ಶನಿವಾರ, ಏಪ್ರಿಲ್ 1, 2023
23 °C
ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಕ್ರಮ

ರುಕ್ಮಿಣಿನಗರ ಸ್ಲಂಗೆ ‘ಸ್ಮಾರ್ಟ್‌’ ಸ್ಪರ್ಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ರುಕ್ಮಿಣಿ ನಗರದಲ್ಲಿರುವ ಕೊಳೆಗೇರಿಯನ್ನು ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಮಾದರಿಯಾಗಿ ರೂಪಿಸಲು ಯೋಜಿಸಲಾಗಿದೆ.

ಈ ಕುರಿತು, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ನೇತೃತ್ವದಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸ್ಮಾರ್ಟ್‌ ಸಿಟಿ ಯೋಜನೆಯ ಸಲಹಾ ವೇದಿಕೆಯ ಸಭೆಯಲ್ಲಿ ಚರ್ಚಿಸಲಾಯಿತು.

ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ಮಾತನಾಡಿ, ‘ರುಕ್ಮಿಣಿ ನಗರ ಕೊಳೆಗೇರಿ ಅಭಿವೃದ್ಧಿಗೆ ₹ 6.55 ಕೋಟಿ ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ. ಅಲ್ಲಿ ಮೂಲಸೌಲಭ್ಯಗಳ ಸುಧಾರಣೆ ಮಾಡಲಾಗುವುದು. ಇತರ ಬಡಾವಣೆಗಳಲ್ಲಿ ಇರುವಂತೆ ಅಲ್ಲಿಯೂ ರಸ್ತೆ, ಚರಂಡಿಗಳನ್ನು ನಿರ್ಮಿಸಲಾಗುವುದು. ಅಲ್ಲಲ್ಲಿ 3 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಗುವುದು. ಅಂಗನವಾಡಿ, ಸಮುದಾಯ ಭವನ ಕಟ್ಟಿಕೊಡಲಾಗುವುದು. ಆ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಸರ್ಕಾರಿ ಶಾಲೆಯನ್ನು ಮೇಲ್ದರ್ಜೆಗೇರಿಸಿ, ಸ್ಮಾರ್ಟ್‌ ಕ್ಲಾಸ್‌ಗೆ ಬೇಕಾಗುವ ಉಪಕರಣಗಳನ್ನು ಅಳವಡಿಸಲಾಗುವುದು. ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಉದ್ಯಾನ ಅಭಿವೃದ್ಧಿ: ‘ಅಲ್ಲಿ ಮಾರುಕಟ್ಟೆ ನಿರ್ಮಿಸಲಾಗುವುದು. ಲಭ್ಯವಿರುವ ಜಾಗದಲ್ಲಿ ಹಿರಿಯ ನಾಗರಿಕರು ಹಾಗೂ ಮಕ್ಕಳಿಗೆ ಉದ್ಯಾನ ಅಭಿವೃದ್ಧಿಪಡಿಸಲಾಗುವುದು. ಅಲ್ಲಿ  3,400 ಮನೆಗಳಿವೆ. ಇವುಗಳ ಪೈಕಿ ಪೌರಕಾರ್ಮಿಕರ ಮನೆಗಳೂ ಇವೆ. ಅವರೆಲ್ಲರಿಗೂ ನಾಗರಿಕ ಸೌಲಭ್ಯ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿದೆ. ಶೀಘ್ರವೇ ಟೆಂಡರ್ ಕರೆದು ತಿಂಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು’ ಎಂದು ತಿಳಿಸಿದರು.

ಯೋಜನೆಗೆ ಸಭೆಯು ಮೆಚ್ಚುಗೆ ವ್ಯಕ್ತಪಡಿಸಿತು.

‘ಕೋವಿಡ್–19 ಲಾಕ್‌ಡೌನ್‌ ಹಾಗೂ ಮಳೆಯಿಂದಾಗಿ ಕಾಮಗಾರಿಗಳು ಸ್ಥಗಿತಗೊಂಡಿದ್ದವು. ಅಲ್ಲಲ್ಲಿ ಪುನರಾರಂಭ ಮಾಡಲಾಗಿದೆ’ ಎಂದು ಕುರೇರ ತಿಳಿಸಿದರು.

‘ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕೆಲಸದ ವೇಳೆ ನಾಗರಿಕರಿಗೆ ತೊಂದರೆ ಆಗದಂತೆ ಸಂಬಂಧಿಸಿದ ಎಲ್ಲ ಇಲಾಖೆಗಳವರೂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಅರ್ಧಕ್ಕೆ ಸ್ಥಗಿತವಾಗಿರುವ ಕಾಮಗಾರಿಗಳನ್ನು ಮುಗಿಸಲು ಆದ್ಯತೆ ನೀಡಬೇಕು’ ಎಂದು ಸುರೇಶ ಅಂಗಡಿ ಸೂಚಿಸಿದರು.

ತೆರವಿಗೆ ಕ್ರಮವಾಗಲಿ: ‘ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ, ಅವುಗಳನ್ನು ಬೀದಿ ಬದಿ ವ್ಯಾಪಾರಿಗಳು ಬಳಸಿಕೊಳ್ಳುತ್ತಿದ್ದಾರೆ. ಕಸ ಚೆಲ್ಲಿ ಹೋಗುತ್ತಾರೆ. ಇದರಿಂದ ನಗರದ ಸೌಂದರ್ಯ ಹಾಳಾಗುತ್ತಿದೆ. ಆ ವ್ಯಾಪಾರಿಗಳಿಗೆಂದೇ ಜಾಗ ನಿಗದಿಪಡಿಸಲಾಗಿದೆ. ಅವುಗಳನ್ನು ಅವರು ಬಳಸುವಂತೆ ನಗರಪಾಲಿಕೆಯವರು ನೋಡಿಕೊಳ್ಳಬೇಕು. ಅತಿಕ್ರಮಣ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಶಶಿಧರ ಕುರೇರ ಒತ್ತಾಯಿಸಿದರು.

‘ಈ ನಿಟ್ಟಿನಲ್ಲಿ ನಗರಪಾಲಿಕೆ ಹಾಗೂ ಪೊಲೀಸರು ಕ್ರಮ ಕೈಗೊಳ್ಳಬೇಕು’ ಎಂದು ಸಚಿವರು ಸೂಚಿಸಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅನಿಲ ಬೆನಕೆ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ನಗರಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್, ಉಪವಿಭಾಗಾಧಿಕಾರಿ ಅಶೋಕ ತೇಲಿ, ಸಮಿತಿಯ ಸದಸ್ಯೆ ಡಾ.ಸೋನಾಲಿ ಸರ್ನೋಬತ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು