ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಕ್ಕೆ ಸಲಹೆ ಕೊಡುವುದು ತಪ್ಪಾ?: ಶಾಸಕ ರಾಜು ಕಾಗೆ

Published 4 ಅಕ್ಟೋಬರ್ 2023, 15:49 IST
Last Updated 4 ಅಕ್ಟೋಬರ್ 2023, 15:49 IST
ಅಕ್ಷರ ಗಾತ್ರ

ಕಾಗವಾಡ(ಬೆಳಗಾವಿ ಜಿಲ್ಲೆ): ‘ಸರ್ಕಾರದಲ್ಲಿ ಕೆಲ ವೈಫಲ್ಯಗಳು ಇರುವ ಕಾರಣ ನಾನು ಕೆಲ ಸಲಹೆಗಳನ್ನು ನೀಡಿದ್ದೇನೆ ಹೊರತು ಸರ್ಕಾರದ ವಿರುದ್ಧ ಮಾತನಾಡಿಲ್ಲ. ಸಲಹೆ ಕೊಡುವುದು ತಪ್ಪಾ?’ ಎಂದು ಶಾಸಕ ರಾಜು ಕಾಗೆ ಪ್ರಶ್ನಿಸಿದರು.

ತಾಲ್ಲೂಕಿನ ಉಗಾರ ಗ್ರಾಮದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಾಗವಾಡ ಮತಕ್ಷೇತ್ರದಲ್ಲಿ ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕೆಲ ಅಧಿಕಾರಿಗಳು ಗ್ರಾಮ ಪಂಚಾಯಿತಿಗೆ ಬರುತ್ತಿಲ್ಲ. ಇದರಿಂದ ಸರ್ಕಾರಿ ಯೋಜನೆಗಳು ಜನರಿಗೆ ಸಕಾಲಕ್ಕೆ ತಲುಪುತ್ತಿಲ್ಲ’ ಎಂದರು.

‘ನನ್ನನ್ನೂ ಸೇರಿ ಹಲವು ಜನಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ನಮ್ಮಲ್ಲಿ ಹಲವು ನ್ಯೂನತೆಗಳಿವೆ. ಚುನಾವಣೆಯಲ್ಲಿ ನೀಡಿದ ಆಶ್ವಾಸನೆಗಳನ್ನು ಈಡೇರಿಸಲು ಕೆಲ ತಾಂತ್ರಿಕ ತೊಂದರೆಗಳಿವೆ. ಈ ವಿಚಾರವಾಗಿ ನಾನು ಮಾತನಾಡಿದ್ದೇನೆ. ಸರ್ಕಾರ ಮುಜುಗರಕ್ಕೆ ಒಳಗಾಗುವ ಹೇಳಿಕೆ ಕೊಟ್ಟಿಲ್ಲ’ ಎಂದು ತಿಳಿಸಿದರು.

‘ಮಹಾತ್ಮ ಗಾಂಧೀಜಿ, ಬಸವೇಶ್ವರ, ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ತತ್ವ, ಸಿದ್ಧಾಂತಗಳು ಮತ್ತು ಸಂವಿಧಾದನ ಆಶಯಗಳಿಗೆ ಅನುಸಾರ ನಾವು ಕೆಲಸ ಮಾಡಬೇಕು. ಆದರೆ, ಅದರಂತೆ ನಾವು ಕೆಲಸ ಮಾಡದ ಕಾರಣ ಶಾಸಕಾಂಗ, ಕಾರ್ಯಾಂಗದ ಕೆಲ ವೈಫಲ್ಯಗಳ ಬಗ್ಗೆ ಮಾತನಾಡಿದ್ದೇನೆ.  ನಾನು ಹಿಂದೆ ನೀಡಿದ್ದ ಹೇಳಿಕೆಗೆ ಈಗಲೂ ಬದ್ಧ. ಅದನ್ನು ತಪ್ಪಾಗಿ ಅರ್ಥ ಮಾಡಿಕೊಂಡರೆ, ಅದು ನನ್ನ ತಪ್ಪಲ್ಲ’ ಎಂದರು.

‘ಸರ್ಕಾರ ರಚನೆಯಾಗಿ ನಾಲ್ಕೈದು ತಿಂಗಳಾದರೂ ಅನುದಾನ ಬಿಡುಗಡೆಯಾಗಿಲ್ಲ. ರಸ್ತೆ, ಸಮುದಾಯ ಭವನ, ಶಾಲೆ, ದೇವಸ್ಥಾನ ನಿರ್ಮಾಣ ಮತ್ತಿತರ ಬೇಡಿಕೆಗಳನ್ನು ಸ್ಥಳೀಯರು ಸಲ್ಲಿಸುತ್ತಾರೆ. ಆದರೆ, ಅದಕ್ಕೆ ಸ್ಪಂದಿಸಲು ಆಗುತ್ತಿಲ್ಲ. ಶಾಸಕರ ನಿಧಿಗೆ ₹50 ಲಕ್ಷ ಹಾಕಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಜಿಲ್ಲಾಧಿಕಾರಿ ಈ ಬಗ್ಗೆ ಯಾವುದೇ ಆದೇಶ ಪತ್ರ ನೀಡಿಲ್ಲ. ಹಾಗಾಗಿ ನಾವು ಖಾಲಿ ಕೂತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT