ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಅರಿಸಿನ ತುಂಬಿದ್ದ ಲಾರಿ ದರೋಡೆ, 7 ಆರೋಪಿಗಳ ಬಂಧನ

Last Updated 16 ಜೂನ್ 2020, 6:17 IST
ಅಕ್ಷರ ಗಾತ್ರ

ಬೆಳಗಾವಿ: ಚಿಕ್ಕೋಡಿ ತಾಲ್ಲೂಕಿನ ಕಬ್ಬೂರ ಬಳಿ ಚಾಲಕ ಹಾಗೂ ಕ್ಲೀನರ್ ಮೇಲೆ ಹಲ್ಲೆ ನಡೆಸಿ ಅರಿಸಿನ ತುಂಬಿದ್ದ ಲಾರಿ ದರೋಡೆ ಮಾಡಿದ್ದ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.

23 ಟನ್ ಅರಿಸಿನವನ್ನು ದರೋಡೆ ಮಾಡಿದ್ದ ಹಾಗೂ ಮಾಡಲು ಉಪಯೋಗಿಸಿದ್ದ ಎರಡು ಲಾರಿ, ಒಂದು ಟ್ರ್ಯಾಕ್ಟರ್, ಎರಡು ಕಾರು, ಒಂದು ದ್ವಿಚಕ್ರವಾಹನ ಸೇರಿ ₹ 1.30 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಅಥಣಿ ತಾಲ್ಲೂಕಿನ ಸಂಬರಗಿ ಗ್ರಾಮದ ಗಣೇಶ ಕೋಳಿ, ದಾದಾಸಾಬ ಟೋಣಿ, ಮಹಾರಾಷ್ಟ್ರದ ಪಿಂಪಳವಾಡಿಯ ಜನಾರ್ಧನ ಅಲಿಯಾಸ್ ಲಾಲಾ ಪೆಂಡ, ರಾಯಬಾಗ ತಾಲ್ಲೂಕಿನ ಇಟ್ನಾಳ ಗ್ರಾಮದ ಗುರುನಾಥ ಹಾಲಳ್ಳಿ, ಮುಗಳಖೋಡದ ಸದಾಶಿವ ಪನದಿ, ಚಿಂಚಲಿಯ ಕಲೀಂ ಮಾಲದಾರ, ಗೋಕಾಕ ತಾಲ್ಲೂಕು ಘಟಪ್ರಭಾ ಪಾಂಡುರಂಗ ಹಳ್ಳೂರ ಅಲಿಯಾಸ್ ಮಾಲದಿನ್ನಿ ಬಂಧಿತ ಅರೋಪಿಗಳು.

'ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾದ ಇನ್ನೂ ಕೆಲವು ಆರೋಪಿಗಳ ಪತ್ತೆಗಾಗಿ ಜಾಲ ಬೀಸಲಾಗಿದೆ. ಶೀಘ್ರದಲ್ಲಿಯೇ ಅವರನ್ನು ಬಂಧಿಸಲಾಗುವುದು' ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

'ಅವರು ಅರಿಸಿನವನ್ನು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಮಾರಲು ಯೋಜಿಸಿದ್ದರು ಎನ್ನುವುದು ವಿಚಾರಣೆಯಿಂದ ತಿಳಿದುಬಂದಿದೆ' ಎಂದು ಮಾಹಿತಿ ನೀಡಿದರು.

'ತಮಿಳುನಾಡಿನ ಲಾರಿ ಚಾಲಕ ಎಂ. ಚಿನ್ನಸ್ವಾಮಿ ಜೂನ್ 7ರಂದು ದೂರು ನೀಡಿದ್ದರು. ಜೂನ್ 6ರಂದು ನಾನು ಹಾಗೂ ಕ್ಲೀನರ್ ಪಿ.ಭೂಪತಿ ಗೋಕಾಕ ತಾಲ್ಲೂಕಿನ ಪಾಮಲದಿನ್ನಿ ಗ್ರಾಮದಿಂದ ಅರಿಸಿನ ತುಂಬಿಕೊಂಡು ಮಧ್ಯರಾತ್ರಿ ಹೊರಟಿದ್ದೆವು. ಸಾಂಗ್ಲಿ ಕಡೆಗೆ ಹೋಗುವಾಗ ಕಬ್ಬೂರ ದಾಟಿ ಸುಮಾರು 2 ಕಿ.ಮೀ. ಕ್ರಮಿಸಿದ್ದೆವು. ಅಲ್ಲಿ ನಾಲೆ ಬಳಿ ರಸ್ತೆಗೆ ಅಡ್ಡಲಾಗಿ ಬಿಳಿ ಬಣ್ಣದ ಕಾರು ನಿಂತಿತ್ತು. ಆಗ ನಾನು ಲಾರಿ ನಿಲ್ಲಿಸಿದೆ. ಕಾರಿನಿಂದ ಇಬ್ಬರು ಹಾಗೂ ಸಮೀಪದ ಕಟ್ಟಡದಿಂದ ಇಬ್ಬರು ಓಡಿ ಬಂದು ನನಗೆ ಹಾಗೂ ಕ್ಲೀನರ್‌ಗೆ ಕೈಗಳು ಹಾಗೂ ರಾಡುಗಳಿಂದ ಹೊಡೆದು, ಕಾರಿನಲ್ಲಿ ಬಲವಂತವಾಗಿ ಕೂರಿಸಿಕೊಂಡು ಮುಖಕ್ಕೆ ಬಟ್ಟೆ ಕಟ್ಟಿದರು. ಕೈ- ಕಾಲುಗಳನ್ನು ಕಟ್ಟಿ ಕೊಕಟನೂರ ತುಂಗಳ ಸಮೀಪದ ನಾಲೆ ಬಳಿ ಹಾಕಿ ಲಾರಿ ಹಾಗೂ ಅರಿಸಿನ ದರೋಡೆ ಮಾಡಿಕೊಂಡು ಹೋದರು ಎಂದು ದೂರು ನೀಡಿದ್ದರು ಎಂದು ಎಸ್ಪಿ ವಿವರಿಸಿದರು.

ಎಎಸ್ಪಿ ಅಮರನಾಥ ರೆಡ್ಡಿ ಮಾರ್ಗದರ್ಶನದಲ್ಲಿ ಚಿಕ್ಕೋಡಿ ಡಿಎಸ್ಪಿ ಮನೋಜಕುಮಾರ ನಾಯಿಕ, ಸಿಪಿಐ ಆರ್.ಆರ್. ಪಾಟೀಲ, ಪಿಎಸ್ಐಗಳಾದ ರಾಕೇಶ ಬಗಲಿ, ಎಲ್.ಎಂ. ಆರಿ ಹಾಗೂ ಎಸ್.ಸಿ. ಮಂಟೂರ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ತಂಡಕ್ಕೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

'ಆರೋಪಿಗಳು ವ್ಯವಸ್ಥಿತವಾಗಿ ದರೋಡೆಗೆ ಯೋಜಿಸಿದ್ದರು. ಮೊದಲು ಮೂವರನ್ನು ಬಂಧಿಸಲಾಗಿತ್ತು. ನಂತರ ಅವರು ಕೊಟ್ಟ ಮಾಹಿತಿ ಆಧರಿಸಿ ಉಳಿದವರನ್ನು ಬಂಧಿಸಲಾಗಿದೆ. ಗುರುನಾಥ್, ಶಿವಾನಂದ ಹಾಗೂ ಕರೀಂ ಉಳಿದ ಆರೋಪಿಗಳಿಗೆ ದರೋಡೆ ಮಾಡುವುದಕ್ಕಾಗಿ ಮೂರೂವರೆ ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟಿದ್ದರು. ಚಿಂಚಲಿಯ ಬಳಿ ಅರಿಸಿನವನ್ನು ಅನ್‌ಲೋಡ್ ಮಾಡಿದ್ದರು. ಬೇರೆ ಕಡೆಗೆ ತುಂಬಿ ಸಾಗಿಸಲು ಯೋಜಿಸಿದ್ದರು' ಎಂದು ಮಾಹಿತಿ ನೀಡಿದರು.

'ಲೋಡ್ ಮಾಡುವಾಗ ಹಮಾಲಿ ಕೆಲಸ ಮಾಡುತ್ತಿದ್ದ ಪಾಂಡುರಂಗ ದರೋಡೆಕೋರರಿಗೆ ಮಾಹಿತಿ ಕೊಡುತ್ತಿದ್ದ' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT