ಸೋಮವಾರ, ಜುಲೈ 4, 2022
24 °C

ಜಾತ್ರೆ, ರಥೋತ್ಸವಕ್ಕೆ ಅನುಮತಿಗೆ ಆಗ್ರಹ: ಶ್ರೀರಾಮಸೇನೆ ಕಾರ್ಯಕರ್ತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ರಾಜ್ಯದಾದ್ಯಂತ ಜಾತ್ರೆ, ಪಲ್ಲಕ್ಕಿ ಉತ್ಸವ, ರಥೋತ್ಸವ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡಬೇಕು’ ಎಂದು ಆಗ್ರಹಿಸಿ ಶ್ರೀರಾಮಸೇನೆ ಕಾರ್ಯಕರ್ತರು ಇಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅಧ್ಯಕ್ಷ ಪ್ರಮೋದ್ ಮುತಾಲಿಕ್, ‘ಸರ್ಕಾರವು ಕೋವಿಡ್ ನಿರ್ಬಂಧಗಳನ್ನು ತೆರವಗೊಳಿಸಿ ಬಹುತೇಕ ಚಟುವಟಿಕೆಗಳಿಗೆ ಅವಕಾಶ ಕೊಟ್ಟಿದೆ. ಮಾರುಕಟ್ಟೆ, ಪಬ್, ಕ್ಲಬ್, ಸಿನಿಮಾ ಮಂದಿರ, ಶಾಲಾ–ಕಾಲೇಜುಗಳಿಗೆ ವಿನಾಯಿತಿ ನೀಡಿದೆ. ಎಲ್ಲ ಚಟುವಟಿಕೆಗಳೂ ನಡೆಯುತ್ತಿವೆ. ಆದರೆ, ಹಿಂದೂ ಧರ್ಮದ ಧಾರ್ಮಿಕ ಕಾರ್ಯಕ್ರಮಗಳಿಗೆ ನಿರ್ಬಂಧ ಮುಂದುವರಿಸಿರುವುದು ಸರಿಯಲ್ಲ’ ಎಂದು ತಿಳಿಸಿದರು.

‘ಸಾಮಾನ್ಯವಾಗಿ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗಳಲ್ಲಿ ರೈತರು, ಕಾರ್ಮಿಕರು, ಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರಿಗಳು ಸೇರಿದಂತೆ ಲಕ್ಷಾಂತರ ಜನರ ಉಪ ಜೀವನ ಅಡಗಿದೆ. ಆದಾಗ್ಯೂ ನಿರ್ಬಂಧ ವಿಧಿಸಿರುವುದು ಸರಿಯಲ್ಲ. ಹಿಂದುತ್ವದ ಹೆಸರು ಹೇಳುವ ಬಿಜೆಪಿಯವರಿಗೆ ಗೊತ್ತಾಗುವುದಿಲ್ಲವೇ? ರಾಜಕೀಯ ಸಭೆ, ಮೆರವಣಿಗೆಗಳನ್ನು ನಡೆಸುತ್ತೀರಾದರೆ ಜಾತ್ರೆಗೆ ಮಾತ್ರ ನಿರ್ಬಂಧವೇಕೆ?’ ಎಂದು ಆಕ್ರೋಶದಿಂದ ಕೇಳಿದರು.

‘ಕೋವಿಡ್‌ನಿಂದ ಉಳಿಸಲು ಹೋಗಿ ಜನರನ್ನು ಸಾಲ, ಹಸಿವು ಹಾಗೂ ನಿರುದ್ಯೋಗದಿಂದ ಕೊಲ್ಲುತ್ತಿದ್ದೀರಿ. ಎರಡು ವರ್ಷಗಳಿಂದ ತತ್ತರಿಸಿರುವ ಜನರ ಹೊಟ್ಟೆ ಮೇಲೆ ಕಾಲಿಡುತ್ತಿರುವ ಸರ್ಕಾರದ ನಡೆಗೆ ಧಿಕ್ಕಾರವಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಈ ತಿಂಗಳು ರಾಜ್ಯದಾದ್ಯಂತ ವಿವಿಧ ಜಾತ್ರೆಗಳು ನಡೆಯುತ್ತವೆ. ಸರ್ಕಾರ ಕೂಡಲೇ ಜಾತ್ರೆಗಳಿಗೆ, ರಥೋತ್ಸವಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ್ ಕೋಕಿತಕರ ಹಾಗೂ ಕಾರ್ಯಾಧ್ಯಕ್ಷ ವಿನಯ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು