ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: | ಗಡಿ ವಿವಾದ: ಸ್ಪಷ್ಟ ನಿಲುವು ತಾಳದ ಕೇಂದ್ರ

ನ. 23ಕ್ಕೆ ‘ಸುಪ್ರೀಂ’ನಲ್ಲಿ ನಡೆಯಲಿದೆ ಅಂತಿಮ ಹಂತದ ವಿಚಾರಣೆ
Last Updated 6 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಬೆಳಗಾವಿ:‌ ಕರ್ನಾಟಕ– ಮಹಾರಾಷ್ಟ್ರ ಗಡಿವಿವಾದ ಸುಪ್ರೀಂಕೋರ್ಟಿನಲ್ಲಿ ಬಗೆ ಹರಿಯಬೇಕೋ ಅಥವಾ ಸಂಸತ್‌ನಲ್ಲಿಯೇ ಮುಗಿಯಬೇಕೋ ಎಂಬ ವಿಚಾರ ಅಂತಿಮ ಹಂತ ತಲುಪಿದೆ. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಸ್ಪಷ್ಟ ನಿಲುವು ತಾಳುವುದು ತೀರಾ ಅಗತ್ಯವಾಗಿದ್ದು ಇದಕ್ಕಾಗಿ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡಹೇರಬೇಕು ಎಂಬ ಕೂಗು ಗಡಿಯಲ್ಲಿಹೆಚ್ಚಾಗುತ್ತಿದೆ.

ಗಡಿ ವಿವಾದದ ಬಗ್ಗೆ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ ಅರ್ಜಿ ನವೆಂಬರ್‌ 23 ವಿಚಾರಣೆಗೆ ಬರಲಿದೆ. ಇದೇ ಪ್ರಥಮ ಹಾಗೂ ಕೊನೆಯ ವಿಚಾರಣೆಯಾಗಿದೆ.

ಗಡಿ ವಿವಾದ ಕುರಿತು 18 ವರ್ಷಗಳ ಹಿಂದೆ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿದ ದಾವೆ ಇನ್ನೂ ಊರ್ಜಿತವಾಗಿಲ್ಲ. ಈ ವಿಷಯವನ್ನು ಸುಪ್ರೀಂನಲ್ಲಿ ಚರ್ಚೆಗೆ ಎತ್ತಿಕೊಳ್ಳಬೇಕೋ,ಬೇಡವೋಎಂಬಅರ್ಜಿಯ ವಿಚಾರಣೆಯೇ ಇನ್ನೂ ನಡೆದಿಲ್ಲ. ಆಗಸ್ಟ್‌ 30ರಂದು ಮೊದಲಬಾರಿಗೆ ವಿಚಾರಣೆಗೆ ಬಂದ ಈ ಅರ್ಜಿಯನ್ನು ಮೂವರು ನ್ಯಾಯಮೂರ್ತಿಗಳ ಪೀಠವು ನವೆಂಬರ್‌ 23ಕ್ಕೆ ಮುಂದೂಡಿದೆ. ಅಲ್ಲದೇ, ಅಂದು ನಡೆಯುವ ವಿಚಾರಣೆಯೇ ಅಂತಿಮ ಎಂದೂ ಸ್ಪಷ್ಟಪಡಿಸಿದೆ.

ಒಂದು ವೇಳೆ ಈ ವಿಷಯ ಸುಪ್ರೀಂ ಕೋರ್ಟಿ ನಲ್ಲಿ ಚರ್ಚೆಗೆ ಬಂದರೆ ಮಹಾರಾಷ್ಟ್ರವು ಕಾನೂನಾತ್ಮಕವಾಗಿ ಒಂದು ಹೆಜ್ಜೆ ಮುಂದೆ ಹೋದಂತಾಗುತ್ತದೆ. ಹೀಗಾಗಿ, ಮಹಾರಾಷ್ಟ್ರ ಸರ್ಕಾರ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿ ತೆರೆಮರೆಯಲ್ಲಿ ತಾಲೀಮು ಆರಂಭಿಸಿವೆ. ಪ್ರಬಲ ವಾದ ಮಂಡಿಸುವುದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿವೆ ಎನ್ನಲಾಗಿದೆ.

ಮಹಾರಾಷ್ಟ್ರ ಸರ್ಕಾರ ನೇಮಿಸಿದ ಗಡಿ ತಜ್ಞರ ಸಮಿತಿ ಚೇರ್ಮನ್‌, ಮಾಜಿ ಸಚಿವ ಜಯಂತ ಪಾಟೀಲ ಅವರು ಈಚೆಗೆ ಬೆಳಗಾವಿ ನಗರದಲ್ಲಿ ಗೋಪ್ಯ ಸಭೆ ನಡೆಸಿದ್ದಾರೆ. ಬೆಳಗಾವಿ ಗಡಿ ವಿವಾದದ ಹೋರಾಟದ ಮೂಲಕವೇ ಬೆಳೆದುಬಂದ ಏಕನಾಥ ಶಿಂಧೆ ಮಹಾರಾಷ್ಟ್ರದ ಮುಖ್ಯಮಂತ್ರಿ ಆದ ಮಾರನೆ ದಿನದಿಂದಲೇ ಇಂಥ ಚಟುವಟಿಕೆಗಳು ಗಡಿಯಲ್ಲಿ ಚುರುಕಾಗಿವೆ. ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆಯೂ ಕರ್ನಾಟಕ ಸರ್ಕಾರ ಮಾತ್ರ ಕಣ್ಣು– ಕಿವಿಗಳನ್ನು ಮುಚ್ಚಿಕೊಂಡಿದೆ ಎಂಬುದು ಹಿರಿಯ ಹೋರಾಟಗಾರರು ಆಕ್ಷೇಪಿಸುತ್ತಿದ್ದಾರೆ.

ಬೆಳಗಾವಿ, ಕಾರವಾರ, ಬೀದರ್‌, ಕಲಬುರಗಿ ಜಿಲ್ಲೆಗಳ 865 ಹಳ್ಳಿ–ಪಟ್ಟಣಗಳು ತಮಗೆ ಸೇರಬೇಕೆಂದು ಮಹಾರಾಷ್ಟ್ರ ಸರ್ಕಾರ 2004ರಲ್ಲಿ ಸುಪ್ರೀಂನಲ್ಲಿ ದಾವೆ ಹೂಡಿದೆ. ಕೇಂದ್ರ ಸರ್ಕಾರವನ್ನುಮೊದಲ ಹಾಗೂ ಕರ್ನಾಟಕ ಸರ್ಕಾರವನ್ನು ಎರಡನೇ ಪ್ರತಿವಾದಿ ಮಾಡಿದೆ. ಆದರೆ, ಕೇಂದ್ರ ಸರ್ಕಾರ ಈವರೆಗೂಸುಪ್ರೀಂಕೋರ್ಟ್‌ ಮುಂದೆ ಈ ವಿಚಾರವಾಗಿ ಗಟ್ಟಿಯಾದ ನಿಲುವು ತಳೆದಿಲ್ಲ ಎಂಬ ಮಾತು ಕೇಳಿ ಬಂದಿದೆ.

‘ಬೆಳಗಾವಿ ಕರ್ನಾಟಕ ಸ್ವತ್ತು’ ಎಂದು ಕೇಂದ್ರವು ಸ್ಪಷ್ಟವಾದ ನಿಲುವು ಹೊರಹಾಕಿದರೆ ಮಾತ್ರ ರಾಜ್ಯಕ್ಕೆ ಒಳಿತಾಗಲಿದೆ. ಒಂದು ವೇಳೆ ಸುಪ್ರೀಂ ಮಡಿಲಿಗೆ ಈ ಪ್ರಕರಣ ಒಳಪಟ್ಟರೆ ರಾಜ್ಯವು ಮುಂದೆ ಎದುರಿಸಬೇಕಾದ ಅಡತೆಗಳ ಬಗ್ಗೆಯೂ ಈಗ ಎಚ್ಚರಿಕೆ ವಹಿಸಬೇಕಿದೆ ಎಂಬುದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರ ಅಭಿಮತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT