ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಶುದ್ಧೀಕರಣ ಕೇಂದ್ರದಲ್ಲಿ ಅವ್ಯವಹಾರ: ತನಿಖೆ

ವಾರದೊಳಗೆ ವರದಿ ಸಲ್ಲಿಸಲು ಸೂಚನೆ
Last Updated 4 ಜನವರಿ 2019, 11:24 IST
ಅಕ್ಷರ ಗಾತ್ರ

ಬೆಳಗಾವಿ: ‘ಇಲ್ಲಿನ ಬಸವನಕೊಳ್ಳದಲ್ಲಿ ನಿರ್ಮಿಸಿರುವ ಜಲ ಶುದ್ಧೀಕರಣ ಕೇಂದ್ರದಲ್ಲಿರುವ ಸ್ಕಾಡಾ (ಸೂಪರ್‌ವೈಸ್, ಕಂಟ್ರೋಲ್ ಅಂಡ್ ಡೇಟಾ ಆಕ್ಟಿವೇಷನ್‌) ಕೊಠಡಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಶುದ್ಧೀಕರಣ ಕಾರ್ಯ ಸರಿಯಾಗಿ ಆಗುತ್ತಿಲ್ಲ. ಯೋಜನೆಯಲ್ಲಿ ಅವ್ಯವಹಾರ ನಡೆದಿದೆ’ ಎಂಬ ಆರೋಪ‍ ಕೇಳಿಬಂದಿರುವುದರಿಂದ, ಈ ಕುರಿತು ತನಿಖೆ ನಡೆಸಲು ನಗರಪಾಲಿಕೆ ಪರಿಷತ್‌ ಸಭೆಯಲ್ಲಿ ನಿರ್ಣಯಿಸಲಾಯಿತು.

ವಿಷಯ ಪ್ರಸ್ತಾಪಿಸಿದ ಸದಸ್ಯ ಡಾ.ದಿನೇಶ್‌ ನಾಶಿಪುಡಿ, ‘ಯೋಜನೆಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ. ಕಾಮಗಾರಿ ಪೂರ್ಣಗೊಳಿಸಿ, ಹಸ್ತಾಂತರಿಸುವ ಮುನ್ನವೇ ಬಿಲ್‌ ನೀಡಲಾಗಿದೆ. ಕಾಮಗಾರಿ ಕಳಪೆ ಗುಣಮಟ್ಟದ್ದಾಗಿದೆ. ಈ ಕುರಿತು ಎಸಿಬಿ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್‌ ಚಂದ್ರಪ್ಪ ಮಾತನಾಡಿ, ‘ಸ್ಕಾಡಾ ಕಾರ್ಯನಿರ್ವಹಣೆ ಆರಂಭಿಸಿತ್ತು. ಆದರೆ, ತಾಂತ್ರಿಕ ತೊಂದರೆಯಿಂದಾಗಿ ಸ್ಥಗಿತಗೊಂಡಿದೆ. ಇದರಿಂದ ನೀರು ಪೂರೈಕೆಗೆ ತೊಂದರೆಯಾಗಿಲ್ಲ’ ಎಂದು ತಿಳಿಸಿದರು.

ನೋಟಿಸ್ ಜಾರಿ:‘ಕಾಮಗಾರಿ ಗುತ್ತಿಗೆ ಪಡೆದಿದ್ದ ಕಂಪನಿಗೆ ನೋಟಿಸ್ ನೀಡಲಾಗಿದೆ. ಇದೇ ತಿಂಗಳ 10ರ ಒಳಗೆ ಸರಿಪಡಿಸುವಂತೆ ಸೂಚಿಸಲಾಗಿದೆ. ಅಲ್ಲದೇ, ಬಿಲ್ ಸಂಪೂರ್ಣ ಪಾವತಿಸಿಲ್ಲ. ಗುತ್ತಿಗೆ ಕರಾರಿನ ಪ್ರಕಾರ ಎಲ್ಲ ಕಾರ್ಯವನ್ನು ಅವರೇ ಮಾಡಬೇಕು’ ಎಂದು ಸ್ಪಷ್ಟಪಡಿಸಿದರು.‌

ಶಾಸಕ ಅನಿಲ್ ಬೆನಕೆ, ಸದಸ್ಯರಾದ ಕಿರಣ ಸಾಯಿನಾಕ, ದೀಪಕ ಜಮಖಂಡಿ ಹಾಗೂ ರಮೇಶ ಸೊಂಟಕ್ಕಿ ಮಾತನಾಡಿ, ‘ನಾಶಿಪುಡಿ ಪ್ರಮುಖ ವಿಷಯ ಪ್ರಸ್ತಾಪಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದರು. ‌

‘ಯೋಜನೆ ಉದ್ಘಾಟನೆ ನೆರವೇರಿಸುವಾಗ ಪಾಲಿಕೆ ಸದಸ್ಯರಿಗೆ ವಿಷಯ ತಿಳಿಸಿಲ್ಲ; ಯಾರನ್ನೂ ಆಹ್ವಾನಿಸಿಲ್ಲ’ ಎಂದು ರಮೇಶ ಸೊಂಟಕ್ಕಿ ಕಿಡಿಕಾರಿದರು.

ಶಾಸಕ ಅಭಯ ಪಾಟೀಲ ಮಾತನಾಡಿ, ‘ಈ ಕುರಿತು ವರದಿ ಪಡೆಯಬೇಕು. ರಾತ್ರೋರಾತ್ರಿ ಉದ್ಘಾಟನೆ ಕಾರ್ಯಕ್ರಮ ನಡೆದಿದ್ದರೂ ಪಾಲಿಕೆಯ 58 ಸದಸ್ಯರೂ ಸುಮ್ಮನಿದ್ದಿರಿ. ಹಿಂದೆ ಆಗಿರುವುದನ್ನು ಬಿಡಿ; ಲೋಪ ಸರಿಪಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ಮಟ್ಟ ಎತ್ತರಿಸಬೇಕು:‘ತಾಲ್ಲೂಕಿನಲ್ಲಿ ಮಹಾರಾಷ್ಟ್ರದ ಗಡಿಪ್ರದೇಶಕ್ಕೆ ಹೊಂದಿಕೊಂಡಂತಿರುವ ರಕ್ಕಸಕೊಪ್ಪ ಜಲಾಶಯದ ಮಟ್ಟ ಎತ್ತರ ಮಾಡಬೇಕು. ಅದಕ್ಕಾಗಿ 33 ಎಕರೆ ಜಮೀನು ಬೇಕಾಗುತ್ತದೆ. ಇದನ್ನು ಮಹಾರಾಷ್ಟ್ರ ಸರ್ಕಾರದೊಂದಿಗೆ ವ್ಯವಹರಿಸಿ ಪಡೆದುಕೊಳ್ಳಬೇಕಾಗುತ್ತದೆ. ಆಗ, ಹೆಚ್ಚಿನ ನೀರು ಸಂಗ್ರಹಿಸಬಹುದಾಗಿದೆ. ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿನ ಅಭಾವ ತಪ್ಪಿಸಬಹುದಾಗಿದೆ’ ಎಂದು ಸಲಹೆ ನೀಡಿದರು.

‘ಹಲವು ಬಡಾವಣೆಗಳಲ್ಲಿ ಐದು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ಇದರಿಂದಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈಗಲೇ ಎಚ್ಚೆತ್ತುಕೊಂಡು ಜಲಶುದ್ಧೀಕರಣ ಕೇಂದ್ರದ ಸಮಸ್ಯೆ ಪರಿಹರಿಸಿದರೆ ಬೇಸಿಗೆಯಲ್ಲಿ ನೀರು ಒದಗಿಸಬಹುದಾಗಿದೆ. ಇಲ್ಲವಾದಲ್ಲಿ ಬೇಸಿಗೆಯಲ್ಲಿ ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ಸದಸ್ಯೆ ಸರಳಾ ಹೇರೇಕರ ಎಚ್ಚರಿಸಿದರು.

‘ಜಲಶುದ್ಧೀಕರಣ ಕೇಂದ್ರದ ಸ್ಕಾಡಾ ವ್ಯವಸ್ಥೆ ಕಾರ್ಯನಿರ್ವಹಿಸದಿರುವುದು ಹಾಗೂ ಅವ್ಯವಹಾರ ನಡೆದಿರುವ ಬಗ್ಗೆ ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ತನಿಖೆ ನಡೆಸಿ ವಾರದೊಳಗೆ ವರದಿ ಸಲ್ಲಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸು ಮಾಡಬೇಕು’ ಎಂದು ಮೇಯರ್‌ ಬಸಪ್ಪ ಚಿಕ್ಕಲದಿನ್ನಿ ಸೂಚಿಸಿದರು.

ವರದಿಯನ್ನು ಮುಂದಿನ ಸಭೆಯಲ್ಲಿ ಮಂಡಿಸಬೇಕು ಎಂದು ಸದಸ್ಯರು ಪಟ್ಟುಹಿಡಿದರು.

ಉಪಮೇಯರ್‌ ಮಧುಶ್ರೀ ಪೂಜಾರಿ, ಆಯುಕ್ತ ಶಶಿಧರ ಕುರೇರ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT