ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್ಮಾನಕ್ಕೆ ಬಾರದ ಶಾಸಕರ ವಿರುದ್ಧ ಆಕ್ರೋಶ

ಶ್ರೀಗಳು, ಸಮಾಜದವರಿಗೆ ಅಗೌರವ: ನಾಗನೂರ ಸ್ವಾಮೀಜಿ
Last Updated 24 ಜೂನ್ 2018, 11:29 IST
ಅಕ್ಷರ ಗಾತ್ರ

ಬೆಳಗಾವಿ: ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ರಾಷ್ಟ್ರೀಯ ಬಸವ ಸೇನೆ ಜಿಲ್ಲಾ ಘಟಕಗಳ ಸಹಯೋಗದಲ್ಲಿ ಇಲ್ಲಿನ ಗಾಂಧಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದಿಂದ ದೂರ ಉಳಿದ ಲಿಂಗಾಯತ ಶಾಸಕರ ವಿರುದ್ಧ ನಾಗನೂರ ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿ ತೀವ್ರ ಅಸಮಾಧಾನ ವ್ಯಕ್ತ‍ಪಡಿಸಿದರು.

ಜಿಲ್ಲೆಯಲ್ಲಿ ಈ ಬಾರಿ ಆಯ್ಕೆಯಾದ ಸಮಾಜದ 9 ಮಂದಿ ಆಹ್ವಾನಿಸಲಾಗಿತ್ತು. ಈ ಪೈಕಿ ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳಕರ ಹಾಗೂ ಮಹಾಂತೇಶ ಕೌಜಲಗಿ ಮಾತ್ರ ಆಗಮಿಸಿದ್ದರು. ಇದನ್ನು ಪ್ರಸ್ತಾಪಿಸಿದ ಶ್ರೀಗಳು, ‘ನಾನು ಹಾಗೂ ಉಳಿದ ಸ್ವಾಮೀಜಿಗಳು ಕೆಲಸವಿಲ್ಲದೆ ಇಲ್ಲಿಗೆ ಬಂದಿಲ್ಲ. ಶಾಸಕರು ಏನೇ ಕೆಲಸಗಳಿದ್ದರೂ ಈ ಕಾರ್ಯಕ್ರಮಕ್ಕೆ ಆದ್ಯತೆ ನೀಡಬೇಕಿತ್ತು. ಸಂಘಟಕರು, ಎಲ್ಲರಿಗೂ ತಿಳಿಸಿ ಹಾಗೂ ಅನುಮತಿ ಪಡೆದುಕೊಂಡೇ ಆಯೋಜಿಸಿದ್ದರು. ಆದರೆ, ಬಾರದಿರುವುದು ಆ ಜನಪ್ರತಿನಿಧಿಗಳಲ್ಲಿ ಸಮಾಜದ ಬಗ್ಗೆ ಎಷ್ಟು ಕಾಳಜಿ ಇದೆ ಎನ್ನುವುದು ಗೊತ್ತಾಗುತ್ತದೆ’ ಎಂದು ಟೀಕಿಸಿದರು.

ಸಮಾಜವನ್ನು ಅವಮಾನಿಸಿದ್ದಾರೆ:

‘ಈ ಮೂಲಕ ಅವರು ಸ್ವಾಮೀಜಿಗಳು ಹಾಗೂ ಸಮಾಜವನ್ನು ಅವಮಾನಿಸಿದ್ದಾರೆ. ಇದರಿಂದ ಬಹಳ ವಿಷಾದವಾಗುತ್ತಿದೆ. ಆ ಕಾರ್ಯಕ್ರಮಕ್ಕೆ ಹೋಗಬೇಡಿ ಎಂದು ಕೆಲವು ಶಾಸಕರಿಗೆ ಬೆದರಿಕೆ ಹಾಕಲಾಗಿದೆ ತಿಳಿದುಬಂದಿದೆ’ ಎಂದರು.‌ ‘ಸ್ವಂತ ಧರ್ಮವೆನ್ನುವ ಭಾವನೆ, ಘನತೆ ಇಲ್ಲದವರು ನಾವು ಹಿಂದೂಗಳೆಂದು ಹೇಳಿಕೊಳ್ಳುತ್ತಿರುವುದು ವಿಷಾದನೀಯ. ನಮ್ಮ ವಿಧಿವಿಧಾನವೇ ಬೇರೆ, ಹಿಂದೂ ಧರ್ಮದ್ದೇ ಬೇರೆ. ಲಿಂಗಾಯತ ಸ್ವತಂತ್ರ ಧರ್ಮ ಎನ್ನುವುದರಲ್ಲಿ ಸಂದೇಹವಿಲ್ಲ’ ಎಂದು ಪ್ರತಿಪಾದಿಸಿದರು.

ತಮ್ಮನ್ನೇ ವಿರೋಧಿಸಿಕೊಳ್ಳುತ್ತಿದ್ದಾರೆ:

‘ಕೆಲವರು ಒಂದು ರಾಜಕೀಯ ಪಕ್ಷದ ಚೌಕಟ್ಟಿಗೆ ಒಳಗಾಗಿ ತಮ್ಮತನವನ್ನೇ ವಿರೋಧಿಸಿಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು. ‘ರಾಜ್ಯ ಸರ್ಕಾರ ಕಳುಹಿಸಿರುವ ಶಿಫಾರಸು ಕುರಿತು ಕೇಂದ್ರ ಸರ್ಕಾರ ಈವರೆಗೂ ಚಕಾರ ಎತ್ತಿಲ್ಲ. ಈ ನಡುವೆ, ಹೋರಾಟದ ವಿರುದ್ಧ ವ್ಯವಸ್ಥಿತ ಅಪಪ್ರಚಾರ ಮಾಡಲಾಗುತ್ತಿದೆ. ಅಲ್ಪಸಂಖ್ಯಾತರಾದರೆ ಒಳಪ‍ಂಗಡದವರಿಗೆ ಮೀಸಲಾತಿ ತಪ್ಪುತ್ತದೆ ಎಂದು ಸುಳ್ಳು ಹೇಳಲಾಗುತ್ತಿದೆ. ಸ್ವತಂತ್ರ ಧರ್ಮವಾದರೆ ಅಲ್ಪಸಂಖ್ಯಾತರಿಗೆ ದೊರೆಯುವ ಎಲ್ಲ ಸೌಲಭ್ಯಗಳೂ ಸಮಾಜದವರಿಗೆ ಸಿಕ್ಕುತ್ತವೆ’ ಎಂದು ಸ್ಪಷ್ಟಪಡಿಸಿದರು.‌

ಮಠದಲ್ಲಿ ಕೂರಬೇಕಾಗುತ್ತದೆ:

‘ಹೀಗೆಯೇ ವಿರೋಧಿಸುತ್ತಾ ಹೋದರೆ ಮುಂದೆ ನಿಮ್ಮನ್ನು ಕರೆದುಕೊಂಡು ಕೆಲಸ ಮಾಡಬೇಕೋ, ಬಿಡಬೇಕೋ ಎನ್ನುವುದನ್ನು ಯೋಚಿಸಬೇಕಾಗಿದೆ. ಕೆಲವು ಸ್ವಾಮೀಜಿಗಳೂ ಬೆಂಬಲಿಸುತ್ತಿಲ್ಲ. ಮುಂದೆಯೂ ಬೆಂಬಲ ಸಿಗದಿದ್ದರೆ, ಏನಾದರೂ ಮಾಡಿಕೊಳ್ಳಿ ಎಂದು ಮಠದಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಬಹಳ ನೋವಿನಿಂದ ಇದನ್ನು ಹೇಳುತ್ತಿದ್ದೇನೆ’ ಎಂದು ತಿಳಿಸಿದರು.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿ, ‘ಧರ್ಮ, ಬಸವಣ್ಣನನ್ನು ಒಂದು ಸಮಾಜ, ರಾಜಕೀಯ ಪಕ್ಷಕ್ಕೆ ಸೀಮಿತಗೊಳಿಸಬಾರದು. ಸಮಾಜದ ವಿಷಯ ಬಂದಾಗ, ಪಕ್ಷ ಬಿಟ್ಟು ಒಗ್ಗಟ್ಟು ತೋರಬೇಕು’ ಎಂದರು.

ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ, ನೇಗಿನಹಾಳದ ಬಸವ ಸಿದ್ಧಲಿಂಗ ಸ್ವಾಮೀಜಿ, ಜಿಲ್ಲಾ ಪಂಚಾಯ್ತಿ ಸದಸ್ಯ ರೋಹಿಣಿ ಪಾಟೀಲ, ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಹರಕುಣಿ, ವೈದ್ಯಕೀಯ ಪ್ರಕೋಷ್ಟದ ಅಧ್ಯಕ್ಷ ಡಾ.ರವಿ ಪಾಟೀಲ, ವಕೀಲರ ಸಂಘದ ಅಧ್ಯಕ್ಷ ವೀರೇಶ ಕಿವಡಸಣ್ಣವರ ಮಾತನಾಡಿದರು.

ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಸಂಪಾದನಾ ಸ್ವಾಮೀಜಿ, ಪಾಲಿಕೆ ಸದಸ್ಯರಾದ ಸರಳಾ ಹೇರೇಕರ, ಪುಷ್ಪಾ ಪರ್ವತರಾವ್‌, ಮುಖಂಡ ಅರವಿಂದ ಪರುಶೆಟ್ಟಿ, ಆರ್‌.‍‍‍ಪಿ. ಪಾಟೀಲ ಇದ್ದರು.

ಮೋಹನ ಪಾಟೀಲ ಸ್ವಾಗತಿಸಿದರು. ರಾಷ್ಟ್ರೀಯ ಬಸವ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಗುಡಸ ಪ್ರಾಸ್ತಾವಿಕ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT