ಶನಿವಾರ, ಜನವರಿ 23, 2021
19 °C
ಲಕ್ಷ್ಮಿ ಹೆಬ್ಬಾಳಕರಗೆ ಸಚಿವ ರಮೇಶ ಜಾರಕಿಹೊಳಿ ತಿರುಗೇಟು

ಬೆಳಗಾವಿ ಗ್ರಾಮೀಣ ಕ್ಷೇತ್ರ ನನ್ನದು: ಹೆಬ್ಬಾಳಕರಗೆ ಸಚಿವ ಜಾರಕಿಹೊಳಿ ತಿರುಗೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಬೆಳಗಾವಿ ಗ್ರಾಮೀಣ ಕ್ಷೇತ್ರ ನನ್ನದು. ನಾನು ತಯಾರು ಮಾಡಿದ್ದದು. ಈಗ ಅಲ್ಲಿ ಯಾರೇ ಗೆದ್ದಿರಬಹುದು. ಆದರೆ ಅಲ್ಲಿನ ಜನರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇನೆ. ಅಲ್ಲಿ ಎಲ್ಲ ರೀತಿಯ ಅಭಿವೃದ್ಧಿ ಕೆಲಸಗಳನ್ನೂ ಮಾಡುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

‘ನಾನು ಗೋಕಾಕ ಕ್ಷೇತ್ರವನ್ನು ಎಂದಿಗೂ ಬಿಡುವುದಿಲ್ಲ. ಗ್ರಾಮೀಣಕ್ಕೆ ಬರುವುದಿಲ್ಲ. ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸಬೇಕು ಎನ್ನುವ ಉದ್ದೇಶವಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.

‘ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸ್ಥಾಪನೆ ಸಂಬಂಧ ಗ್ರಾಮೀಣ ಕ್ಷೇತ್ರದಲ್ಲಿ ಒಂದು ಕೆರೆ ನಿರ್ಮಾಣ ಯೋಜನೆ ರದ್ದಾಗಿತ್ತು. ಅದಕ್ಕೆ ಪರ್ಯಾಯವಾಗಿ ಮತ್ತೊಂದು ಕೆರೆ ಕಟ್ಟಿ ಕೊಡುವ ವ್ಯವಸ್ಥೆ ಮಾಡುತ್ತಿದ್ದೇನೆ. ಆ ಪ್ರದೇಶಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆ. ಅದನ್ನು ಗೋಕಾಕ, ಅರಭಾವಿ ರೀತಿ ಅಭಿವೃದ್ಧಿಪಡಿಸುತ್ತೇನೆ. ಅಲ್ಲಿ ಯಾರನ್ನಾದರೂ ಸೋಲಿಸುವುದು ಅಥವಾ ಗೆಲ್ಲಿಸುವುದು ನಮ್ಮ ಹಕ್ಕು. ಗೆಲ್ಲುವುದಕ್ಕಾಗಿ ಹೋರಾಟ ಮಾಡುವುದು ಅಪರಾಧವೇ?’ ಎಂದು ಕೇಳಿದರು.

ಅವರು ಪ್ರಚಾರ ಪ್ರಿಯರು: ‘ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮುಖಭಂಗವಾಗಿದೆ’ ಎಂಬ ಶಾಸಕಿ ಲಕ್ಷ್ಮಿ  ಹೆಬ್ಬಾಳಕರ ಹೇಳಿಕೆಗೆ ತಿರುಗೇಟು ನೀಡಿದ ಅವರು, ‘ಬಿಜೆಪಿ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದಾರೆ. ಎಲ್ಲ ಅಂಕಿ–ಅಂಶವನ್ನು ಶೀಘ್ರವೇ ಹಾಜರುಪಡಿಸುತ್ತೇನೆ. ದೊಡ್ಡ ಸಮಾರಂಭ ನಡೆಸಿ, ಲೆಕ್ಕ ನೀಡುತ್ತೇನೆ. ಆ ಶಾಸಕಿ ಹಾಗೂ ಅವರ ಗಾಡ್‌ಫಾದರ್ ಪ್ರಚಾರ ಪ್ರಿಯರು. ಆದರೆ, ನಾನು ಹಂಗಲ್ಲ. ಕೆಲಸ ಮಾಡಿ ತೋರಿಸುತ್ತೇನೆ. ಹತಾಶೆಯಿಂದಾಗಿ ಶಾಸಕರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ನಮ್ಮ ವಿರೋಧಿಗಳು ಪ್ರಬಲರು ಎಂದುಕೊಂಡೇ ಕೆಲಸ ಮಾಡುತ್ತೇನೆ. ಸುಳೇಭಾವಿಯಲ್ಲಿ ನನ್ನ ಬೆಂಬಲಿತರಾದ ಜಿಲ್ಲಾ ಪಂಚಾಯಿತಿ ಸದಸ್ಯೆ ಸ್ಪರ್ಧಿಸಿದ್ದು ನನಗೆ ಗೊತ್ತಿರಲಿಲ್ಲ. ಅವರು ಸೋತಿದ್ದು ಹಾಗೂ ಅಂಕಲಗಿ ಕ್ಷೇತ್ರದ್ದನ್ನು ಮಾತ್ರವೇ ಶಾಸಕಿ ಹೇಳುತ್ತಿದ್ದಾರೆ. ಉಳಿದ ಕಡೆ ಕಾಂಗ್ರೆಸ್‌ ಬೆಂಬಲಿತರು ಸೋತಿದ್ದನ್ನು ಹೇಳುತ್ತಿಲ್ಲವೇಕೆ?’ ಎಂದು ಕೇಳಿದರು.

ಕಾನೂನು ಪ್ರಕಾರ ಕ್ರಮ: ‘ಗ್ರಾಮ ಪಂಚಾಯಿತಿ ಚುನಾವಣೆಯು ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ದಿಕ್ಸೂಚಿಯಾಗುವುದಿಲ್ಲ. ಎರಡೂ ಬೇರೆ ಬೇರೆ’ ಎಂದರು.

‘ಗುವಾಹಟಿಯ ಕಾಮಕ್ಯ ದೇವಾಲಯಕ್ಕೆ ಭೇಟಿ ನೀಡಿದ್ದಾಗ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಅವರು ಅಕಸ್ಮಾತ್ ಭೇಟಿಯಾದರು. ಅವರೂ ದೇವರ ದರ್ಶನಕ್ಕೆ ಬಂದಿದ್ದರು. ರಾಜಕೀಯ ಚರ್ಚೆಯಾಗಿಲ್ಲ. ಎಲ್ಲರಿಗೂ ಒಳ್ಳೆಯಾಗಲಿ. ಕೊರೊನಾ ತೊಲಗಲಿ ಎಂದು ಪ್ರಾರ್ಥಿಸಿದ್ದೇನೆ’ ಎಂದು ತಿಳಿಸಿದರು.

‘ನಗರಪಾಲಿಕೆ ಮುಂಭಾಗ ಕನ್ನಡ ಧ್ವಜವನ್ನು ಹೋರಾಟಗಾರರು ಹಾರಿಸಿದ್ದಾರೆ. ಈ ವಿಷಯದಲ್ಲಿ ಕಾನೂನು ಪ್ರಕಾರ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು