ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಯಂ ರಕ್ಷಣಾ ಕೌಶಲ: ಗೃಹ ಸಚಿವರ ಎದುರೇ ಪಿಸ್ತೂಲ್ ತೋರಿಸಿ ಮಹಿಳೆಗೆ ಬೆದರಿಕೆ!

Last Updated 8 ಸೆಪ್ಟೆಂಬರ್ 2021, 12:24 IST
ಅಕ್ಷರ ಗಾತ್ರ

ಬೆಳಗಾವಿ: ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಪೊಲೀಸ್ ಅಧಿಕಾರಿಗಳ ಎದುರೇ ಪಿಸ್ತೂಲ್ ತೋರಿಸಿ ಬೆದರಿಸಿದ ವ್ಯಕ್ತಿಗೆ ಮಹಿಳೆಯೊಬ್ಬರು ತನ್ನ ಕರಾಟೆ ಕಲೆಯ ಮೂಲಕ ಮಣ್ಣು ಮುಕ್ಕಿಸಿದರು. ಪಿಸ್ತೂಲ್ ಕಸಿದುಕೊಂಡು ಸ್ವಯಂ ರಕ್ಷಣೆ ಮಾಡಿಕೊಂಡರು. ದಾರಿಯಲ್ಲಿ ಒಬ್ಬಂಟಿಯಾಗಿ ನಡೆದು ಹೋಗುತ್ತಿದ್ದಾಗ ಅಡ್ಡಗಟ್ಟಿ ಅನುಚಿತವಾಗಿ ವರ್ತಿಸಿದ ವ್ಯಕ್ತಿಗೆ ಯುವತಿಯು ಒದೆ ಕೊಟ್ಟರು.

– ಇದೆಲ್ಲವೂ ಇಲ್ಲಿನ ಕಂಗ್ರಾಳಿಯಲ್ಲಿರುವ ಕೆಎಸ್‌ಆರ್‌ಪಿ ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ ಪ್ರಾತ್ಯಕ್ಷಿಕೆ ರೂಪದಲ್ಲಿ ನಡೆಯಿತು. ತೊಂದರೆ ಕೊಡುವವರಂತೆ ಅಭಿನಯಿಸುವುದು ಹಾಗೂ ಸ್ವಯಂ ರಕ್ಷಿಸಿಕೊಳ್ಳುವ ಕಲೆ ಎರಡನ್ನೂ ಮಹಿಳಾ ಪೊಲೀಸ್ ಸಿಬ್ಬಂದಿ ಪ್ರದರ್ಶಿಸಿ ನೆರೆದಿದ್ದವರ ಚಪ್ಪಾಳೆ ಗಳಿಸುವಲ್ಲಿ ಯಶಸ್ವಿಯಾದರು. ಕೌಶಲಗಳನ್ನು ಪ್ರದರ್ಶಿಸಿ ಗಮನಸೆಳೆದರು.

ರಾಜ್ಯ ಮೀಸಲು ಪೊಲೀಸ್ 2ನೇ ಪಡೆಯಿಂದ ನಗರದಲ್ಲಿ ಹಮ್ಮಿಕೊಂಡಿರುವ ‘ಸ್ವಯಂ ರಕ್ಷಣಾ ಕೌಶಲ’ ಕಾರ್ಯಕ್ರಮವನ್ನು ಗೃಹ ಸಚಿವರು ವಿಧ್ಯುಕ್ತವಾಗಿ ಉದ್ಘಾಟಿಸಿದರು. ಕೆಎಸ್‌ಆರ್‌ಪಿ ಮತ್ತು ಬೆಳಗಾವಿ ಕರಾಟೆ ಕ್ಲಬ್ ವತಿಯಿಂದ 500 ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಕರಾಟೆ ಮತ್ತು ಜೂಡೋ ತರಬೇತಿ ನೀಡಲಾಗುತ್ತಿದೆ.

ತರಬೇತಿ ನೀಡುತ್ತಿರುವ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‌ಗಳು. ಶಾಲಾ–ಕಾಲೇಜು ವಿದ್ಯಾರ್ಥಿನಿಯರು ಮತ್ತು ಕೆಎಸ್‌ಆರ್‌ಪಿ ಸಿಬ್ಬಂದಿಯ ಮಕ್ಕಳು (ಬಾಲಕಿಯರು) ಕರಾಟೆಯ ಹಲವು ‘ಪಟ್ಟು’ಗಳನ್ನು ಪ್ರದರ್ಶಿಸಿದರು. ವಿವಿಧ ಬಗೆಯ ಸ್ವಯಂ ರಕ್ಷಣಾ ಕೌಶಲಗಳು ಮತ್ತು ಸಾಹಸ ಪ್ರದರ್ಶನ ನಡೆಯಿತು. ಮಳೆಯನ್ನೂ ಲೆಕ್ಕಿಸದೆ ಅವರು ಉತ್ಸಾಹದಿಂದ ಕಲೆಯನ್ನು ಪ್ರಸ್ತುತಪಡಿಸಿದರು.

ಕೆಎಸ್‌ಆರ್‌ಪಿ 2ನೇ ಪಡೆಯ ಕಮಾಂಡೆಂಟ್ ಹಂಜಾ ಹುಸೇನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT