ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಬಿಸಿಯೂಟ ಸೇವನೆಗೆ ಮಕ್ಕಳ ‘ಬರ’

ಒಪ್ಪಿಗೆ ಸೂಚಿಸಿದವರ ಪೈಕಿ ಶೇ 33ರಷ್ಟು ಮಕ್ಕಳಿಂದ ಮಾತ್ರ ಸೇವನೆ
Published 22 ಏಪ್ರಿಲ್ 2024, 7:09 IST
Last Updated 22 ಏಪ್ರಿಲ್ 2024, 7:09 IST
ಅಕ್ಷರ ಗಾತ್ರ

ಬೆಳಗಾವಿ: ಸಪ್ತ ನದಿಗಳು ಹರಿಯುವ ಬೆಳಗಾವಿ ಜಿಲ್ಲೆ ಈ ಬಾರಿ ಬರದಿಂದ ತತ್ತರಿಸಿದೆ. 15 ತಾಲ್ಲೂಕುಗಳನ್ನು ‘ಬರಪೀಡಿತ’ವೆಂದು ಘೋಷಿಸಿದ್ದು, ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಬೇಸಿಗೆ ರಜೆಯಲ್ಲೂ ಬಿಸಿಯೂಟ ನೀಡಲಾಗುತ್ತಿದೆ. ಆದರೆ, ಸೇವನೆಗೆ ನಿರೀಕ್ಷೆಯಂತೆ ಮಕ್ಕಳೇ ಬರುತ್ತಿಲ್ಲ.

ಬರಪೀಡಿತ ತಾಲ್ಲೂಕುಗಳಲ್ಲಿ ಮಕ್ಕಳಿಗೆ ಪೌಷ್ಟಿಕಾಂಶ ಕೊರತೆ ಕಾಡದಿರಲೆಂದು ಪ್ರಧಾನಮಂತ್ರಿ ಪೋಷಣ್ ಶಕ್ತಿ-‌ನಿರ್ಮಾಣ ಯೋಜನೆಯಡಿ ಬೇಸಿಗೆ ರಜೆಯಲ್ಲೂ(ಏ.11ರಿಂದ ಮೇ 28ರವರೆಗೆ 41 ದಿನ) ಬಿಸಿಯೂಟ ಕೊಡಲಾಗುತ್ತಿದೆ. 1ರಿಂದ 10ನೇ ತರಗತಿಯಲ್ಲಿ ಓದುತ್ತಿರುವ 3,17,997 ಮಕ್ಕಳು ಬಿಸಿಯೂಟ ಸೇವಿಸಲು ಒಪ್ಪಿಗೆ ಕೊಟ್ಟಿದ್ದಾರೆ‌‌.

ಆದರೆ, ಏಪ್ರಿಲ್‌ 16ರ ವರದಿ ಪ್ರಕಾರ, ಒಪ್ಪಿಗೆ ಕೊಟ್ಟವರಲ್ಲಿ ಶೇ 33ರಷ್ಟು ಮಕ್ಕಳಷ್ಟೇ(1,07,086) ಸೇವಿಸುತ್ತಿದ್ದಾರೆ‌. ಈ ಪೈಕಿ 1ರಿಂದ 5ನೇ ತರಗತಿಯವರು 60,880, 6ರಿಂದ 8ನೇ ತರಗತಿಯವರು 34,851 ಮತ್ತು 9ರಿಂದ 10ನೇ ತರಗತಿಯವರು 11,355 ಮಕ್ಕಳಿದ್ದಾರೆ. ಚನ್ನಮ್ಮನ ಕಿತ್ತೂರು ಮತ್ತು ಖಾನಾಪುರ ವಲಯದ ಶಾಲೆಗಳಲ್ಲಿ ಬಿಸಿಯೂಟ ಸೇವಿಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಸಾವಿರದ ಗಡಿಯನ್ನೂ ದಾಟಿಲ್ಲ.

ತಾತ್ಕಾಲಿಕ ಸ್ಥಗಿತಕ್ಕೆ ಮನವಿ: ಸಾಮಾನ್ಯ ದಿನಗಳಲ್ಲಿ ಜಿಲ್ಲೆಯಲ್ಲಿ 5.60 ಲಕ್ಷ ಮಕ್ಕಳು ಬಿಸಿಯೂಟ ಸೇವಿಸುತ್ತಿದ್ದರು. ಈಗ ಒಪ್ಪಿಗೆ ಸೂಚಿಸಿದವರಿಗಷ್ಟೇ ಬಿಸಿಯೂಟ ಕೊಡಲು ತೀರ್ಮಾನಿಸಲಾಗಿದೆ. ಜಿಲ್ಲೆಯಲ್ಲಿ 3,236 ಶಾಲೆಗಳ ಮಕ್ಕಳಿಗೆ ನೀಡುತ್ತಿರುವ ಬಿಸಿಯೂಟವನ್ನು ಆಯಾ ಶಾಲೆಗಳಲ್ಲೇ ತಯಾರಿಸಲಾಗುತ್ತಿದೆ. ಆದರೆ, ಕೆಲವೆಡೆ ಸೇವನೆಗೆ ಒಬ್ಬ ವಿದ್ಯಾರ್ಥಿಯೂ ಬರುತ್ತಿಲ್ಲ. ಇದರಿಂದಾಗಿ ಆಹಾರ ಮತ್ತು ಅಡುಗೆ ಸಿಬ್ಬಂದಿ ಶ್ರಮ ಎರಡೂ ವ್ಯರ್ಥವಾಗುತ್ತಿದೆ. ಹಾಗಾಗಿ ಬೇಸಿಗೆಯಲ್ಲಿ ತಾತ್ಕಾಲಿಕವಾಗಿ ಯೋಜನೆಯನ್ನೇ ಸ್ಥಗಿತಗೊಳಿಸುವಂತೆ ಕೆಲವು ಶಾಲೆಯವರು ಮನವಿ ಮಾಡುತ್ತಿದ್ದಾರೆ.

ಹಿಂದೇಟಿಗೆ ಕಾರಣವೇನು?: ‘ಬೇಸಿಗೆಯಲ್ಲಿ ಬಿಸಿಯೂಟ ನೀಡುತ್ತಿರುವ ಬಗ್ಗೆ ವ್ಯಾಪಕವಾಗಿ ಪ್ರಚಾರ ಮಾಡಿದ್ದೇವೆ. ಮಕ್ಕಳು ಒಂದರಿಂದ ಎರಡು ಕಿ.ಮೀ ಅಂತರದಲ್ಲೇ ಶಾಲೆಗೆ ಬಿಸಿಯೂಟ ಸೇವನೆಗೆ ಬರುವಂತೆ ವ್ಯವಸ್ಥೆ ಮಾಡಿದ್ದೇವೆ. ಆದರೆ, ಈಗ ಹಳ್ಳಿಗಳಲ್ಲಿ ಜಾತ್ರೆಗಳ ಸುಗ್ಗಿ ಆರಂಭವಾಗಿದೆ. ಹಲವು ಮಕ್ಕಳು ಪ್ರವಾಸಕ್ಕೆ ಮತ್ತು ಸಂಬಂಧಿಗಳ ಊರಿಗೆ ಹೋಗಿರುವುದರಿಂದ ಬಿಸಿಯೂಟಕ್ಕೆ ಸೇವನೆಗೆ ಬರುತ್ತಿಲ್ಲ’ ಎಂದು ಅಧಿಕಾರಿಗಳು ಹೇಳುತ್ತಾರೆ‌.

‘ಶೇ 33ರಷ್ಟು ಮಕ್ಕಳು ಬಿಸಿಯೂಟ ಸೇವಿಸುತ್ತಿರುವುದಾಗಿ ಲೆಕ್ಕ ತೋರಿಸಲಾಗುತ್ತಿದೆ. ವಾಸ್ತವವಾಗಿ ಅಷ್ಟು ಮಕ್ಕಳೂ ಊಟಕ್ಕೆ ಬರುತ್ತಿಲ್ಲ’ ಎನ್ನುವ ಆರೋಪವೂ ಇದೆ.

ಬಿಸಿಯೂಟ ಸೇವನೆಗೆ ಮಕ್ಕಳನ್ನು ಕರೆತರಲು ಎಲ್ಲ ಪ್ರಯತ್ನ ನಡೆಸಿದ್ದೇವೆ‌. ಕೆಲವೆಡೆ ಉತ್ತಮ ಸ್ಪಂದನೆ ಸಿಕ್ಕಿದೆ. ಮಕ್ಕಳಿಲ್ಲ ಎಂಬ ಕಾರಣಕ್ಕೆ ಯಾವ ಶಾಲೆಯಲ್ಲೂ ಬಿಸಿಯೂಟ ನಿಲ್ಲಿಸಲ್ಲ
ಲಕ್ಷ್ಮಣರಾವ್ ಯಕ್ಕುಂಡಿ ಶಿಕ್ಷಣಾಧಿಕಾರಿ ಪ್ರಧಾನಮಂತ್ರಿ ಪೋಷಣ್-ಶಕ್ತಿ ನಿರ್ಮಾಣ ಯೋಜನೆ ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT