ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿಯಾದ ಕಪ್ಪಲಗುದ್ದಿ ಸರ್ಕಾರಿ ಶಾಲೆ

ಹಸಿರು ವಿದ್ಯಾಲಯವಾಗಿ ಗಮನಸೆಳೆಯುತ್ತಿದೆ
Last Updated 21 ಡಿಸೆಂಬರ್ 2018, 19:39 IST
ಅಕ್ಷರ ಗಾತ್ರ

ರಾಯಬಾಗ: ಆವರಣದಲ್ಲಿ ಸೋಲಾರ್‌ ಅಳವಡಿಕೆ. ಆಕರ್ಷಿಸುವ ಕೈತೋಟ. ಗಿಡಗಳಿಗೆ ನೀರುಣಿಸಲು ಹನಿ ನೀರಾವರಿ ವ್ಯವಸ್ಥೆ. ಪರಿಸರ ಸಂರಕ್ಷಣೆಯ ಮಹತ್ವ ಸಾರುವ ಸುಭಾಷಿತಗಳು.

– ತಾಲ್ಲೂಕಿನ ಕಪ್ಪಲಗುದ್ದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೋಟವಿದು. ಇದರಿಂದಾಗಿ, ಈ ಶಾಲೆ ಮಾದರಿಯಾಗಿ ಹೊರಹೊಮ್ಮಿದೆ.

ಆವರಣಕ್ಕೆ ಕಾಲಿಡುತ್ತಿದ್ದಂತೆಯೇ ಅಲ್ಲಿನ ಹಸಿರು ವಾತಾವರಣ ಆಕರ್ಷಿಸುತ್ತದೆ. ವಿವಿಧ ಬಗೆಯ ತರಕಾರಿ ಸಸಿಗಳು, ಅಡಿಕೆ ಹಾಗೂ ಬಾಳೆ ಗಿಡಗಳು ಕೈಬೀಸಿ ಕರೆಯುವಂತೆ ಭಾಸವಾಗುತ್ತದೆ. ಅಲ್ಲಿಗೆ ಪಕ್ಷಿಗಳು ಕೂಡ ಸಹಜವಾಗಿಯೇ ಬರುತ್ತಿವೆ. ಹೀಗಾಗಿ, ಅವುಗಳು ತಿನ್ನಲೆಂದು ನಿತ್ಯ ಕಾಳುಗಳನ್ನು ಹಾಕಲಾಗುತ್ತದೆ.

ಇಲ್ಲಿನ ಮಕ್ಕಳಿಗೆ ಪಾಠದ ಜೊತೆ ಪರಿಸರದ ಪಾಠಕ್ಕೂ ಉತ್ತೇಜನ ನೀಡಲಾಗುತ್ತಿದೆ. ತಾಲ್ಲೂಕಿನ ಗಡಿ ಭಾಗದ ಕೊನೆಯ ಗ್ರಾಮದ ಶೈಕ್ಷಣಿಕ ವಲಯದ ಶಾಲೆಯಾಗಿದ್ದರೂ, ಮಾದರಿ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಗಮನಸೆಳೆಯುತ್ತಿದೆ.

271 ಮಕ್ಕಳು:

ಈ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ 271 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. 7–8 ವರ್ಷಗಳ ಹಿಂದೆ ನೀರಿಲ್ಲದೆ ಬೆಂಗಾಡಿನಂತೆ ಇದ್ದ ಈ ಶಾಲೆಗೆ ಮುಖ್ಯಶಿಕ್ಷಕರಾಗಿ ಬಂದ ಪಿ.ಎಂ. ದಿವಾಕರ ಅವರ ಸತತ ಪ್ರಯತ್ನದ ಫಲವಾಗಿ ಶಾಲೆಯಲ್ಲಿ ಹಸಿರು ಕಂಗೊಳಿಸುತ್ತಿದೆ. ಸುತ್ತಮುತ್ತಲಿನ ಗ್ರಾಮಗಳ ಶಾಲೆಯವರು ಹುಬ್ಬೇರಿಸುವಂತೆ ಇಲ್ಲಿನ ಚಿತ್ರಣವಿದೆ.

ಶಾಲೆಯಲ್ಲಿ ಮಕ್ಕಳಿಗೆ ನೀಡಲಾಗುವ ಮಧ್ಯಾಹ್ನದ ಬಿಸಿಯೂಟಕ್ಕೆ ಬೇಕಾಗುವ ಕೊತ್ತಂಬರಿ ಸೊಪ್ಪ, ಕರಿಬೇವು, ಬದನೆ, ಮೆಂತ್ಯೆ ಮೊದಲಾದವುಗಳನ್ನು ಇಲ್ಲಿನ ಕೈತೋಟದಲ್ಲಿಯೇ ಬೆಳೆದುಕೊಳ್ಳಲಾಗುತ್ತಿದೆ. ಇದರಿಂದ ತಾಜಾ ತರಕಾರಿ ದೊರೆಯುತ್ತಿದೆ. ಇಲ್ಲಿ ಹನಿ ನೀರಾವರಿ ಅಳವಡಿಕೆ ಮೂಲಕ ಕೈತೋಟವನ್ನು ನಿರ್ವಹಿಸುತ್ತಿರುವುದು ವಿಶೇಷವಾಗಿದೆ. ಶಿಕ್ಷಕರು ಹಾಗೂ ಮಕ್ಕಳು ಇಲ್ಲಿ ಶ್ರಮದಾನ ಮಾಡಿ, ಕೈತೋಟವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ.

ಶಾಲೆಯ ಕೊಠಡಿಗಳಲ್ಲಿ ಪರಿಸರದ ಸಂದೇಶಗಳು, ಸುಭಾಷಿತಗಳು, ಮಹಾತ್ಮರ ಸಂದೇಶಗಳನ್ನು ಬರೆಸಿ, ತೂಗು ಹಾಕಲಾಗಿದೆ. ಶಿಕ್ಷಕರು ವಿವಿಧ ಸೃಜನಶೀಲ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಬೋಧನೆ ಮಾಡುತ್ತಿದ್ದಾರೆ.

ಮೈದಾನಕ್ಕೆ ಜಾಗ ಬೇಕು

‘ಕೊಳವೆಬಾವಿ ಕೊರೆಸಿ, ನೀರಿನ ಕೊರತೆಯ ಸಮಸ್ಯೆ ಪರಿಹರಿಸಲಾಯಿತು. ಶಿಕ್ಷಕರು, ಗ್ರಾಮದ ಪ್ರಮುಖರು ಹಾಗೂ ಎಸ್‌ಡಿಎಂಸಿ ಸದಸ್ಯರಿಂದ ದೇಣಿಗೆ ಪಡೆದು ಶಾಲಾ ಆವರಣವನ್ನು ಹದಗೊಳಿಸಲಾಯಿತು. ಕಾಂಪೌಂಡ್‌ ನಿರ್ಮಿಸಲಾಯಿತು. ನಂತರ, ಕೈತೋಟ ಅಭಿವೃದ್ಧಿಪಡಿಸಲಾಯಿತು. ಇದರಿಂದಾಗಿ, ಈಗ ಶಾಲೆಯು ಹಸಿರಿನಿಂದ ಕೂಡಿದೆ’ ಎಂದು ಮುಖ್ಯಶಿಕ್ಷಕ ಪಿ.ಎಂ. ದಿವಾಕರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಸಕ್ತ ಸಾಲಿನಲ್ಲಿ ಶಾಲೆಯನ್ನು ಹಸಿರು ಶಾಲೆ ಎಂದು ಪರಿಗಣಿಸುವಂತೆ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಹೇಳಿದರು.

ಶಾಲಾ ಮಕ್ಕಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಾಧನೆ ತೋರುತ್ತಿದ್ದಾರೆ. ಕೊಕ್ಕೊದಲ್ಲಿ ರಾಷ್ಟ್ರಮಟ್ಟಕ್ಕೂ ಹೋಗಿಬಂದಿದ್ದಾರೆ. ಇಲ್ಲಿಗೆ ಆಟದ ಮೈದಾನದ ಅಗತ್ಯವಿದೆ. ಇದಕ್ಕಾಗಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ.

ಶಾಲೆ ಆವರಣದಲ್ಲಿ ವಿದ್ಯುತ್‌ ಸೌಕರ್ಯಕ್ಕಾಗಿ, ದಾನಿಗಳ ಸಹಕಾರದಿಂದ ಸೋಲಾರ್‌ ಅಳವಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT