ಮಂಗಳವಾರ, ಅಕ್ಟೋಬರ್ 26, 2021
23 °C

ಅಧಿಕಾರಕ್ಕಾಗಿ ಕಾಂಗ್ರೆಸ್ ಸೇರಿದ ಸಿದ್ದರಾಮಯ್ಯ: ಕೇಂದ್ರ ಸಚಿವ ನಾರಾಯಣಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಆರ್.ಎಸ್.ಎಸ್ ಹಾಗೂ ತಾಲಿಬಾನ್ ಸಂಸ್ಕೃತಿ ಒಂದೆ’ ಎಂಬ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ಇಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಪರಿಚಯವಿಲ್ಲ. ಜನತಾ ಪರಿವಾರದಿಂದ ಬಂದವರು. ಅಧಿಕಾರದ ಆಸೆಯಿಂದ, ಖುರ್ಚಿಗಾಗಿ ಆ ಪಕ್ಷ ಸೇರಿದ್ದಾರೆ. ಅವರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’ ಎಂದು ಟೀಕಿಸಿದರು.

‘ಕಾಂಗ್ರೆಸ್ ಅಧಿಕಾರಕ್ಕೆ‌ ಬಂದಾಗ ಡಾ.ಬಿ.ಆರ್. ಅಂಬೇಡ್ಕರ್ ಕೇಂದ್ರ ಸಚಿವರಾಗಿದ್ದರು. ಮಹಿಳೆಯರು ಸಂಸತ್ ಪ್ರವೇಶಿಸುವ ಕಾಯ್ದೆ ಜಾರಿಗೆ ಮುಂದಾಗಿದ್ದರು. ಅದನ್ನು ವಿರೋಧಿಸಿದವರೆ ಕಾಂಗ್ರೆಸ್‌ನವರು. ಅಂಬೇಡ್ಕರ್ ಅವರಿಂದ ರಾಜೀನಾಮೆ ಪಡೆದ ಪಕ್ಷ ಯಾವುದು, ರಾಜೀನಾಮೆ ನೀಡಿದ್ದೇಕೆ ಎನ್ನುವುದನ್ನು ಕಾಂಗ್ರೆಸ್‌ನವರು ದೇಶದ ಜನರಿಗೆ ತಿಳಿಸಲಿ. ಆ ವಿಷಯ ತಿಳಿಸಿದರೆ ಸಿದ್ದರಾಮಯ್ಯ ಅವರಿಗೆ ನಾನು ತಲೆ ಬಾಗುತ್ತೇನೆ’ ಎಂದು ಹೇಳಿದರು.

‘ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್‌ ಹೆಚ್ಚಿನ ಸಮಯ ಅಧಿಕಾರ ನಡೆಸಿದೆ. ಅವರ ಅಧಿಕಾರದಲ್ಲಿ ಅಲ್ಪಸಂಖ್ಯಾತರು- ಹಿಂದೂಗಳ ನಡುವೆ ಗಲಾಟೆಗಳು ನಡೆಯುತ್ತಿದ್ದವು. ಕಾಂಗ್ರೆಸ್ ನಡುವಳಿಕೆಯಿಂದ ‌ದೇಶದಲ್ಲಿ ಅಂತರ್ ಯುದ್ಧಗಳು ಹೆಚ್ಚಾಗಿದ್ದವು’ ಎಂದು ಆರೋಪಿಸಿದರು.

‘ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನವರು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ವಿರೋಧಿಸುತ್ತಿರುವುದ್ದೇಕೆ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಬೇಕು. ನೀತಿಯ ಯಾವ ಅಂಶದಲ್ಲಿ ಆರ್ ಎಸ್ಎಸ್ ವಿಚಾರಧಾರೆಗಳಿವೆ ಎಂಬುದನ್ನು ಹೇಳಬೇಕು. ಇಲ್ಲದಿದ್ದರೆ, ಅವರ ಹೇಳಿಕೆಗಳನ್ನು ದೇಶದ ಪ್ರಜ್ಞಾವಂತ ನಾಗರಿಕರು ಒಪ್ಪುವುದಿಲ್ಲ’ ಎಂದರು.

‘ಎನ್‌ಇಪಿ ಬಗ್ಗೆ ಸಂವಾದ ನಡೆಸಲಿ. ತಪ್ಪಿದ್ದರೆ ತೋರಿಸಲಿ. ತಿದ್ದಿಕೊಳ್ಳಲು ನಾವು ಸಿದ್ಧವಿದ್ದೇವೆ. ಅದನ್ನು ಬಿಟ್ಟು ಸುಮ್ಮನೆ ವಿರೋಧಿಸುವುದು ಸರಿಯಲ್ಲ’ ಎಂದು ತಿರುಗೇಟು ನೀಡಿದರು.

ಇದಕ್ಕೂ ಮುನ್ನ ಸಚಿವರು, ಸಂಗಮೇಶ್ವರ ನಗರದ ಬಾಬು ಜಗಜೀವನರಾಂ ಉದ್ಯಾನ ಸಮೀಪದ ಸಮಾಜಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು