ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕದ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪ
Last Updated 5 ಡಿಸೆಂಬರ್ 2020, 10:26 IST
ಅಕ್ಷರ ಗಾತ್ರ

ಬೆಳಗಾವಿ: ‘ಉತ್ತರ ಕರ್ನಾಟಕದ ಬಗ್ಗೆ ರಾಜ್ಯ ಸರ್ಕಾರಕ್ಕೆ ಕಾಳಜಿ ಇಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಪಿಸಿದರು.

ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಉತ್ತರ ಕರ್ನಾಟಕದ ಜನರ ಸಮಸ್ಯೆಗಳ ನಿವಾರಣೆಗೆ ಸ್ಪಂದಿಸಲು ಸುವರ್ಣ ವಿಧಾನನಸೌಧ ನಿರ್ಮಿಸಲಾಯಿತು. ಆದರೆ, ಅದನ್ನು ಆ ಉದ್ದೇಶಕ್ಕೆ ಬಳಸಲಾಗುತ್ತಿಲ್ಲ. ಈ ವಿಷಯದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ವಾಗ್ದಾಳಿ ನಡೆಸಿದರು.

‘ಈ ಸರ್ಕಾರ ಬೆಂಗಳೂರು, ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ, ವಿಧಾನಸೌಧದ ಕಚೇರಿ ಬಿಟ್ಟು ಬೇರೆಲ್ಲೂ ಹೋಗಿಲ್ಲ. ಭೀಕರ ಪ್ರವಾಹದಿಂದ ಮನೆಗಳು ಮುಳುಗಿ ಹೋಗಿವೆ. ಸಾವಿರಾರು ಮಂದಿ ಸಂತ್ರಸ್ತರಾಗಿದ್ದಾರೆ. ಅವರಿಗೆ ಸೂರು ಕಲ್ಪಿಸಲು ಸರ್ಕಾರಕ್ಕೆ ಆಗಿಲ್ಲ. ಪರಿಹಾರವನ್ನೂ ಕೊಟ್ಟಿಲ್ಲ. ವಿಧಾನಮಂಡಲ ಅಧಿವೇಶನದಲ್ಲಿ ಚರ್ಚಿಸಿ ಸಂತ್ರಸ್ತರಿಗೆ ನ್ಯಾಯ ಕಲ್ಪಿಸಲಾಗುವುದು ಎಂದು ಹೇಳಿದ್ದರು. ಆದರೆ, ಸ್ಪಂದನೆ ದೊರೆತಿಲ್ಲ. ಇಲ್ಲಿ ಅಧಿವೇಶನ ನಡೆಸಿ, ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲಿಗೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ನಡೆಸುತ್ತಿದ್ದಾರೆ’ ಎಂದು ಟೀಕಿಸಿದರು.

‘ಸುವರ್ಣ ವಿಧಾನಸೌಧ ಕಟ್ಟಿಸಿದ್ದು ನಾವು ಎಂದು ಹೇಳಿಕೊಂಡು ಓಡಾಡುವ ಬೆಳಗಾವಿಯ ನಾಯಕರು ಈಗ ಎಲ್ಲಿದ್ದಾರೆ, ಇಲ್ಲಿ ಅಧಿವೇಶನ ನಡೆಸದಿರುವ ಬಗ್ಗೆ ಅವರೇಕೆ ದನಿ ಎತ್ತುತ್ತಿಲ್ಲ’ ಎಂದು ಕೇಳಿದರು.

‘ಬಿಜೆಪಿ ಸರ್ಕಾರವು, ಒಂದು ಸಮಾಜ ಗಮನದಲ್ಲಿಟ್ಟುಕೊಂಡು ‌ಗೋ ಹತ್ಯೆ ನಿಷೇಧ ಮಾಡಲು ಹೊರಟಿದೆ. ವಯಸ್ಸಾದ ಗೋವುಗಳನ್ನು ಯಾರು ಖರೀದಿಸುತ್ತಾರೆ. ಗೋ ಹತ್ಯೆ ನಿಷೇಧ ಜಾರಿ ಮಾಡಲಿ’ ನೋಡೋಣ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT