ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಕೂಲವಿಲ್ಲದ, ಕಾಟಾಚಾರದ ಪ್ಯಾಕೇಜ್‌: ಸತೀಶ ಜಾರಕಿಹೊಳಿ ಟೀಕೆ

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಟೀಕೆ
Last Updated 19 ಮೇ 2021, 11:19 IST
ಅಕ್ಷರ ಗಾತ್ರ

ಬೆಳಗಾವಿ: ‘ಜನರಿಗೆ ಆರ್ಥಿಕ ನೆರವು ಕೊಟ್ಟಿದ್ದೇವೆ ಎಂದು ಬಿಂಬಿಸಿಕೊಳ್ಳುವುದಕ್ಕಾಗಿ ಮತ್ತುವಿರೋಧ ಪಕ್ಷದವರ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರವು ಪ್ಯಾಕೇಜ್ ಘೋಷಿಸಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ಸತೀಶ ಜಾರಕಿಹೊಳಿ ಟೀಕಿಸಿದರು.

ನಗರದಲ್ಲಿ ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಈ ಪ್ಯಾಕೇಜ್‌ನಲ್ಲಿ ಜನರಿಗೆ ಅನುಕೂಲವಾಗುವ ಯೋಜನೆಗಳಿಲ್ಲ. ಕಾಟಾಚಾರಕ್ಕಾಗಿ ಪ್ರಕಟಿಸಿದ್ದಾರೆ’ ಎಂದು ಆರೋಪಿಸಿದರು.

‘ತಮಿಳುನಾಡಿನಲ್ಲಿ ಪ್ರತಿಯೊಬ್ಬರಿಗೂ ₹ 4ಸಾವಿರ ಪರಿಹಾರ ಘೋಷಿಸಿದ್ದಾರೆ. ಆಂಧ್ರದಲ್ಲಿ ಸರ್ಕಾರಿ ಹಾಗೂ ಖಾಸಗಿ ಸೇರಿ ಎಲ್ಲ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವುದಾಗಿ ತಿಳಿಸಲಾಗಿದೆ. ಆದರೆ, ನಮ್ಮಲ್ಲಿ ಅಂತಹ ಯೋಜನೆ ನೀಡಿಲ್ಲ. ಅವುಗಳನ್ನು ಮರೆಮಾಚಿಸುವ ಪ್ರಯತ್ನವಾಗಿ ಈ ಪ್ಯಾಕೇಜ್ ಘೋಷಿಸಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

₹ 10 ಸಾವಿರ ಕೋಟಿ ಘೋಷಿಸಬೇಕಿತ್ತು

‘‌ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ ₹ 10ಸಾವಿರ ನೀಡುವುದರಿಂದ, ಪ್ರತಿ ಎಕರೆಗೆ ₹ 3ಸಾವಿರದಿಂದ ₹ 4ಸಾವಿರ ಮಾತ್ರ ಸಿಗುತ್ತದೆ. ಇದು ಅವರ ಒಂದು ದಿನದ ದುಡಿಮೆಯಾಗಿದೆ’ ಎಂದರು.

‘₹ 10 ಸಾವಿರ ಕೋಟಿ ಪರಿಹಾರ ಪ್ಯಾಕೇಜ್‌ ಘೋಷಿಸುವಂತೆ ವಿಧಾನಸಭೆ ವಿರೋಧಪಕ್ಷದ ನಾಯಕರು ಆಗ್ರಹಿಸಿದ್ದರು. ಅದರಿಂದ ಒಂದು ಕೋಟಿ ಜನರಿಗೆ ತಲಾ ₹ 10ಸಾವಿರ ಪರಿಹಾರ ಧನ ನೀಡಿದಂತಾಗುತ್ತಿತ್ತು. ಆದರೆ, ಈಗ ಘೋಷಿಸಿರುವ ₹ 1,250 ಕೋಟಿ ಪ್ಯಾಕೇಜ್‌ನಿಂದ ಯಾರಿಗೂ ಪ್ರಯೋಜನ ಆಗುವುದಿಲ್ಲ’ ಎಂದು ಹೇಳಿದರು.

‘ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ಹಾಸಿಗೆಗಳಿವೆ. ಆದರೆ, ಸಿಬ್ಬಂದಿ ಹಾಗೂ ಆಮ್ಲಜನಕ ಕೊರತೆ ಇದೆ. ಸರ್ಕಾರ ತಕ್ಷಣ ಸಿಬ್ಬಂದಿ ನೇಮಿಸಿ, ಆಮ್ಲಜನಕ ಪೂರೈಸಬೇಕು’ ಎಂದು ಒತ್ತಾಯಿಸಿದರು.

‘ವಿರೋಧ ಪಕ್ಷದ ಶಾಸಕರು, ಮಾಜಿ ಶಾಸಕರು ಹಾಗೂ ಇನ್ನಿತರ ಚುನಾಯಿತ ಜನಪ್ರತಿನಿಧಿಗಳ ಸಭೆ ಕರೆದು, ಕೊರೊನಾ ನಿಯಂತ್ರಣಕ್ಕೆ ಪರಿಹಾರ ಕಂಡುಕೊಳ್ಳುವ ಕೆಲಸವನ್ನು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಮಾಡಬೇಕು. ಎಲ್ಲ ರೀತಿಯ ಸಹಕಾರ ನೀಡಲು ನಾವು ಸಿದ್ಧವಿದ್ದೇವೆ. ಕೇವಲ ಅಧಿಕಾರಿಗಳೊಂದಿಗೆ ಸಭೆ ಮಾಡುವುದರಿಂದ ಪ್ರಯೋಜನ ಆಗುವುದಿಲ್ಲ’ ಎಂದರು.

‘ಸರ್ಕಾರವು ಬೆಂಗಳೂರಿಗೆ ಸೀಮಿತವಾಗಿದೆ

‘ಸರ್ಕಾರವು ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿದೆ. ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಅದನ್ನು ತಡೆಗಟ್ಟಲು ಆದ್ಯತೆ ನೀಡುತ್ತಿಲ್ಲ. ಸರ್ಕಾರಕ್ಕೆ ಸೋಂಕು ತಡೆಗಟ್ಟುವ ಇಚ್ಛಾಶಕ್ತಿಯೇ ಇಲ್ಲ’ ಎಂದು ಸತೀಶ ಟೀಕಿಸಿದರು.

‘ಕೋವಿಡ್ 2ನೇ ಅಲೆ ನಗರಕ್ಕಿಂತಲೂ ಹಳ್ಳಿಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಅಲ್ಲಿನ ಜನರಲ್ಲಿ ಜಾಗೃತಿ ಮೂಡಿಸದೆ ಇರುವುದು ಇದಕ್ಕೆ ಕಾರಣ. ಮದುವೆ, ಜಾತ್ರೆ, ಅಂತ್ಯಕ್ರಿಯೆ ಮೊದಲಾದ ಕಾರ್ಯಗಳಲ್ಲಿ ಜನರು ಅಂತರ ಕಾಯ್ದುಕೊಳ್ಳದೆ ಪಾಲ್ಗೊಳ್ಳುತ್ತಿದ್ದಾರೆ. ಇವುಗಳನ್ನು ತಡೆಯುವ ನಿಟ್ಟಿನಲ್ಲೂ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಗ್ರಾಮೀಣ ಜನರ ಜೀವನದ ಬಗ್ಗೆ ಚಿಂತಿಸಬೇಕು’ ಎಂದು ಒತ್ತಾಯಿಸಿದರು.

‘ಕೋವಿಡ್ 3ನೇ ಅಲೆ ಬರಲಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಈಗಿನಿಂದಲೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

***

ಸರ್ಕಾರ ಎಲ್ಲ ಕೆಲಸಗಳನ್ನು ಬಿಟ್ಟು ಕೋವಿಡ್ ನಿಯಂತ್ರಣಕ್ಕೆ ಹೆಚ್ಚು ಒತ್ತು ಕೊಡಬೇಕು. ಜಿಲ್ಲಾಸ್ಪತ್ರೆಗಳಲ್ಲಿ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಹಾಸಿಗೆಗೆಳನ್ನು ಹೆಚ್ಚಿಸಿ, ಆಮ್ಲನಜಕ ಪೂರೈಕೆ ವ್ಯವಸ್ಥೆ ಮಾಡಬೇಕು
ಸತೀಶ ಜಾರಕಿಹೊಳಿ, ಕಾರ್ಯಾಧ್ಯಕ್ಷ, ಕೆಪಿಸಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT