ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಷ್ಟ ದಿಕ್ಕುಗಳಲ್ಲಿಯೂ ಮಾರ್ಧನಿಸುತ್ತಿದೆ... ಧೂಳು ಧೂಳು !

ನಮ್ಮ ನಗರ– ನಮ್ಮ ಧ್ವನಿ
Last Updated 29 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಬೈಲಹೊಂಗಲ: ಎಲ್ಲೆಂದರಲ್ಲಿ ಅಗೆದಿರುವ ಭೂಮಿ ... ರಸ್ತೆಯ ಮಧ್ಯೆದಲ್ಲಿಯೇ ರಾಶಿ ರಾಶಿ ಮಣ್ಣು... ಎಲ್ಲೆಡೆ ಧೂಳು ಧೂಳು... ವಾಹನಗಳಿರಲಿ, ನಡೆದುಕೊಂಡು ಹೋಗಲೂ ಜನರು ಪರದಾಡುವಂತಹ ಸ್ಥಿತಿ... ಇದು ಬೈಲಹೊಂಗಲ ಪಟ್ಟಣದ ಸದ್ಯದ ಸ್ಥಿತಿ!

ರಾಜ್ಯ ಸರ್ಕಾರದಿಂದ ನೂರಾರು ಕೋಟಿ ರೂಪಾಯಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಇಂತಹ ಸ್ಥಿತಿ ಉಂಟಾಗಿದೆ. ಬಜಾರ ರಸ್ತೆ, ಚನ್ನಮ್ಮನ ಸಮಾಧಿ ಜೋಡು ರಸ್ತೆ, ಮುರಗೋಡ, ಹೊಸೂರ ರಸ್ತೆ, ಅಮಟೂರು ರಸ್ತೆ ಸೇರಿದಂತೆ ಬಹುತೇಕ ಹದಗೆಟ್ಟಿರುವ ರಸ್ತೆಗಳಲ್ಲಿ ಮರು ಡಾಂಬರೀಕರಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.

ಪಟ್ಟಣದ ಹೃದಯ ಭಾಗವಾಗಿರುವ ರಾಯಣ್ಣ ವೃತ್ತದಿಂದ ಪ್ರಮುಖ ಬಜಾರ ರಸ್ತೆ ಮಾರ್ಗವಾಗಿ ಅಂಬೇಡ್ಕರ ಉದ್ಯಾನವನವರೆಗೆ ಪುರಸಭೆ ಎಸ್.ಎಫ್.ಸಿ.ವಿಶೇಷ ಅನುದಾನದಲ್ಲಿ ಅಂದಾಜು ₹ 3 ಕೋಟಿ ಅನುದಾನದಲ್ಲಿ ರಸ್ತೆ, ಇತರೆ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ. ಈಗಾಗಲೇ ಅರ್ಧಭಾಗ ರಸ್ತೆ ನಿರ್ಮಿಸಲಾಗಿದೆ. ಇನ್ನರ್ಧ ಭಾಗ ಕಾಮಗಾರಿ ನಡೆಯುತ್ತಿದೆ.

ಇದರಿಂದ ಬಜಾರ ರಸ್ತೆ ಮಾರ್ಗವಾಗಿ ಸಂಚರಿಸುವ ಪಾದಚಾರಿಗಳು, ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ. ಬಜಾರ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ಮಂದಗತಿಯ ಕಾಮಗಾರಿಯಿಂದ ವ್ಯಾಪಾರಸ್ಥರು ನಿತ್ಯ ಹಿಡಿಶಾಪ ಹಾಕುವಂತಾಗಿದೆ. ಎಲ್ಲೆಂದರಲ್ಲಿ ಮಣ್ಣಿನ ರಾಶಿ ಹಾಕಿದ್ದರಿಂದ ವ್ಯಾಪಾರ, ವಹಿವಾಟು ಕುಂಠಿತವಾಗಿದೆ ವ್ಯಾಪಾರಸ್ಥರು ಅಳಲು ತೋಡಿಕೊಳ್ಳುತ್ತಾರೆ.

ಸಂಚಾರ ವ್ಯವಸ್ಥೆಗೆ ಪೆಟ್ಟು: ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಸಂಚಾರ ವ್ಯವಸ್ಥೆಗೆ ತೊಂದರೆ ಉಂಟಾಗಿದೆ. ಬಸ್, ಖಾಸಗಿ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ಹೈರಾಣಾಗುತ್ತಿದ್ದಾರೆ. ಎಲ್ಲೆಂದರಲ್ಲಿ ಮಣ್ಣು, ಕಲ್ಲಿನ ರಾಶಿ ಹಾಕಿದ್ದರಿಂದ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೆ ಸಿಲುಕುತ್ತಿದ್ದಾರೆ.

ಜೋಡೆತ್ತು, ಚಕ್ಕಡಿಗಳ ಓಡಾಟಕ್ಕೆ ತೀವ್ರ ಅಡೆತಡೆ ಉಂಟಾಗಿದೆ. ಶಾಶ್ವತವಾದ ನೂತನ ರಸ್ತೆ ನಿರ್ಮಾಣ ಕಾಮಗಾರಿಗಳು ನಡೆಯದಿರುವುದು ಟೀಕೆಗೆ ಒಳಗಾಗಿದೆ. ಎಲ್ಲೆಡೆ ಹಳೆ ಮುದುಕಿಗೆ ಹೊಸ ಸೀರೆ ಉಡಿಸಿದಂತ ರೀತಿ ಭಾಸವಾಗುತ್ತಿದೆ. ಇವು ಪೂರ್ತಿಗೊಳ್ಳಲು ತಿಂಗಳುಗಳೇ ಬೇಕು. ಹೀಗಾಗಿ ಪಾದಚಾರಿಗಳು, ವಾಹನ ಸವಾರರು ಜಾಗರೂಕತೆಯಿಂದ ಸಂಚರಿಸುವುದು ಅನಿವಾರ್ಯವಾಗಿದೆ.

ಚನ್ನಮ್ಮನ ಸಮಾಧಿಗೆ ₹ 3 ಕೋಟಿ: ಕಿತ್ತೂರು ರಾಣಿ ಚನ್ನಮ್ಮ ಅಭಿವೃದ್ಧಿ ಪ್ರಾಧಿಕಾರದಡಿಯಲ್ಲಿ ಚನ್ನಮ್ಮನ ಸಮಾಧಿ ಸ್ಥಳದ ಅಭಿವೃದ್ಧಿಗೆ ₹ 3 ಕೋಟಿ ಅನುದಾನ ದೊರೆತಿದೆ. ಸಮಾಧಿ ಸ್ಥಳದ ಜೋಡು ರಸ್ತೆಗೆ ₹ 1.50 ಕೋಟಿ ಅನುದಾನದಡಿಯಲ್ಲಿ ಕಾಂಕ್ರೀಟ್ ರಸ್ತೆ, ಫುಟ್‌ಪಾತ್, ಇತರೆ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ. ಹೊಸ, ಹೊಸ ತಂತ್ರಜ್ಞಾನದ ಮಷಿನ್‌ಗಳನ್ನು ಬಳಸಿಕೊಂಡು ರಸ್ತೆ, ಫುಟ್‌ಪಾತ್‌ ಕಾಮಗಾರಿ ನಡೆಸಲಾಗುತ್ತಿದೆ.

ರಸ್ತೆಗಳ ಸುಧಾರಣೆಗೆ ₹ 100 ಕೋಟಿ: ಸಾರ್ವಜನಿಕರ ಒತ್ತಾಯದಿಂದ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ರಸ್ತೆ ಸುಧಾರಣೆಗೆ ಮುಂದಾಗಿದ್ದು, ಬೈಲಹೊಂಗಲ- ಮುರಗೋಡ- ಹಲಕಿ ಕ್ರಾಸ್‌ವರೆಗೆ ₹ 30 ಕೋಟಿ, ಬೈಲಹೊಂಗಲ ಬಡ್ಲಿವರೆಗೆ ₹ 40 ಕೋಟಿ, ಅನುದಾನದಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆ. ಬೈಲಹೊಂಗಲ ಗಣಾಚಾರಿ ಶಾಲೆಯ ಮರಕುಂಬಿ ಸರಹದ್ದಿನವರೆಗೆ ₹ 5 ಕೋಟಿ ಅನುದಾನದಲ್ಲಿ ಫುಟ್‌ಪಾತ್, ಬೀದಿ ದೀಪ ಅಳವಡಿಸಲಾಗುತ್ತದೆ.

ಹೊಸೂರು ರಸ್ತೆಯ ತೋಟಗಾರಿಕೆ ಇಲಾಖೆಯಿಂದ ಮಹಿಳಾ ಕಾಲೇಜುವರೆಗೆ ₹ 3 ಕೋಟಿ ಅನುದಾನದಲ್ಲಿ ಫುಟ್‌ಪಾತ್, ಬೀದಿ ದೀಪ ಅಳವಡಿಸಲಾಗುತ್ತಿದೆ. ಬೈಲಹೊಂಗಲ-ದೇವಲಾಪೂರ ಕ್ರಾಸ್, ಸಂಗೊಳ್ಳಿಯಿಂದ ಗರ್ಜೂರ ರಸ್ತೆ ನಿರ್ಮಾಣಕ್ಕೆ ಎರಡು ಸೇರಿ ₹ 5 ಕೋಟಿ ಅನುದಾನದಲ್ಲಿ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ. ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ನಿತ್ಯ ಕೈಯಲ್ಲಿ ಜೀವ ಹಿಡಿದುಕೊಂಡು ಸಂಚರಿಸುವಂತಾಗಿದೆ.

‘ಜನರಿಗೆ ಮೂಲಸೌಕರ್ಯ ಕಲ್ಪಿಸಲು ಸರ್ಕಾರದಿಂದ ಸಾಕಷ್ಟು ಅನುದಾನ ತರಲಾಗಿದೆ. ರಸ್ತೆ, ಬೀದಿ ದೀಪ, ಚರಂಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕಾಮಗಾರಿ ನಡೆಯುವ ವೇಳೆ ಸ್ವಲ್ಪ ತೊಂದರೆಯಾಗುವುದು ಸಹಜ. ಸಾರ್ವಜನಿಕರು ಸಹಕರಿಸಬೇಕು’ ಎಂದು ಶಾಸಕ ಮಹಾಂತೇಶ ಕೌಜಲಗಿ 'ಪ್ರಜಾವಾಣಿ'ಗೆ ತಿಳಿಸಿದರು.

ಬಿಡುಗಡೆಯಾದ ಅನುದಾನ

* ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೆ 2.10
* ಚನ್ನಮ್ಮ ಸಮಾಧಿಗೆ ₹3 ಕೋಟಿ
* ಸರ್ಕಾರಿ ಜೂನಿಯರ್ ಕಾಲೇಜು ₹5.5 ಕೋಟಿ
* ಸರ್ಕಾರಿ ಮಹಿಳಾ ಕಾಲೇಜು ₹5.60 ಕೋಟಿ

***

ಸಾರ್ವಜನಿಕರು ಬೀದಿಗಿಳಿದು ಹೋರಾಟ ನಡೆಸುವ ಮುನ್ನ ಕಾಮಗಾರಿಗಳು ಪೂರ್ಣಗೊಳ್ಳಬೇಕು. ಅಭಿವೃದ್ಧಿ ಕಾಮಗಾರಿ ಸ್ಥಳದಲ್ಲಿ ಕಾಮಗಾರಿ ಮಾಹಿತಿ, ವಿವರದ ಫಲಕ ಹಚ್ಚಬೇಕು. ಇದು ಎಲ್ಲಿಯೂ ಇಲ್ಲ
-ಈರಪ್ಪ ಕಾಡೇಶನವರ, ನಾಗರಿಕ

ಈಗಾಗಲೇ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಅಗತ್ಯ ಬಿದ್ದರೆ ಸರ್ಕಾರಕ್ಕೆ ಮನವಿ ಮಾಡಿಕೊಂಡು ಇನ್ನೂ ಹೆಚ್ಚಿನ ರೀತಿಯಲ್ಲಿ ಅನುದಾನ ತಂದು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ.
-ಮಹಾಂತೇಶ ಕೌಜಲಗಿ, ಶಾಸಕ

ಅಭಿವೃದ್ಧಿ ಕಾರ್ಯಗಳಿಗೆ ಸಾರ್ವಜನಿಕರ ಸಹಕಾರವು ಅಗತ್ಯ. ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳುವುದು ಅಧಿಕಾರಿಗಳ, ಗುತ್ತಿಗೆದಾರರ ಜವಾಬ್ದಾರಿ ಜತೆಗೆ ಸಾರ್ವಜನಿಕರ ಕರ್ತವ್ಯವೂ ಆಗಿದೆ
-ಶಿವಪ್ಪ ಅಂಬಿಗೇರ, ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT