ಬೆಳಗಾವಿ: ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ ಆರ್‌ಸಿಯು

ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (ಆರ್‌ಸಿಯು) ವ್ಯಾಪ್ತಿಯಲ್ಲಿ 2020-21ನೇ ಸಾಲಿಗೆ ಸ್ನಾತಕ ಕೋರ್ಸ್‌ಗಳ ಪ್ರಥಮ ಸೆಮಿಸ್ಟರ್‌ಗಳಿಗೆ ಪ್ರವೇಶ ಪಡೆಯಲು ಡಿ.1ರಿಂದ ಡಿ.5ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಈ ಮೊದಲು ನ.10ರಂದು ಪ್ರವೇಶ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು. ಆದರೆ, ದ್ವಿತೀಯ ಪಿಯು ಪೂರಕ ಪರೀಕ್ಷೆಯ ಫಲಿತಾಂಶ ನ. 13ರಂದು ಪ್ರಕಟವಾಗಿತ್ತು. ಆ ಪರೀಕ್ಷೆಯಲ್ಲಿ ತೇರ್ಗಡೆಯಾದ ನೂರಾರು ವಿದ್ಯಾರ್ಥಿಗಳು ಪದವಿ ಕೋರ್ಸ್‌ಗೆ ಪ್ರವೇಶ ಪಡೆಯಲು ಆಗದೆ, ಒಂದು ವರ್ಷ ಕಳೆದುಕೊಳ್ಳುವ ಆತಂಕಕ್ಕೆ ಒಳಗಾಗಿದ್ದರು. ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ನ.29ರಂದು ‘ಸಿಗದ ಪ್ರವೇಶ: ವಿದ್ಯಾರ್ಥಿಗಳಿಗೆ’ ತೊಂದರೆ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿ ಗಮನಸೆಳೆಯಲಾಗಿತ್ತು.
ಸ್ಪಂದಿಸಿದ ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಪ್ರವೇಶದ ಅವಧಿ ವಿಸ್ತರಿಸಿದ್ದಾರೆ.
‘ಈ ಸಾಲಿನಲ್ಲಿ ಇದು ವಿದ್ಯಾರ್ಥಿಗಳಿಗೆ ಕೊನೆಯ ಅವಕಾಶವಾಗಿದೆ. 200–300 ವಿದ್ಯಾರ್ಥಿಗಳಿಗೆ ತೊಂದರೆ ಆಗಿದ್ದನ್ನು ಪರಿಗಣಿಸಿ, ಪ್ರವೇಶ ಅವಧಿ ವಿಸ್ತರಿಸಲಾಗಿದೆ. ಇದನ್ನು ಅವರು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಕುಲಪತಿ ತಿಳಿಸಿದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.