ಬುಧವಾರ, ಜುಲೈ 28, 2021
21 °C

ಏತ ನೀರಾವರಿ ಯೋಜನೆಗೆ ಬಳಸಿ: ಕಾರಜೋಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಇತ್ತೀಚೆಗೆ ಸುರಿದ ಮಳೆಯಿಂದ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಲ್ಲಿ ಸದ್ಯಕ್ಕೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಸಂಗ್ರಹ ಆಗುತ್ತಿರುವುದರಿಂದ ಹೆಚ್ಚುವರಿ ನೀರನ್ನು ಏತ ನೀರಾವರಿ ಮತ್ತು ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳಬೇಕು’ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸೂಚನೆ ನೀಡಿದರು.

ಮುಂಗಾರು ಮಳೆಯಿಂದ ತೊಂದರೆಗೊಳಗಾದ ಪ್ರದೇಶಗಳಲ್ಲಿ ಕೈಗೊಂಡಿರುವ ಕ್ರಮಗಳು ಹಾಗೂ ಕೋವಿಡ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜಲಾಶಯಗಳ ಒಟ್ಟು ಸಂಗ್ರಹ ಸಾಮರ್ಥ್ಯದ ಶೇ.80ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗುವ ನೀರನ್ನು ಮುಳವಾಡ, ರಾಂಪೂರ ಮತ್ತಿತರ ಏತ ನೀರಾವರಿ ಯೋಜನೆಗಳಿಗೆ ಬಿಡುಗಡೆ ಮಾಡಬೇಕು. ಅಂತೆಯೇ ಕುಡಿಯುವ ನೀರು ಅಗತ್ಯವಿದ್ದರೆ ಜಲಾಶಯಗಳಿಂದ ನೀರು ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು’ ಎಂದು ಪ್ರಾದೇಶಿಕ ಆಯುಕ್ತ ಆಮ್ಲಾನ್‌ ಆದಿತ್ಯ ಬಿಸ್ವಾಸ್ ಅವರಿಗೆ ನಿರ್ದೇಶನ ನೀಡಿದರು.

‘ನಿರೀಕ್ಷೆಗಿಂತ ಮುಂಚೆಯೇ ಜಲಾಶಯಗಳಲ್ಲಿ ಹೆಚ್ಚಿನ‌ ಪ್ರಮಾಣದ ನೀರು ಸಂಗ್ರಹ ಆಗಿರುವುದರಿಂದ ಈ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

‘ನೆರೆಯ ಮಹಾರಾಷ್ಟ್ರದಲ್ಲಿ ಹಾಗೂ ಕೃಷ್ಣಾ ನದಿಯ ಅಚ್ಚುಕಟ್ಟು ಪ್ರದೇಶದಲ್ಲಿ ಉತ್ತಮ ಮಳೆ ಆಗಿರುವುದರಿಂದ ಆಲಮಟ್ಟಿ ಜಲಾಶಯ ಈ ತಿಂಗಳಲ್ಲೇ ಶೇ.80ರಷ್ಟು ಭರ್ತಿಯಾಗುವ ಸಾಧ್ಯತೆಗಳಿವೆ’ ಎಂದು ನೀರಾವರಿ ಇಲಾಖೆಯ ಎಂಜಿನಿಯರ್ ಸಿ.ಡಿ. ಪಾಟೀಲ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.