ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಮಳೆ ತಗ್ಗಿದರೂ, ಜಲಾಶಯಗಳ ಒಳಹರಿವು ಹೆಚ್ಚಳ

ಕೊಚ್ಚಿ ಹೋಗಿದ್ದ ವ್ಯಕ್ತಿಯ ಶವ ಪತ್ತೆ: ಕೃಷ್ಣಾ ಮತ್ತು ಉಪ ನದಿಗಳಿಗೆ ನೀರಿನ ಹರಿವಿನಲ್ಲಿ ಏರಿಕೆ
Last Updated 20 ಜೂನ್ 2021, 19:12 IST
ಅಕ್ಷರ ಗಾತ್ರ

ಬೆಳಗಾವಿ: ನಾಲ್ಕು ದಿನಗಳಿಂದ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಅಬ್ಬರಿಸಿದ್ದ ಮಳೆ ಭಾನುವಾರ ವಿರಾಮ ನೀಡಿದೆ. ಆದರೆ, ಜಲಾಶಯಗಳ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.

ಬೆಳಗಾವಿ ತಾಲ್ಲೂಕಿನ ಕಾಕತಿ ಸಮೀಪದಲ್ಲಿ ಮಾರ್ಕಂಡೇಯ ನದಿ ಪ್ರವಾಹದಲ್ಲಿ ಶುಕ್ರವಾರ ಸಂಜೆ ಕೊಚ್ಚಿ ಹೋಗಿದ್ದ ವ್ಯಕ್ತಿಯ ಶವ ಭಾನುವಾರ ಪತ್ತೆಯಾಗಿದೆ.

ನೆರೆಯ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ತಗ್ಗಿದೆಯಾದರೂ ಅಲ್ಲಿಂದ ಕೃಷ್ಣಾ ಮತ್ತು ಉಪ ನದಿಗಳಿಗೆ ಬಂದು ಸೇರುವ ನೀರಿನ ಹರಿವಿನಲ್ಲಿ ಏರಿಕೆ ಕಂಡುಬಂದಿದೆ. ಆ ರಾಜ್ಯದ ರಾಜಾಪುರ ಬ್ಯಾರೇಜ್‌ನಿಂದ 91,125 ಕ್ಯುಸೆಕ್ ಹಾಗೂ ದೂಧ್‌ಗಂಗಾ ನದಿ
ಯಿಂದ 28,593 ಕ್ಯುಸೆಕ್ ಸೇರಿ ಒಟ್ಟು 1,19,718 ಕ್ಯುಸೆಕ್ ನೀರು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಸೇರುತ್ತಿದೆ. ಶನಿವಾರಕ್ಕೆ ಹೋಲಿಸಿದರೆ 4 ಸಾವಿರ ಕ್ಯುಸೆಕ್‌ ಹೆಚ್ಚಾಗಿದೆ.

ಕೃಷ್ಣಾ ನದಿಗೆ ಕಲ್ಲೋಳ ಬಳಿ ನಿರ್ಮಿಸಿರುವ ಕಲ್ಲೋಳ–ಯಡೂರ ಹಾಗೂ ದೂಧ್‌ಗಂಗಾ ನದಿಗೆ ಮಲಿಕವಾಡ ಬಳಿ ಕಟ್ಟಿರುವ ಮಲಿಕವಾಡ–ದತ್ತವಾಡ ಸೇತುವೆಯಲ್ಲಿ ಸಂಚಾರ ಬಂದ್ ಇದೆ. ಸದಲಗಾ–ಬೋರಗಾಂವ, ಯಕ್ಸಂಬಾ–ದಾನವಾಡ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿದೆ. ಘಟಪ್ರಭಾ ಜಲಾಶಯಕ್ಕೆ 3,3799 ಕ್ಯುಸೆಕ್ ಹಾಗೂ ಮಲ‍ಪ್ರಭಾ ಜಲಾಶಯಕ್ಕೆ 36,073 ಕ್ಯುಸೆಕ್ ಒಳಹರಿವಿತ್ತು.

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಅಬ್ಬರಿಸಿದ್ದ ಮೃಗಶಿರಾ ನಕ್ಷತ್ರದ ಮಳೆಯು, ಭಾನುವಾರ ಸ್ವಲ್ಪ ಬಿಡುವು ಪಡೆಯಿತು. ಕುಮಟಾ, ಹೊನ್ನಾವರ ಹಾಗೂ ಭಟ್ಕಳದಲ್ಲಿ ಮಾತ್ರ ಜೋರಾಗಿ ಮಳೆ ಬಂತು. ಕಾರವಾರದಲ್ಲಿ ಶನಿವಾರ ತಡರಾತ್ರಿ ಮತ್ತು ಭಾನುವಾರ ಬೆಳಿಗ್ಗೆ ಕೆಲವು ನಿಮಿಷ ವರ್ಷಧಾರೆಯಾಯಿತು. ಅಂಕೋಲಾದಲ್ಲಿ ಉತ್ತಮ ಮಳೆಯಾಗಿದ್ದು, ಎರಡು ಮನೆಗಳಿಗೆ ಮತ್ತು ಒಂದು ದನದ ಕೊಟ್ಟಿಗೆಗೆ ಭಾಗಶಃ ಹಾನಿಯಾಗಿದೆ. ಉಳಿದಂತೆ, ಶಿರಸಿ, ಯಲ್ಲಾಪುರ, ಸಿದ್ದಾಪುರ ಭಾಗಗಳಲ್ಲಿ ಮಳೆಯ ಪ್ರಮಾಣ ಇಳಿಕೆಯಾಗಿತ್ತು. ‌

ಆಲಮಟ್ಟಿಗೆ 13 ಟಿಎಂಸಿ ಅಡಿ ನೀರು: ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಸುರಿಯುತ್ತಿದ್ದ ಮಳೆ ಭಾನುವಾರ ಕಡಿಮೆಯಾಗಿದ್ದು, ನೆರೆಯ ಆತಂಕ ದೂರವಾಗಿದೆ. ಭಾನುವಾರ ಈ ವರ್ಷದ ಗರಿಷ್ಠ 13 ಟಿಎಂಸಿ ಅಡಿ ನೀರು ಆಲಮಟ್ಟಿ ಜಲಾಶಯಕ್ಕೆ ಹರಿದು ಬಂದಿದೆ.

ಕರಾವಳಿ: ಹಲವು ಮನೆಗಳಿಗೆ ಹಾನಿ
ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಭಾನುವಾರ ಆಗಾಗ ಬಿಡುವುಕೊಟ್ಟು ಬಿರುಸಿನ ಮಳೆ ಸುರಿಯಿತು. ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯಾಗಿದೆ. ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ತಾಲ್ಲೂಕಿನಲ್ಲಿ ಮಳೆಯಾಗಿದೆ.

ಉಡುಪಿ ತಾಲ್ಲೂಕಿನ ಶಿವಳ್ಳಿ, ಕಾಪು ತಾಲ್ಲೂಕಿನ ಪಡು, ಪಲಿಮಾರು, ಕಾರ್ಕಳ ತಾಲ್ಲೂಕಿನ ನಿಟ್ಟೆ, ಹೆಬ್ರಿ ತಾಲ್ಲೂಕಿನಲ್ಲಿ ಹಲವು ಮನೆಗಳಿಗೆ ಹಾನಿಯಾಗಿದೆ. ಕಾಪು ತಾಲ್ಲೂಕಿನಲ್ಲಿ ಸಿಡಿಲು ಬಡಿದು ಹಲವು ಮನೆಗಳಿಗೆ ಹಾನಿಯಾಗಿದೆ. ಕುಂಜೂರು ದುರ್ಗಾ ದೇವಸ್ಥಾನದ ಮುಂಭಾಗ ಜಲಾವೃತಗೊಂಡಿದೆ. ಬೆಳಪು, ಅದಮಾರು, ಎರ್ಮಾಳು, ಮಜೂರು, ಕುತ್ಯಾರು, ಇನ್ನಂಜೆಯಲ್ಲಿ ನೆರೆಭೀತಿ ಸೃಷ್ಟಿಯಾಗಿದೆ. 24 ಗಂಟೆಗಳಲ್ಲಿ 9.1 ಸೆಂ.ಮೀ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆ ಕಳಸ, ಎನ್‌.ಆರ್‌.ಪುರದಲ್ಲಿ ಉತ್ತಮ ಮಳೆಯಾಗಿದೆ.

ರಸ್ತೆಯಲ್ಲಿ ಉರುಳಿದ ಮಳೆ
ಶಿವಮೊಗ್ಗ: ಜಿಲ್ಲೆಯಲ್ಲಿ ಭಾನುವಾರ ಮಳೆ ಕೊಂಚ ಬಿಡುವು ನೀಡಿದ್ದು, ತೀರ್ಥಹಳ್ಳಿ, ಆನಂದಪುರದಲ್ಲಿ ಆಗಾಗ್ಗೆ ತುಂತುರು ಮಳೆ ಹಾಗೂ ಬಿಸಿಲು ಇತ್ತು.

ಶನಿವಾರ ಸುರಿದ ಮಳೆಗೆ ಆನಂದಪುರ– ತೀರ್ಥಹಳ್ಳಿ ರಸ್ತೆಯಲ್ಲಿ ಮರ ರಸ್ತೆಯ ಮೇಲೆ ಉರುಳಿದ್ದು, ಕೆಲವು ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ತೀರ್ಥಹಳ್ಳಿ ತಾಲ್ಲೂಕಿನ ಇಂಗ್ಲಾದಿ ಬಳಿ ರಸ್ತೆ ಕುಸಿದಿದೆ. ಹೆದ್ದಾರಿ ಅಕ್ಕಪಕ್ಕದ ಯಡೇಹಳ್ಳಿ, ಕೊರಲಿಕೊಪ್ಪ, ಅಂದಾಸುರ ಮತ್ತಿತರರ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT