ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯವಿವಾಹ ತಡೆಗಟ್ಟಲು ಕಟ್ಟುನಿಟ್ಟಿನ ಸೂಚನೆ

ಸಲಹಾ ಸಮಿತಿ ಸಭೆ ನಡೆಸಿದ ಜಿಲ್ಲಾಧಿಕಾರಿ
Last Updated 8 ಮಾರ್ಚ್ 2021, 15:58 IST
ಅಕ್ಷರ ಗಾತ್ರ

ಬೆಳಗಾವಿ: ‘ಮಕ್ಕಳ ಗ್ರಾಮಸಭೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಡೆಸಲು ಅನುಕೂಲ ಆಗುವಂತೆ ನವೆಂಬರ್‌ನಲ್ಲಿ ದಿನಾಂಕ ನಿಗದಿಪಡಿಸಲಾಗುವುದು. ಅಂದು ಜಿಲ್ಲೆಯ ಎಲ್ಲ ಗ್ರಾಮ ಪಂಚಾಯ್ತಿಗಳಲ್ಲಿ ಗ್ರಾಮಸಭೆ ನಡೆಸುವ ಬಗ್ಗೆ ಜಿ.ಪಂ. ಸಿಇಒ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ಇಲ್ಲಿ ಸೋಮವಾರ ನಡೆದ ಮಕ್ಕಳ ಸಹಾಯವಾಣಿಯ ಸಲಹಾ ಸಮಿತಿ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಬಾಲ್ಯವಿವಾಹ ತಡೆಗಟ್ಟುವುದಕ್ಕೆ ಸಂಬಂಧಿಸಿದಂತೆ ಹಾಗೂ ಶಿಕ್ಷೆಯ ಕುರಿತು ಮಾಹಿತಿ ಫಲಕಗಳನ್ನು ಹಾಕಲು ಕ್ರಮ ಕೈಗೊಳ್ಳಲಾಗುವುದು. ಬಾಲ್ಯವಿವಾಹ ಪ್ರಕರಣ ಕಂಡುಬಂದಾಗ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಬಾಲ್ಯ ವಿವಾಹ ನಿಷೇಧಾಧಿಕಾರಿ ಅದಕ್ಕೆ ತಡೆಯಾಜ್ಞೆ ತರಬೇಕು. ಪ್ರಕರಣ ಕಂಡುಬಂದಾಗ ಸಿಡಿಪಿಒಗಳು ತಕ್ಷಣವೇ ಮುಂದಾಳತ್ವ ವಹಿಸಿಕೊಂಡು ಸಂಬಂಧಿಸಿದ ಇಲಾಖೆಗಳ ಸಮನ್ವಯದ ಜೊತೆಗೆ ಬಾಲ್ಯವಿವಾಹ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ಇದಕ್ಕೆ ಜಿಲ್ಲಾಡಳಿತದಿಂದ ಅಗತ್ಯ ನೆರವು ನೀಡಲಾಗುವುದು’ ಎಂದು ಹೇಳಿದರು.

ವಿಳಂಬ ಮಾಡಿದರೆ ಕ್ರಮ:

‘ಎಲ್ಲ ಅಂಗನವಾಡಿ ಕೇಂದ್ರಗಳ ಮುಂದೆ ಸಹಾಯವಾಣಿ ಫಲಕಗಳನ್ನು ಅಳವಡಿಸಬೇಕು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತಕ್ಷಣ ದಾಖಲಿಸುವಂತೆ ಪೊಲೀಸ್ ಇಲಾಖೆಗೆ ಈಗಾಗಲೇ ತಿಳಿಸಲಾಗಿದೆ. ಆದಾಗ್ಯೂ ಪ್ರಕರಣ ದಾಖಲಿಸಲು ವಿನಾಕಾರಣ ವಿಳಂಬ ಮಾಡಿದರೆ ಸಂಬಂಧಿಸಿದವರ ಮೇಲೆ
ಕ್ರಮಕ್ಕೆ ಸೂಚನೆ ನೀಡಲಾಗುವುದು’ ಎಂದರು.

‘ಶಾಲೆಗಳ ಗೋಡೆಗಳ ಮೇಲೆ ಮಕ್ಕಳ ಸಹಾಯವಾಣಿ ಕುರಿತು ಅರಿವು ಮೂಡಿಸುವಂತಹ ಬರಹಗಳನ್ನು ಬರೆಸಬೇಕು. ಬಾಲಕಾರ್ಮಿಕ ಪದ್ಧತಿಗೆ ಕಡಿವಾಣ ಹಾಕಲು ಕೈಗಾರಿಕೆ ಮತ್ತು ಕಾರ್ಖಾನೆಗಳ ಮೇಲೆ ನಿಯಮಿತವಾಗಿ ದಾಳಿ ನಡೆಸಿ ಪರಿಶೀಲಿಸಬೇಕು. ಬಾಲಕಾರ್ಮಿಕರನ್ನು ನೇಮಿಸಿರುವುದು ಕಂಡುಬಂದರೆ ಸಂಸ್ಥೆಗಳ ಪರವಾನಗಿ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಹೆಚ್ಚಾಗಿ ಹಮ್ಮಿಕೊಳ್ಳಿ:

‘ಕೋವಿಡ್ ಹಿನ್ನೆಲೆಯಲ್ಲಿ ಅನೇಕ ಕಾರ್ಯಕ್ರಮಗಳ ಅನುಷ್ಠಾನ ಕುಂಠಿತಗೊಂಡಿದೆ. ಮುಂಬರುವ ದಿನಗಳಲ್ಲಿ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹಮ್ಮಿಕೊಳ್ಳಬೇಕು’ ಎಂದು ತಾಕೀತು ಮಾಡಿದರು.

ಯುನೈಟೆಡ್ ಕಲ್ಯಾಣ ಸಂಸ್ಥೆಯ ಮಕ್ಕಳ ಸಹಾಯವಾಣಿ ಕೇಂದ್ರದ ಸಂಯೋಜಕ ಮಲ್ಲೇಶ್ ಕುಂದರಗಿ, ‘2019ರ ಏಪ್ರಿಲ್‌ನಿಂದ 2021ರ ಜನವರಿವರೆಗೆ ಸಹಾಯವಾಣಿ –1098ರಲ್ಲಿ 6,841 ಕರೆಗಳನ್ನು ಸ್ವೀಕರಿಸಲಾಗಿದೆ. ಒಟ್ಟು 1,855 ಪ್ರಕರಣಗಳಲ್ಲಿ ಮಕ್ಕಳ ಮನವಿಗೆ ಸ್ಪಂದಿಸಲಾಗಿದೆ. ಇದರಲ್ಲಿ 235 ಮಂದಿ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರಾಗಿದ್ದಾರೆ’ ಎಂದು ಮಾಹಿತಿ ನೀಡಿದರು.

ಬಾಲಕಾರ್ಮಿಕ ಯೋಜನೆ ಅನುಷ್ಠಾನದ ಕುರಿತು ಬಾಲಕಾರ್ಮಿಕ ಸಂಸ್ಥೆಯ ಯೋಜನಾ ನಿರ್ದೇಶಕಿ ಜ್ಯೋತಿ ಕಾಂತೆ ತಿಳಿಸಿದರು.

ಯುನೈಟೆಡ್ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಬಿ.ಒ. ತಿಪ್ಪೇಸ್ವಾಮಿ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಆನಂದ ಲೋಬೋ, ಕಾರ್ಮಿಕ ಅಧಿಕಾರಿ ತರನ್ನುಂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT