದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ’ ಎಂದು ಕೃಷಿ ಉತ್ಪನ್ನ ಮಾರಾಟ ಇಲಾಖೆಯ ಕಾರ್ಯದರ್ಶಿ ಡಾ.ಕೋಡಿಗೌಡ ಪ್ರತಿಕ್ರಿಯಿಸಿದರು. 

ಚಿಲ್ಲರೆ ಮಾರುಕಟ್ಟೆಯಲ್ಲಿ ಮಳೆಯಿಂದ ವ್ಯಾಪಾರಿಗಳು ತರಕಾರಿ ಹಾಗೂ ಹಣ್ಣುಗಳನ್ನು ಮಾರಾಟಕ್ಕಿಡುವುದೂ ಕಷ್ಟವಾಗಿದೆ. ಸತತ ಮಳೆಯಿಂದ ಜನರು ಮಾರುಕಟ್ಟೆಯತ್ತ ಬರುತ್ತಿಲ್ಲ. ಪ್ರವಾಹದಿಂದ ನಗರವನ್ನು ಸಂಪರ್ಕಿಸುವ ಎಲ್ಲ ಪ್ರಮುಖ ರಸ್ತೆಗಳು ಸೇರಿ ಸುತ್ತಲಿನ ಗ್ರಾಮಗಳ ರಸ್ತೆಗಳು ಸ್ಥಗಿತಗೊಂಡಿರುವುದರಿಂದ ತರಕಾರಿ ಹಾಗೂ ಹಣ್ಣು ಹಂಪಲುಗಳ ಪೂರೈಕೆಯೂ ಆಗುತ್ತಿಲ್ಲ. ಇದರಿಂದ ರೈತರು ಹಾಗೂ ವ್ಯಾಪಾರಿಗಳು ಕಂಗಾಲಾಗಿದ್ದಾರೆ.

ಕಳೆದ ಬುಧವಾರ ನಗರದ ಹಣ್ಣಿನ ಮಾರುಕಟ್ಟೆಯಲ್ಲಿ ಮೊಣಕಾಲುದ್ದ ನೀರು ತುಂಬಿಕೊಂಡಿದ್ದು, ವ್ಯಾಪಾರ–ವಹಿವಾಟು ಸ್ಥಗಿತಗೊಳಿಸಲಾಗಿದೆ. ಲಕ್ಷಾಂತರ ರೂಪಾಯಿ ನಷ್ಟವೂ ಉಂಟಾಗಿದೆ.   

ಔಷಧ, ಕಿರಾಣಿ ಅಂಗಡಿ ಸೇರಿ ಇನ್ನಿತರ ಮಳಿಗೆಗಳು ಜಲಾವೃತವಾಗಿರುವುದರಿಂದ ಹಾಗೂ ಸತತ ಮಳೆಯಿಂದ ವ್ಯಾಪಾರ ಸ್ಥಗಿತಗೊಳಿಸಿವೆ. 

Post Comments (+)