ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಳಿ ಬೆಸ್ತ ಸಮುದಾಯಕ್ಕೆ ನ್ಯಾಯ ಒದಗಿಸಲು ಪ್ರಯತ್ನ: ಸಚಿವ ಸತೀಶ ಜಾರಕಿಹೊಳಿ ಭರವಸೆ

Published 4 ಫೆಬ್ರುವರಿ 2024, 13:27 IST
Last Updated 4 ಫೆಬ್ರುವರಿ 2024, 13:27 IST
ಅಕ್ಷರ ಗಾತ್ರ

ಬೆಳಗಾವಿ: ‘ಕೋಳಿ ಬೆಸ್ತ ಸಮುದಾಯಕ್ಕೆ ಪರಿಶಿಷ್ಟ ಪಂಗಡ(ಎಸ್‌ಟಿ) ಮೀಸಲಾತಿ ನೀಡುವ ವಿಚಾರವಾಗಿ ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸತೀಶ ಜಾರಕಿಹೊಳಿ ಭರವಸೆ ನೀಡಿದರು.

ಇಲ್ಲಿನ ಸರ್ಕಾರಿ ಸರ್ದಾರ್ಸ್‌ ಪ್ರೌಢಶಾಲೆ ಮೈದಾನದಲ್ಲಿ ಬೆಳಗಾವಿ ಜಿಲ್ಲಾ ಕೋಳಿ ಬೆಸ್ತ ಸಮಾಜ ಸಂಘ, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಹಾಗೂ ಸಮಾಜದ ಬೃಹತ್‌ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಈ ಹಿಂದೆ ಕೋಳಿ ಬೆಸ್ತ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಆದರೆ, ಅದು ವಾಪಸ್‌ ಬಂದಿದೆ. ಈ ವಿಚಾರದಲ್ಲಿ ಕೇಂದ್ರವೇ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ. ಅಗತ್ಯಬಿದ್ದರೆ ಮತ್ತೆ ಶಿಫಾರಸು ಮಾಡುತ್ತೇವೆ. ನಿಮ್ಮ ಹೋರಾಟ ನ್ಯಾಯಯುತವಾಗಿದೆ. ನಿಮಗೆ ಸಿಗಬೇಕಾದ ಮೀಸಲಾತಿ ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಮೊದಲು ಸಮುದಾಯದ ಮಠಾಧೀಶರು, ಮುಖಂಡರು, ರಾಜಕಾರಣಿಗಳು ಬೆಂಗಳೂರಿನಲ್ಲಿ ಸಭೆ ಸೇರಿ ಚರ್ಚಿಸೋಣ. ನಂತರ ನ್ಯಾಯ ಪಡೆಯಲು ದಾರಿ ಕಂಡುಕೊಳ್ಳೋಣ’ ಎಂದರು.

‘ನಿಜಶರಣ ಅಂಬಿಗರ ಚೌಡಯ್ಯನವರ ಕಾರ್ಯವೈಖರಿ ಭಿನ್ನವಾಗಿತ್ತು. ನಿಜಹೇಳುವ ಧೈರ್ಯ ಅವರಿಗಿತ್ತು. ಇಂದು ನಾವೇನಾದರೂ ನಿಜ ಹೇಳಿದರೆ, ದಿನಕ್ಕೊಂದು ಪ್ರಕರಣ ದಾಖಲಿಸಲಾಗುತ್ತದೆ. ಇತಿಹಾಸ ಬಲ್ಲವರು ಮಾತ್ರ ಹೊಸ ಇತಿಹಾಸ ಸೃಷ್ಟಿಸಬಲ್ಲರು. ಹಾಗಾಗಿ ಪ್ರತಿಯೊಬ್ಬರೂ ಅಂಬಿಗರ ಚೌಡಯ್ಯನವರ ಇತಿಹಾಸ ಓದಲು ಪ್ರಯತ್ನಿಸಬೇಕು’ ಎಂದು ಕರೆ ನೀಡಿದರು.

ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ‘ಈ ಹಿಂದೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ, ಕೋಳಿ ಬೆಸ್ತ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸಲಿಲ್ಲ. ಬಿಜೆಪಿಯವರು ಕೊಟ್ಟ ಮಾತು ಈಡೇರಿಸಲಿಲ್ಲ. ಈಗ ಸತೀಶ ಜಾರಕಿಹೊಳಿ ನಮ್ಮ ಬೇಡಿಕೆ ಈಡೇರಿಸಿದರೆ, ನಮ್ಮ ಸಮುದಾಯದ ಪ್ರತಿಯೊಬ್ಬರ ಮನೆಯಲ್ಲಿ ನಿಮ್ಮ ಭಾವಚಿತ್ರವಿರಿಸಿ ಪೂಜಿಸುತ್ತೇವೆ’ ಎಂದರು.

ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ, ‘ಕೋಳಿ ಬೆಸ್ತ ಸಮುದಾಯವನ್ನು 39 ಪರ್ಯಾಯ ಪದಗಳಿಂದ ಗುರುತಿಸಲಾಗುತ್ತಿದೆ. ರಾಜ್ಯ ಸರ್ಕಾರವು ಎಸ್‌ಟಿ ಪಟ್ಟಿಗೆ ಸೇರಿಸುವಂತೆ ಶಿಫಾರಸು ಮಾಡಿ ಸಲ್ಲಿಸಿದ್ದ ಅರ್ಜಿಯನ್ನು ರಿಜಿಸ್ಟ್ರಾರ್‌ ಜನರಲ್ ಆಫ್‌ ಇಂಡಿಯಾದವರು ವಾಪಸ್‌ ಕಳುಹಿಸಿದ್ದಾರೆ. ಈಗ ಸಿದ್ದರಾಮಯ್ಯ ಸರ್ಕಾರ ಇನ್ನೊಮ್ಮೆ ಶಿಫಾರಸು ಮಾಡಿ ಕಳುಹಿಸಬೇಕು. ಬಿಜೆಪಿಯವರು ಕೇಂದ್ರದ ಮೇಲೆ ಒತ್ತಡ ಹೇರುತ್ತೇವೆ. ಎಲ್ಲರೂ ಸೇರಿಕೊಂಡು ನ್ಯಾಯ ಪಡೆದುಕೊಳ್ಳೋಣ’ ಎಂದು ಹೇಳಿದರು.

ಬೆಳಗಾವಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಹಾಗೂ ಕೋಳಿ ಬೆಸ್ತ ಸಮಾಜದ ಸಮಾವೇಶದ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು
ಬೆಳಗಾವಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಹಾಗೂ ಕೋಳಿ ಬೆಸ್ತ ಸಮಾಜದ ಸಮಾವೇಶದ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು

ವಿಧಾನ ಪರಿಷತ್‌ ಸದಸ್ಯ ಸಾಬಣ್ಣ ತಳವಾರ, ‘ವಾಲ್ಮೀಕಿ ಸಮುದಾಯ ಮತ್ತು ಕೋಳಿ ಬೆಸ್ತ ಸಮುದಾಯಗಳೆರಡೂ ಹಿಂದುಳಿದ ಸಮುದಾಯಗಳೇ. ಅವರು ಕಾಡಿಗೆ ಹೋಗಿ ಬೇಡರಾದರು. ನಾವೂ ನದಿ ದಂಡೆಗಿಳಿದು ಬೆಸ್ತರಾದೆವು. ಅವರ ಸಮುದಾಯದ ಮಹರ್ಷಿ ವಾಲ್ಮೀಕಿ ರಾಮಾಯಣದ ಕರ್ತೃವಾದರೆ, ನಮ್ಮ ಸಮುದಾಯದ ವೇದವ್ಯಾಸರು ಮಹಾಭಾರತದ ಕರ್ತೃ. ಮೀಸಲಾತಿ ಪಡೆಯುವುದಕ್ಕಾಗಿ ನಮ್ಮ ಕೂಗು ದೆಹಲಿ ತಲುಪಬೇಕು. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸಲಾಗುವುದು’ ಎಂದು ಹೇಳಿದರು.

ನರಸಿಪುರದ ಅಂಬಿಗರ ಚೌಡಯ್ಯನವರ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ‘ಸರ್ಕಾರದಿಂದ ಸೌಲಭ್ಯ ಪಡೆಯುವುದಕ್ಕಾಗಿ ಎಲ್ಲ ಜಿಲ್ಲೆಗಳಲ್ಲೂ ಸಮುದಾಯದವರು ಸಂಘಟಿತರಾಗಬೇಕಿದೆ’ ಎಂದರು.

ಜಿಲ್ಲಾ ಕೋಳಿ ಬೆಸ್ತ ಸಮಾಜ ಸಂಘದ ಅಧ್ಯಕ್ಷ ದಿಲೀಪ ಕುರಂದವಾಡೆ, ‘ಎಲ್ಲ ರಂಗಗಳಲ್ಲಿ ಹಿಂದುಳಿದ ಕೋಳಿ ಬೆಸ್ತ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸಿ, ರಾಜ್ಯ ಸರ್ಕಾರ ನ್ಯಾಯ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಅಂಬಿಗರ ಚೌಡಯ್ಯನವರ ಜೀವನ ಚರಿತ್ರೆ, ಅವರ ವಿಚಾರಧಾರೆ ಮತ್ತು ವಚನ ಸಾಹಿತ್ಯದ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಮಲ್ಲಿಕಾರ್ಜುನ ಕಮತಗಿ ಉಪನ್ಯಾಸ ನೀಡಿದರು. ಶಾಸಕ ಆಸೀಫ್‌ ಸೇಠ್‌ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಬಾಬಾಸಾಹೇಬ ಪಾಟೀಲ, ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಜಯ ಪಾಟೀಲ, ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಹಾಗೂ ಕೋಳಿ ಬೆಸ್ತ ಸಮುದಾಯದ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ, ಅಶೋಕ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಸಂಗೊಳ್ಳಿ ರಾಯಣ್ಣ ವೃತ್ತ, ರಾಣಿ ಚನ್ನಮ್ಮನ ವೃತ್ತದ ಮಾರ್ಗವಾಗಿ ಸಂಚರಿಸಿ ಸರ್ದಾರ್ಸ್‌ ಪ್ರೌಢಶಾಲೆ ಮೈದಾನ ತಲುಪಿತು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಜಾನಪದ ಕಲಾತಂಡಗಳು ಡೊಳ್ಳುಕುಣಿತ, ಚಂಡೆವಾದ್ಯ, ಗೊಂಬೆ ಕುಣಿತ, ಕಹಳೆ, ನಗಾರಿ ಮತ್ತಿತರ ಕಲಾ ಪ್ರಕಾರಗಳನ್ನು ಪ್ರದರ್ಶಿಸಿ ಕಣ್ಮನಸೆಳೆದರು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರು ಕಲಾವಿದರ ಪ್ರದರ್ಶನಕ್ಕೆ ಮನಸೋತರು.

ಬೆಳಗಾವಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಹಾಗೂ ಕೋಳಿ ಬೆಸ್ತ ಸಮಾಜದ ಸಮಾವೇಶದ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಕಲಾ ತಂಡಗಳ ಪ್ರದರ್ಶನ ಮನಸೆಳೆಯಿತು
ಬೆಳಗಾವಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಹಾಗೂ ಕೋಳಿ ಬೆಸ್ತ ಸಮಾಜದ ಸಮಾವೇಶದ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಕಲಾ ತಂಡಗಳ ಪ್ರದರ್ಶನ ಮನಸೆಳೆಯಿತು
ಕೋಳಿ ಬೆಸ್ತ ಸಮುದಾಯದಿಂದ 10 ಶಾಸಕರು ಮತ್ತು ಮೂವರು ಲೋಕಸಭಾ ಸದಸ್ಯರು ಆಯ್ಕೆಯಾಗಬೇಕು. ಇಲ್ಲದಿದ್ದರೆ ನಾವು ಮನವಿ ಸಲ್ಲಿಸುತ್ತ ಹೋರಾಟ ಮಾಡುತ್ತಲೇ ಇರಬೇಕಾಗುತ್ತದೆ. ಸಮುದಾಯದವರು ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕು.
–ಪ್ರಮೋದ ಮಧ್ವರಾಜ ಮಾಜಿ ಸಚಿವ

ಎಲ್ಲ ರೀತಿಯ ಸಹಕಾರ: ಹೆಬ್ಬಾಳಕರ

‘ತುಳಿತಕ್ಕೆ ಒಳಗಾದ ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಬೇಕು ಎಂಬುದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶಯವಾಗಿದೆ. ಜಾತಿ ವ್ಯವಸ್ಥೆ ಮತ್ತು ಮೂಢನಂಬಿಕೆ ನಿರ್ಮೂಲನೆಗಾಗಿ ಬಸವಣ್ಣನವರು ಹೋರಾಡಿದ್ದರು. ಎಲ್ಲರನ್ನೂ ಒಗ್ಗೂಡಿಸಿಕೊಂಡು ಮಾನವೀಯತೆ ಬಗ್ಗೆ ಜನರಿಗೆ ಅರಿವು ಮೂಡಿಸಿದ್ದರು. ನಾವು ಯಾರೊಂದಿಗೂ ಜಾತಿ ಭೇದ ಮಾಡಿಲ್ಲ. ಕೋಳಿ ಬೆಸ್ತ ಸಮುದಾಯದವರು ಎಸ್‌ಟಿ ಮೀಸಲಾತಿಗೆ ಹೋರಾಡುತ್ತಿರುವುದು ಯೋಗ್ಯವಾಗಿದೆ. ನಿಮ್ಮ ಹೋರಾಟಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ’ ಎಂದು ಆಶ್ವಾಸನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT