ಬೆಳಗಾವಿ: 'ರಾಜಭವನ ಸಂಪೂರ್ಣ ಒತ್ತಡದಲ್ಲಿ ಕೆಲಸ ಮಾಡುತ್ತಿದೆ. ದೇಶದಲ್ಲಿರುವ ಬಿಜೆಪಿಯೇತರ ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸುವುದೇ ಕೇಂದ್ರ ಸರ್ಕಾರದ ಉದ್ದೇಶ' ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಆರೋಪಿಸಿದರು.
ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಡಿರುವ ಆರೋಪಕ್ಕೆ ನ್ಯಾಯಾಲಯದಲ್ಲಿ ಉತ್ತರ ಸಿಗಲಿದೆ. ನಮಗೆ ಜಯ ಸಿಕ್ಕೇ ಸಿಗುತ್ತದೆ. ನ್ಯಾಯಾಂಗದ ಮೇಲೆ, ಭಾರತದ ಸಂವಿಧಾನದ ಮೇಲೆ ವಿಶ್ವಾಸವಿದೆ' ಎಂದು ಹೇಳಿದರು.
'ಕಾಂಗ್ರೆಸ್ ಎಂದೆಂದಿಗೂ ಬಡವರ ಪರ. ಬಡವರಿಗಾಗಿಯೇ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಕೇಂದ್ರ ಸರ್ಕಾರವೇ ಶ್ರೀಮಂತರ ₹16 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದೆ' ಎಂದು ಹೇಳಿದರು.