ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಅಭ್ಯರ್ಥಿ ಚರ್ಚೆ ಈಗ ಅಪ್ರಸ್ತುತ: ಸತೀಶ ಜಾರಕಿಹೊಳಿ

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ
Last Updated 1 ಜನವರಿ 2021, 12:57 IST
ಅಕ್ಷರ ಗಾತ್ರ

ಬೆಳಗಾವಿ: ‘ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಚರ್ಚೆ ಈಗ ಅಪ್ರಸ್ತುತ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎದುರಿಸಿ ಪಕ್ಷ ಅಧಿಕಾರಕ್ಕೆ ತರಲಾಗುವುದು. ಆ ಬಳಿಕ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರ ನಿರ್ಧಾರದಂತೆ ಮತ್ತು ಹೈಕಮಾಂಡ್ ನಿರ್ದೇಶನದಂತೆ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದು ತೀರ್ಮಾನವಾಗುತ್ತದೆ’ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಧ್ಯೆ ಭಿನ್ನಾಭಿಪ್ರಾಯವಿದೆಯಲ್ಲಾ ಎಂಬ ಪ್ರಶ್ನೆಗೆ, ‘ಅವರಲ್ಲಿ ಏನೇ ಇದ್ದರೂ ಕಾರ್ಯಕರ್ತರು ಒಗ್ಗಟ್ಟಾಗಿದ್ದಾರೆ. ಕಾರ್ಯಕರ್ತರ ಮೇಲೆ ಪಕ್ಷ ನಡೆಯುತ್ತದೆ’ ಎಂದು ಪ್ರತಿಕ್ರಿಯಿಸಿದರು.

‘ಮುಖಂಡ ಸಿ.ಎಂ. ಇಬ್ರಾಹಿಂ ಅವರೊಂದಿಗೆ ಚರ್ಚಿಸಿದ್ದೇನೆ. ಅವರು ಪಕ್ಷ ಬಿಟ್ಟು ಹೋಗುವುದಿಲ್ಲ. ಪಕ್ಷದೊಳಗಿನ ಕೆಲವು ಸಮಸ್ಯೆಗಳು ಬಗ್ಗೆ ಹೇಳಿದ್ದಾರೆ. ಅವುಗಳನ್ನು ಸರಿಪಡಿಸಲು ಯತ್ನಿಸುತ್ತೇವೆ’ ಎಂದು ಹೇಳಿದರು.

‘ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯನ್ನುಪಕ್ಷದ ಚಿಹ್ನೆ ಮೇಲೆ ಎದುರಿಸುವ ಸಂಬಂಧ ಸಮಿತಿ ರಚಿಸಲಾಗಿದೆ. ಈಗಾಗಲೇ ಒಂದು ಬಾರಿ ಸಭೆ ನಡೆಸಿದ್ದೇವೆ. ಕೆಲವರು ಪಕ್ಷದ ಚಿಹ್ನೆ ಬೇಕು ಎಂದರೆ, ಕೆಲವರು ಬೇಡ ಎಂಬ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ವಿಚಾರದಲ್ಲಿ ಗೊಂದಲವಿದ್ದು, ಹೈಕಮಾಂಡ್ ಯಾವ ನಿರ್ಧಾರ ಮಾಡಲಿದೆ ಎಂದು ಕಾದು ನೋಡೋಣ. ಚುನಾವಣೆಗೆ ನಮ್ಮ ತಯಾರಿ ನಡೆಯುತ್ತಿದೆ’ ಎಂದರು.

ಗ್ರಾ.ಪಂ. ಚುನಾವಣೆಯಲ್ಲಿ ಸಹೋದರ ಲಖನ್ ಜಾರಕಿಹೊಳಿ ಹೆಚ್ಚಿನ ಆಸಕ್ತಿ ವಹಿಸಿಲ್ಲ ಎಂಬ ಮಾತುಗಳಿವೆಯಲ್ಲಾ ಎಂಬ ಪ್ರಶ್ನೆಗೆ, ‘ಅವರು ಹೆಚ್ಚಿನ ಆಸಕ್ತಿ ವಹಿಸಿಲ್ಲ. ಆದರೆ, ಪಕ್ಷವವಿದೆ. ನಾನು ಆಸಕ್ತಿ ವಹಿಸಿ ಕೆಲಸ ಮಾಡುತ್ತಿದ್ದೇನೆ. ಪ್ರತಿ ಗ್ರಾ.ಪಂ.ಗೂ ಭೇಟಿ ನೀಡಿದ್ದೇನೆ. ಲಖನ್ ಕೂಡ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಆಗ ಜನರ ನಮ್ಮ ಪರವಾಗಿರುತ್ತಾರೆ. ರಾಜಕೀಯವಾಗಿ ಮುಂದುವರಿಯಬೇಕಾದರೆ ಲಖನ್ ಗೋಕಾಕ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ಮಾಡಬೇಕು’ ಎಂದರು.

‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ತಯಾರಿ ನಡೆಸುತ್ತಿದ್ದೇವೆ. ಟಿಕೆಟ್ ವಿಚಾರವಾಗಿ, ಸೋಮವಾರ ಅಥವಾ ಮಂಗಳವಾರ ಸಭೆ ನಡೆಸಲಿದ್ದೇವೆ. ನಮ್ಮ ಮುಂದಿನ ಗುರಿ ಈ ಕ್ಷೇತ್ರ ಗೆಲ್ಲುವುದಾಗಿದೆ’ ಎಂದರು.

ಪಕ್ಷದ ಬೆಳಗಾವಿ ಗ್ರಾಮೀಣ ಜಿಲ್ಲಾ ಘಟಲದ ಅಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಮುಖಂಡ ಸುನೀಲ ಹನುಮನ್ನವರ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಅರುಣ ಕಟಾಂಬಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT