ಶನಿವಾರ, ಜನವರಿ 23, 2021
22 °C

ಬೆಳಗಾವಿ: ರಾಮತೀರ್ಥ ಸ್ನಾನ, ಬುತ್ತಿ ಊಟದ ಸವಿ

ಬಾಲಶೇಖರ ಬಂದಿ Updated:

ಅಕ್ಷರ ಗಾತ್ರ : | |

Prajavani

ಮೂಡಲಗಿ: ಖಡಕ್‌ ಸಜ್ಜಿ ರೊಟ್ಟಿ, ಚಪಾತಿ, ಎಣ್ಣಿಗಾಯಿ ಬದನಿಕಾಯಿ, ಬಾನ, ಗುರೆಳ್ಳ, ಶೇಂಗಾ, ಕಾರದ ಚಟ್ನಿ, ಪುಂಡಿಪಲ್ಯ ಜುನಕದ ವಡೆ, ಮಾದೇಲಿ, ಶೇಂಗಾ ಹೋಳಿಗೆ, ನೆಚ್ಚಕೊಳ್ಳಲಿಕ್ಕೆ ಉಪ್ಪಿನಕಾಯಿ ಹೀಗೆ ತರಾವರಿ ಖಾದ್ಯಗಳ ಘಮಲು... ಹೀಗೆ ತಾಲ್ಲೂಕಿನ ಭೈರನಟ್ಟಿಯ ರಾಮತೀರ್ಥದಲ್ಲಿ ಗುರುವಾರ ಕಳೆಕಟ್ಟಿತ್ತು.

ಕುಟುಂಬಗಳು, ಸ್ನೇಹಿತರ ದಂಡು ವರ್ತುಲಾಕಾರದಲ್ಲಿ ಕುಳಿತು ಹಂಚಿಕೊಂಡು ಉಣ್ಣುವ ದೃಶ್ಯ ಸಾಮಾನ್ಯವಾಗಿತ್ತು. ಪ್ರತಿ ವರ್ಷವೂ ಸಂಕ್ರಮಣದ ದಿನದಂದು ಸಾವಿರಾರು ಜನ ಇಲ್ಲಿ ಸೇರುತ್ತಾರೆ. ಇಲ್ಲಿಯ ರಾಮತೀರ್ಥದಲ್ಲಿ ಸ್ನಾನ ಮಾಡಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಈ ಭಾಗದ ಜನರಲ್ಲಿದೆ.

ರಾಮಾಯಣದಲ್ಲಿ ಸೀತಾಮಾತೆಯನ್ನು ರಾವಣ ಪಹರಿಸಿದಾಗ ಶ್ರೀರಾಮಚಂದ್ರನು ಸೀತಾಮಾತೆಯನ್ನು ಹುಡುಕುವ ದಾರಿಯಲ್ಲಿ ಭೈರನಟ್ಟಿಯಲ್ಲಿ ವಾಸಿಸಿದ್ದ  ಎಂದು ಐತಿಹ್ಯವಿದೆ. ರಾಮನು ವಿಶ್ರಾಂತಿಸಿದ ಸ್ಥಳದಲ್ಲಿ ಲಿಂಗ ಉದ್ಭವಿಸಿದ್ದು, ರಾಮನು ಲಿಂಗಪೂಜೆಯಲ್ಲಿದ್ದಾಗ ಬೇಕಾದ ನೀರು ತರಲು ಜೊತೆಯಲ್ಲಿದ್ದ ಲಕ್ಷ್ಮಣನು ರಾಮನನ್ನು ಜಪಿಸಿ ತನ್ನ ಬಾಣವನ್ನು ಆಕಾಶಕ್ಕೆ ಬಿಟ್ಟಾಗ ಅದು ಕಾಶಿಯ ಗಂಗಾ ನದಿಯಿಂದ ನೀರನ್ನು ತಂದು ಲಿಂಗವನ್ನು ತೋಯಿಸಿತಂತೆ. ಆಗ ಅಲ್ಲಿಯೇ ನೀರಿನ ಹೊಂಡವಾಗಿ ಈಗಿನ ರಾಮತೀರ್ಥವಾಗಿದೆ. ಈ ಬಗ್ಗೆ ಕಥೆ ಹೇಳುವ ಮಾಸ್ತಿ ಕಲ್ಲು ಸಹ ದೇವಾಲಯದ ಆವರಣದಲ್ಲಿ ಈಗಲೂ ಇದೆ.

ಪಾಪನಾಶನಿ: 10 ಅಡಿ ಉದ್ದಗಲ, ಆರು ಅಡಿಯಷ್ಟು ಆಳ ಇರುವ ಇಲ್ಲಿಯ ರಾಮತೀರ್ಥ ಹೊಂಡದಲ್ಲಿ ವರ್ಷದ 12 ತಿಂಗಳು ತಿಳಿಯಾದ ನೀರು ತುಂಬಿಕೊಂಡಿರುತ್ತದೆ. ಬರ ಇದ್ದಾಗಲೂ ಇಲ್ಲಿ ನೀರು ಇರುವುದು ವಿಶೇಷವಾಗಿದೆ. ಇಲ್ಲಿ ಸ್ನಾನ ಮಾಡಿದರೆ ಕಾಶಿ ಸ್ನಾನದ ಪುಣ್ಯ ಬರುತ್ತದೆ ಎನ್ನುವ ನಂಬಿಕೆ ಬೇರೂರಿದ್ದು, ಪ್ರತಿ ವರ್ಷ ಇಲ್ಲಿ ಜರುಗುವ ರಾಮಲಿಂಗೇಶ್ವರ ಜಾತ್ರೆಗೆ ಭಕ್ತರ ದಂಡು ಹರಿದು ಬರುತ್ತದೆ. ‘ಈ ವರ್ಷವೂ ಬಾಳ ಜನ ಬಂದಿತ್ತರೀ, ಎತ್ತಿನ ಗಾಡಿ, ಟ್ರ್ಯಾಕ್ಟರ್‌, ಬೈಕ್‌ಗಳು ಸಾಲುಗಟ್ಟಿದ್ದವು’ ಎಂದು ಸ್ಥಳೀಯರಾದ ಸುರೇಶ ಕತ್ತಿ ತಿಳಿಸಿದರು.

ರಾಮಲಿಂಗೇಶ್ವರ ದೇವಸ್ಥಾನದ ಆವರಣಕ್ಕೆ ಕಾಂಪೌಂಡ್ ಅವಶ್ಯವಿದೆ. ನೆಲಕ್ಕೆ ಟೈಲ್ಸ್‌ ಹಾಕಿಸಬೇಕು ಎಂದು ಭಕ್ತರ ಒತ್ತಾಯವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು