ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಸೂಚನೆ
Last Updated 8 ಜನವರಿ 2021, 11:19 IST
ಅಕ್ಷರ ಗಾತ್ರ

ಬೆಳಗಾವಿ: ‘ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೈಗೊಂಡಿರುವ ಎಲ್ಲ ಕಾಮಗಾರಿಗಳನ್ನೂ ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ತಾಕೀತು ಮಾಡಿದರು.

ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಸ್ಮಾರ್ಟ್ ಸಿಟಿ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕಾಮಗಾರಿಗಳಿಗೆ ಸರ್ಕಾರದಿಂದ ನಿಗದಿಯಾದ ಅನುದಾನ ಬಿಡುಗಡೆಗೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಸ್ಮಾರ್ಟ್ ಸಿಟಿ ಕಲ್ಪನೆಗೆ ತಕ್ಕಂತೆ ನಗರ ಸ್ಮಾರ್ಟ್ ಆಗಿ ಕಾಣಿಸುವಂತೆ ಕೆಲಸಗಳು ಆಗಬೇಕು. ಅಧಿಕಾರಿಗಳು ಈ ನಿಟ್ಟಿನಲ್ಲಿ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕು. ಪಾದಚಾರಿ ಮಾರ್ಗವನ್ನು ಉತ್ತಮ‌ ರೀತಿಯಲ್ಲಿ ನಿರ್ವಹಿಸಬೇಕು’ ಎಂದು ಸೂಚಿಸಿದರು.

‘ಬೈಸಿಕಲ್ ಟ್ರ್ಯಾಕ್ ಅನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕು. ವಿಳಂಬವಾದರೆ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.

ಬಡ್ಡಿ‌ ಹಣದಲ್ಲಿ ಅಭಿವೃದ್ಧಿ ಕೆಲಸಕ್ಕೆ ಅವಕಾಶ

‘ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಇರುವ ₹ 80 ಕೋಟಿ ಅನುದಾನಕ್ಕೆ ಬರುವ ಬಡ್ಡಿ ಹಣದಲ್ಲಿ ಸೂಕ್ತ ಕಾಮಗಾರಿಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ತಕ್ಷಣವೇ ನಿರ್ಧಾರ ಕೈಗೊಳ್ಳಲಾಗುವುದು. ಆ ಹಣದಲ್ಲಿ ಉತ್ತರ ಮತ್ತು ದಕ್ಷಿಣ ಮತ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಲಾಗುವುದು’ ಎಂದು ತಿಳಿಸಿದರು.

‘ಸ್ಮಾರ್ಟ್ ಕ್ಲಾಸ್ ಎನ್ನುವ ವಿನೂತನ ಮಾದರಿ ಅನುಷ್ಠಾನಗೊಳಿಸಲಾಗುತ್ತಿದೆ. ಆದರೆ ಭವಿಷ್ಯದಲ್ಲಿ ಅವುಗಳ ನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡು ಸೌಕರ್ಯಗಳನ್ನು ಒದಗಿಸಬೇಕು. ಕುಷನ್ ಪೀಠೋಪಕರಣಗಳ ಬದಲಿಗೆ, ಸ್ಟೀಲ್ ಪೀಠೋಪಕರಣಗಳನ್ನು ಒದಗಿಸಿದರೆ ನಿರ್ವಹಣೆ ಸುಲಭವಾಗುತ್ತದೆ’ ಎಂದರು.

ಸ್ಮಾರ್ಟ್ ಸಿಟಿ-101 ಕಾಮಗಾರಿ

‘ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ₹ 930 ಕೋಟಿ ವೆಚ್ಚದಲ್ಲಿ ಒಟ್ಟು 101 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಬಿಡುಗಡೆ ಆಗಿರುವ ₹ 494 ಕೋಟಿ ಪೈಕಿ ಇದುವರೆಗೆ ₹ 366 ಕೋಟಿ ವೆಚ್ಚವಾಗಿದೆ. ಕಾಮಗಾರಿಗಳನ್ನು ಪೂರ್ಣಗೊಳಿಸಿದ ದೇಶದ 100 ನಗರಗಳ ಪೈಕಿ ಬೆಳಗಾವಿ ನಗರ 6ನೇ ಸ್ಥಾನದಲ್ಲಿದೆ’ ಎಂದು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ ತಿಳಿಸಿದರು.

ಶಾಸಕ ಅನಿಲ ಬೆನಕೆ, ಕೆಯುಐಡಿಎಫ್‌ಸಿ ಅಧ್ಯಕ್ಷ ಶಂಕರ ಪಾಟೀಲ ಮುನೇನಕೊಪ್ಪ, ನಿರ್ದೇಶಕಿ ದೀಪಾ ಕುಡಚಿ, ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಮಹಾನಗರಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್, ಬುಡಾ ಆಯುಕ್ತ ಪ್ರೀತಂ ನಸಲಾಪುರೆ ಪಾಲ್ಗೊಂಡಿದ್ದರು.

***

ಸಾತೇರಿ–ಪಾಟೀಲ ಮಾತಿನ ಚಕಮಕಿ

ಸಚಿವರಿಗೆ ಮನವಿ ಸಲ್ಲಿಸಲು ಬಂದಿದ್ದ ನಗರಪಾಲಿಕೆ ಮಾಜಿ ಸದಸ್ಯರ ಸಂಘದ ಸದಸ್ಯ ನಾಗೇಶ್ ಸಾತೇರಿ, ‘ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಕಳಪೆ ಕಾಮಗಾರಿ ನಡೆಯುತ್ತಿದೆ’ ಎಂದು ದೂರಿದರು. ಮಧ್ಯಪ್ರವೇಶಿಸಿದ ಶಾಸಕ ಅಭಯ ಪಾಟೀಲ, ‘ನಿರ್ದಿಷ್ಟವಾಗಿ ಯಾವುದು ಕಳಪೆಯಾಗಿದೆ ಎಂದು ಹೇಳಬೇಕು’ ಎಂದು ತಿಳಿಸಿದರು. ಆಗ, ಸಾತೇರಿ ‘ಬಾಯಿ ಮುಚ್ಚಿಕೊಂಡಿರು’ ಎಂದು ಹೇಳಿದ್ದರಿಂದ ಪಾಟೀಲ ಕುಪಿತರಾದರು.

‘ನನಗೆ ಹೇಳಲು ನೀನ್ಯಾರು?’ ಎಂದು ತರಾಟೆಗೆ ತೆಗೆದುಕೊಂಡರು. ಈ ವೇಳೆ ಇಬ್ಬರ ನಡುವೆಯೂ ಮಾತಿನ ಚಕಮಕಿ ನಡೆಯಿತು. ಸಚಿವ ಬೈರತಿ ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು.

***

ನಗರದಲ್ಲಿ ಸೈಕಲ್ ಟ್ರ್ಯಾಕ್‌ನಲ್ಲಿ ಪಾರ್ಕಿಂಗ್ ಅಥವಾ ಬೀದಿ ವ್ಯಾಪಾರ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ಅದು ಉಪಯೋಗಕ್ಕೆ ಬರುತ್ತದೆ
- ಅಭಯ ಪಾಟೀಲ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT