ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಅಂಗನವಾಡಿ ಕೇಂದ್ರಗಳಿಗೇ ‘ಅಪೌಷ್ಟಿಕತೆ’

ಸೌಲಭ್ಯಗಳ ಕೊರತೆಯಿಂದ ಬಳಲುತ್ತಿವೆ; ಸುಧಾರಣೆಗೆ ದೊರೆತಿಲ್ಲ ಒತ್ತು
Last Updated 15 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಬೆಳಗಾವಿ: ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರನ್ನು ಅಪೌಷ್ಟಿಕತೆಯಿಂದ ದೂರ ಮಾಡುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಆರಂಭಿಸಲಾಗಿರುವ ಅಂಗನವಾಡಿ ಕೇಂದ್ರಗಳು, ಸೌಲಭ್ಯಗಳ ಕೊರತೆಯಿಂದಾಗಿ ಅಪೌಷ್ಟಿಕತೆಗೆ ಒಳಗಾಗಿರುವುದು ಕಂಡುಬಂದಿದೆ.

ಬಹುತೇಕ ಅಂಗನವಾಡಿಗಳು ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿವೆ. ಇದರ ಪರಿಣಾಮ ಫಲಾನುಭವಿಗಳ ಮೇಲೆ ಉಂಟಾಗುತ್ತಿದೆ. ಮಕ್ಕಳಿಗೆ ಕಲಿಸುವ ಜಾಗದಲ್ಲೇ ಅಡುಗೆ ತಯಾರಿಸುವ ಅಸುರಕ್ಷಿತ ವಾತಾವರಣವೂ ಇದೆ.

1,485 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ!
ಜಿಲ್ಲೆಯಲ್ಲಿ ಪ್ರಸ್ತುತ 5,331 ಅಂಗನವಾಡಿ ಕೇಂದ್ರಗಳಿವೆ. ಈ ಪೈಕಿ 59 ಮಿನಿ ಕೇಂದ್ರಗಳಾಗಿವೆ. 3,181ಕ್ಕೆ ಸ್ವಂತ ಕಟ್ಟಡವಿದೆ. ಬರೋಬ್ಬರಿ 1,485 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. 112 ಪಂಚಾಯ್ತಿ, 207 ಸಮುದಾಯ (ದೇವಸ್ಥಾನ, ಸಮುದಾಯ ಭವನ ಮೊದಲಾದವು), 2 ಯುವಕ ಮಂಡಳ, 6 ಮಹಿಳಾ ಮಂಡಳ, 270 ಸರ್ಕಾರಿ ಶಾಲೆ 68 ಬಾಡಿಗೆರಹಿತ ಇತರ ಕಟ್ಟಡಗಳಲ್ಲಿ ನಡೆಯುತ್ತಿವೆ. ಕೆಲವು ಕಡೆಗಳಲ್ಲಿ ಅನುಪಯುಕ್ತ ಅಥವಾ ಹಳೆಯ ಕಟ್ಟಡಗಳನ್ನು ಕಂದಮ್ಮಗಳು ಕಲಿಯುವ ಕೇಂದ್ರಗಳಿಗೆ ನೀಡಲಾಗಿದೆ! ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ಪ್ರಕಾರ, 300 ಕೇಂದ್ರಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ!‌ ಶುದ್ಧ ಕುಡಿಯುವ ನೀರು ಪೂರೈಕೆ ಸೇರಿದಂತೆ ಸಮರ್ಪಕ ಮೂಲಸೌಕರ್ಯಗಳಿಲ್ಲ.

ದೇಗುಲವೇ ಸೂರು
ಬೆಳಗಾವಿ ನಗರದ ಮಹಾದ್ವಾರ ರಸ್ತೆಯ 3ನೇ ಕ್ರಾಸ್‌ನಲ್ಲಿ ಅಂಗನವಾಡಿ ಕೇಂದ್ರಕ್ಕೆ ಜ್ಞಾನೇಶ್ವರ ಮಾವುಲಿ ವಿಠ್ಠಲ ರಖುಮಾಯಿ ಮಂದಿರವೇ ಸೂರಾಗಿದೆ. ಹೋದ ವರ್ಷ ಅತಿವೃಷ್ಟಿ ವೇಳೆ ಕೇಂದ್ರಕ್ಕೆ ಹಾನಿಯಾಗಿತ್ತು. ದುರಸ್ತಿ ಇಂದಿಗೂ ಮುಗಿದಿಲ್ಲ. ಇಂತಹ ಉದಾಹರಣೆಗಳು ಜಿಲ್ಲೆಯಾದ್ಯಂತ ಸಾಕಷ್ಟಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರ ತವರಾದ ಜಿಲ್ಲೆಯಲ್ಲೇ ಅವ್ಯವಸ್ಥೆ ತಾಂಡವವಾಡುತ್ತಿದೆ.

ಕೆಲವು ಸುಧಾರಣೆಗೆ ತೆರೆದುಕೊಂಡಿವೆ; ಅಭಿವೃದ್ಧಿ ಕಂಡಿವೆ.
‘ಹಿಂದಕ್ಕೆ ಹೋಲಿಸಿದರೆ ಈಗ ಕೇಂದ್ರಗಳ ಸ್ಥಿತಿ ಸುಧಾರಿಸಿದೆ. ಪ್ರಸ್ತುತ, ಕೋವಿಡ್–19 ಕಾರಣದಿಂದಾಗಿ ದಾಖಲಾತಿಯ ಶೇ 25ರಷ್ಟು ಮಕ್ಕಳಿಗೆ ಅವಕಾಶ ಕೊಡುವಂತೆ ಮಾರ್ಗಸೂಚಿ ಇದೆ. ಅದನ್ನು ಪಾಲಿಸಲಾಗುತ್ತಿದೆ. ಒಮ್ಮೆ ಬಂದ ಮಗು 4 ದಿನ ಬಿಟ್ಟು ಕೇಂದ್ರಕ್ಕೆ ಬರುತ್ತದೆ. ನಿಗದಿತ ಪೌಷ್ಟಿಕ ಆಹಾರವನ್ನು ಮನೆಗೇ ನೀಡಲಾಗುತ್ತಿದೆ. ಕೇಂದ್ರದಲ್ಲಿ ಸೇವನೆಗೆ ಸದ್ಯಕ್ಕೆ ಅವಕಾಶವಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಸವರಾಜ ವರವಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಸ್ತಾವ ಸಲ್ಲಿಸಲಾಗಿದೆ
‘ಜಿಲ್ಲಾ ಪಂಚಾಯ್ತಿಯಿಂದ ಗ್ರಾಮ ಪಂಚಾಯ್ತಿಗಳ ಮೂಲಕ 14ನೇ ಹಣಕಾಸು ಯೋಜನೆಯಲ್ಲಿ, ಕೇಂದ್ರಗಳಿಗೆ ಚಿತ್ರ ಬಿಡಿಸುವುದು, ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು, ಬಾಲಸ್ನೇಹಿ ಶೌಚಾಲಯಗಳ ನಿರ್ಮಾಣ ಮೊದಲಾದ ಕಾರ್ಯ ನಡೆಯುತ್ತಿದೆ. 300 ಕೇಂದ್ರಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ. ಕಟ್ಟಿಸಿಕೊಡುವಂತೆ ಪ್ರಸ್ತಾವ ಸಲ್ಲಿಸಲಾಗಿದೆ. ಕೆಲವೆಡೆ ನಿವೇಶನದ ಸಮಸ್ಯೆ ಇದೆ. 75 ಕಾರ್ಯಕರ್ತೆಯರು ಹಾಗೂ 165 ಸಹಾಯಕಿಯರ ಹುದ್ದೆಗಳು ಖಾಲಿ ಇದೆ. ಜಿಲ್ಲಾಧಿಕಾರಿ ಕಚೇರಿ ಮಟ್ಟದಲ್ಲಿ ನೇಮಕ ಪ್ರಕ್ರಿಯೆ ನಡೆದಿದೆ’ ಎಂದು ಮಾಹಿತಿ ನೀಡಿದರು.

ಸ್ವಂತ ಕಟ್ಟಡಗಳಿಲ್ಲದೆ ಸೊರಗುತ್ತಿವೆ
ಅಥಣಿ:
ತಾಲ್ಲೂಕಿನಲ್ಲಿ ಸ್ವಂತ ಕಟ್ಟಡವಿಲ್ಲದೆ ದೇವಸ್ಥಾನ ಹಾಗೂ ಸಮುದಾಯ ಭವನದಲ್ಲಿ ಅಂಗನವಾಡಿಗಳನ್ನು ನಡೆಸುತ್ತಿರುವುದು ಕಂಡುಬಂದಿದೆ. 304ರಲ್ಲಿ 107 ದೇವಸ್ಥಾನದ ಆವರಣ, ಸಮುದಾಯ ಭವನ ಹಾಗೂ ಇನ್ನಿತರ ಪಂಚಾಯ್ತಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಆಹಾರ ಪದಾರ್ಥ ಹಾಗೂ ಮೊಟ್ಟೆಗಳ ವಿತರಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರುಗಳಿವೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರ್ಯಕರ್ತೆಯರು ಆಕ್ರೋಶಕ್ಕೆ ಒಳಗಾಗಬೇಕಿದೆ ಎನ್ನಲಾಗುತ್ತಿದೆ.

ಶೌಚಾಲಯ ಇಲ್ಲದಿರುವುದರಿಂದ, ಮಕ್ಕಳು ಬಯಲ್ಲೇ ಮಲ–ಮೂತ್ರ ವಿಸರ್ಜಿಸುತ್ತಾರೆ. ಕುಡಿಯುವ ನೀರಿಗೂ ತತ್ವಾರ ಇದೆ.

ಪುಟಾಣಿಗಳನ್ನು ಆಕರ್ಷಿಸುವ ತಾಣಗಳು
ಮೂಡಲಗಿ:
ತಾಲ್ಲೂಕಿನಲ್ಲಿ 411 ಕೇಂದ್ರಗಳಿದ್ದು, 288ಕ್ಕೆ ಮಾತ್ರ ಸ್ವಂತ ಕಟ್ಟಡಗಳಿವೆ. ಹೊರಗೋಡೆಗಳ ಮೇಲೆ ಪುಟಾಣಿಗಳನ್ನು ಆಕರ್ಷಿಸುವ ಚಿತ್ರಗಳನ್ನು ಬಿಡಿಸಲಾಗಿದೆ. ಉಳಿದ 123 ಕೇಂದ್ರಗಳು ಸಮುದಾಯ ಭವನ, ಗ್ರಾಮ ಪಂಚಾಯ್ತಿ ಕಟ್ಟಡಗಳು ಸೇರಿದಂತೆ ಗ್ರಾಮಗಳಲ್ಲಿ ಲಭ್ಯವಿರುವ ಸ್ಥಳೀಯ ಕಟ್ಟಡಗಳಲ್ಲಿವೆ. ಈಗ, 0ದಿಂದ 3 ವರ್ಷದೊಳಗಿನ 24,423 ಮತ್ತು 3ರಿಂದ 6 ವರ್ಷದೊಳಗಿನ 24,479 ಒಟ್ಟು 48,902 ಮಕ್ಕಳ ದಾಖಲಾತಿ ಇದೆ. 3,981 ಗರ್ಭಿಣಿಯರು ಮತ್ತು 3,835 ಬಾಣಂತಿಯರು ಸೌಲಭ್ಯ ಪಡೆಯುತ್ತಿದ್ದಾರೆ ಎಂದು ಸಿಡಿಪಿಒ ಡಾ.ಉಮಾ ಬಳ್ಳಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಂತ ಹಂತವಾಗಿ ಸ್ವಂತ ಕಟ್ಟಡಗಳನ್ನು ಮಾಡುತ್ತಿದ್ದು, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿಶೇಷ ಗಮನ ನೀಡಿದ್ದಾರೆ. ಪ್ರಧಾನಮಂತ್ರಿ ರಾಷ್ಟ್ರೀಯ ಪೌಷ್ಟಿಕ ಮತ್ತು ಆಹಾರ ಮತ್ತು ಪೋಷಣ ಅಭಿಯಾನ ನಡೆಸಲಾಗುತ್ತಿದೆ. ಸಾಮೂಹಿಕ ಸೀಮಂತ, ಮಕ್ಕಳ ಹುಟ್ಟುಹಬ್ಬ ಆಚರಿಸಲಾಗುತ್ತಿದೆ. ಮಕ್ಕಳ ದಾಖಲಾತಿ ಸುಧಾರಿಸುತ್ತಿದೆ’ ಎನ್ನುತ್ತಾರೆ ಅವರು.

ನಿರ್ಮಿಸಲು ಸೂಚನೆ
ಸವದತ್ತಿ:
ತಾಲ್ಲೂಕಿನಲ್ಲಿ 343 ಕೇಂದ್ರಗಳಿವೆ. 26 ಬಾಡಿಗೆ ಹಾಗೂ 18 ಇತರ ಕಟ್ಟಡಗಳಲ್ಲಿವೆ. 40ಕ್ಕೂ ಹೆಚ್ಚು ದುರಸ್ತಿ ಬಯಸುತ್ತಿವೆ. ಬಹಳ ಶಿಥಿಲಾವಸ್ಥೆಯಲ್ಲಿರುವ 6 ಕೇಂದ್ರಗಳನ್ನು ನೆಲಸಮಗೊಳಿಸಿ ಪ್ರವಾಹ ಪರಿಹಾರ ನಿಧಿಯಲ್ಲಿ ನೂತನ ಕಟ್ಟಡ ನಿರ್ಮಿಸುವಂತೆ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಸೂಚಿಸಿದ್ದಾರೆ. ಆಹಾರ ವಿತರಣೆಯಲ್ಲಿ ಲೋಪಗಳಿವೆ ಎಂಬ ದೂರುಗಳಿವೆ.

ಸಮುದಾಯ ಭವನದಲ್ಲಿ
ರಾಯಬಾಗ:
ತಾಲ್ಲೂಕಿನಲ್ಲಿ 488 ಕೇಂದ್ರಗಳಲ್ಲಿ 325 ಸ್ವಂತ ಕಟ್ಟಡ ಹೊಂದಿವೆ. ಕೆಲವು ಅಂಗನವಾಡಿ ಕೇಂದ್ರಗಳು ಸಮುದಾಯ ಭವನಗಳನ್ನೇ ಅವಲಂಬಿಸಿವೆ. ಕೆಲವೆಡೆ ನಿವೇಶನ ಕೊರತೆ ಎದುರಾಗಿದೆ. ‘ಬಾಡಿಗೆ ಪಡೆದಿದ್ದರೂ ಮಕ್ಕಳಿಗೆ ತೊಂದರೆ ಆಗದಂತೆ ನಡೆಸುತ್ತಿದ್ದೇವೆ. 5 ಕಟ್ಟಡಗಳು ನಿರ್ಮಾಣದ ಹಂತದಲ್ಲಿದ್ದು, ಕಾಮಗಾರಿ ಮುಗಿದ ತಕ್ಷಣವೇ ಅವುಗಳನ್ನು ಬಳಕೆ ಮಾಡಿಕೊಳ್ಳುತ್ತೇವೆ’ ಎಂದು ಸಿಡಿಪಿಒ ಸಂತೋಷ ಕುಮಾರ ಕಾಂಬಳೆ ತಿಳಿಸಿದರು.

ಆಹಾರ ಧಾನ್ಯ ವಿತರಣೆಯದ್ದೆ ಸಮಸ್ಯೆ
ಚನ್ನಮ್ಮನ ಕಿತ್ತೂರು:
ನೂತನ ಕಿತ್ತೂರು ತಾಲ್ಲೂಕಿನ 45 ಗ್ರಾಮಗಳಲ್ಲಿ 141 ಕೇಂದ್ರಗಳಿವೆ. ಇವುಗಳಲ್ಲಿ ಕೆಲವು ಕಟ್ಟಡಗಳು ಸಮುದಾಯ ಭವನ, ಬಾಡಿಗೆ ಕಟ್ಟಡಗಳಲ್ಲಿ ನಡೆಸಲಾಗುತ್ತಿದೆ. ಕೆಲವೆಡೆ ಶೌಚಾಲಯಗಳಿದ್ದರೂ ಉಪಯೋಗಕ್ಕೆ ಬಾರದಂತಿವೆ.

ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಬಗ್ಗೆಯೂ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಮಕ್ಕಳು ನಲಿದಾಡುವ ಈ ಕೇಂದ್ರಗಳಲ್ಲಿ ಹಲವು ಕೇಂದ್ರಗಳು ಸುಣ್ಣ–ಬಣ್ಣ ಕಂಡು ಅನೇಕ ವರ್ಷಗಳಾಗಿವೆ. ಈ ಬಗ್ಗೆ ಸಾರ್ವಜನಿಕರು ಸಿಡಿಪಿಒ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅನೇಕ ಕಡೆಗಳಲ್ಲಿ ಮಕ್ಕಳು, ಬಾಣಂತಿಯರಿಗೆ ಸಮರ್ಪಕ ಆಹಾರಧಾನ್ಯ ಮತ್ತು ಮೊಟ್ಟೆ ವಿತರಿಸುತ್ತಿಲ್ಲ. ಅಧಿಕಾರಿಗಳಿಗೆ ಈ ಬಗ್ಗೆ ಅರಿವಿದ್ದರೂ ಮೌನವಾಗಿರುವುದು ಅನುಮಾನಕ್ಕೆ ಕಾರಣವಾಗಿದೆ’ ಎನ್ನುವುದು ಜನರ ದೂರಾಗಿದೆ.

ಹಳೆಯ ಕಟ್ಟಡಗಳಲ್ಲಿ ಸೌಲಭ್ಯಗಳಿಲ್ಲ
ಖಾನಾಪುರ:
ತಾಲ್ಲೂಕಿನಲ್ಲಿ 368 ಕೇಂದ್ರಗಳಿವೆ. 3 ರಿಂದ 6 ವರ್ಷದ ಮಕ್ಕಳ ಸಂಖ್ಯೆ ಆಧಾರದ ಮೇಲೆ ಹೊಸದಾಗಿ 20 ಅಂಗನವಾಡಿಗಳನ್ನು ಪ್ರಾರಂಭಿಸಲು ಪ್ರಸ್ತಾವ ಸಲ್ಲಿಸಲಾಗಿದೆ. 241ಕ್ಕೆ ಸ್ವಂತ ಕಟ್ಟಡಗಳಿವೆ. ಇನ್ನುಳಿದವು ಬಾಡಿಗೆ ಕಟ್ಟಡ, ಸಮುದಾಯ ಭವನ ,ದೇವಸ್ಥಾನ, ಶಾಲೆ ಮತ್ತು ಇತರ ಸಾರ್ವಜನಿಕ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಸ್ವಂತ ಕಟ್ಟಡಗಳಲ್ಲಿ ಸೌಕರ್ಯಗಳಿವೆ. ಆದರೆ, ಹತ್ತು ವರ್ಷಕ್ಕೂ ಹಳೆಯ ಕಟ್ಟಡಗಳಲ್ಲಿ ಈ ಸೌಲಭ್ಯಗಳಿಲ್ಲ. ಬಹುತೇಕ ಕಡೆ ಶುದ್ಧ ಕುಡಿಯುವ ನೀರಿನ ಸೌಲಭ್ಯವಿಲ್ಲ.

ಸಮಾದೇವಿ ಗಲ್ಲಿ ಮತ್ತು ವಿಠೋಬಾದೇವ ಗಲ್ಲಿಗಳ ಕೇಂದ್ರಗಳು ದೇವಸ್ಥಾನದಲ್ಲಿವೆ. ಧಾರ್ಮಿಕ ಸ್ಥಳವಾದ್ದರಿಂದ ಅಲ್ಲಿ ಮೊಟ್ಟೆ ಬೇಯಿಸಿ ನೀಡಲು ವ್ಯವಸ್ಥಾಪನಾ ಸಮಿತಿ ಅವಕಾಶ ಕೊಡುವುದಿಲ್ಲ. ಹೀಗಾಗಿ ಈ ಎರಡೂ ಕೇಂದ್ರಗಳ ಫಲಾನುಭವಿಗಳ ಮನೆಗಳಿಗೇ ಮೊಟ್ಟೆ ಕೊಡಲಾಗುತ್ತಿದೆ.

ಮರು ನಿರ್ಮಾಣ
ಚಿಕ್ಕೋಡಿ:
ತಾಲ್ಲೂಕಿನಲ್ಲಿ 243 ಕೇಂದ್ರಗಳಲ್ಲಿ, 121ಕ್ಕೆ ಮಾತ್ರ ಸ್ವಂತ ಕಟ್ಟಡ ಇವೆ. 7 ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಪ್ರತ್ಯೇಕ ಅಡುಗೆ ಕೋಣೆ, ದಾಸ್ತಾನು ಕೊಠಡಿಗಳಿವೆ. ಶಿಥಿಲಗೊಂಡಿದ್ದ 21 ಕೇಂದ್ರಗಳನ್ನು ನೆಲಸಮಗೊಳಿಸಿ, ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ ತಲಾ ₹ 17 ಲಕ್ಷ ವೆಚ್ಚದಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಗೋಡೆಗಳಿಗೆ ಆಕರ್ಷಕ ಚಿತ್ರ ಬಿಡಿಸಲಾಗುವುದು ಎಂದು ಸಿಡಿಪಿಒ ದೀಪಾ ಕಾಳೆ ತಿಳಿಸಿದರು.

ಸ್ವಂತ ಕಟ್ಟಡ ಇಲ್ಲವೇ ಇಲ್ಲ!
ಗೋಕಾಕ:
ಇಲ್ಲಿನ ಆಯ್ದ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಕೇಂದ್ರಗಳು ಖಾಸಗಿ ಕಟ್ಟಡಗಳಲ್ಲಿವೆ. ಸ್ವಂತ ಕಟ್ಟಡವುಳ್ಳ ಕೇಂದ್ರಗಳು ಇಲ್ಲವೇ ಇಲ್ಲ. ವಾರ್ಡ್‌ ನಂ. 29ರರಲ್ಲಿ ಸಿದ್ಧೇಶ್ವರ ಜಾತ್ರಾ ಟ್ರಸ್ಟ್ ಸಮಿತಿ ಒಡೆತನದ ಕಟ್ಟಡದಲ್ಲಿ ಬಹಳ ವರ್ಷಗಳಿಂದ ನಡೆಯುತ್ತಿದೆ. ಒಂದೇ ಕೊಠಡಿ ಇದ್ದು, ಗರಿಷ್ಠ 25 ಮಕ್ಕಳಿಗೆ ಸ್ಥಳಾವಕಾಶವಿದೆ. ಆದರೆ, 40 ಮಕ್ಕಳು ಇದ್ದಾರೆ. ಕೇಂದ್ರದ ಸಹಾಯಕಿಯರು ಕುಡಿಯುವ ನೀರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಂಡಿದ್ದು, ಪ್ರತ್ಯೇಕ ಅಡುಗೆ, ದಾಸ್ತಾನು ಕೋಣೆ, ಶೌಚಾಲಯವಾಗಲಿ ಇಲ್ಲ. ಸುಧಾರಣೆಗೆ ಅಧಿಕಾರಿಗಳು ಗಮನಹರಿಸಿಲ್ಲ.

(ಪ್ರಜಾವಾಣಿ ತಂಡ: ಎಂ. ಮಹೇಶ, ಪ್ರದೀಪ ಮೇಲಿನಮನಿ, ರಾಮೇಶ್ವರ ಎಂ. ಕಲ್ಯಾಣಶೆಟ್ಟಿ, ಬಾಲಶೇಖರ ಬಂದಿ, ಸುಧಾಕರ ತಳವಾರ, ಪರಶುರಾಮ ನಂದೇಶ್ವರ, ಬಸವರಾಜ ಶಿರಸಂಗಿ, ಆನಂದ ಮನ್ನಿಕೇರಿ, ಪ್ರಸನ್ನ ಕುಲಕರ್ಣಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT